ನೇಮಕಾತಿ ಮುಂದೂಡಲ್ಲ, ಎನ್‌ಡಿಎ ಪರೀಕ್ಷೆ ಬರೆಯಲು ಮಹಿಳೆಯರಿಗೆ ಈ ವರ್ಷದಿಂದಲೇ ಅವಕಾಶ ನೀಡಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ

ನವದೆಹಲಿ: ಮುಂದಿನ ವರ್ಷದಿಂದ ಮಹಿಳಾ ಅಭ್ಯರ್ಥಿಗಳು ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಪ್ರವೇಶ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮನವಿಗೆ ಸುಪ್ರೀಂಕೋರ್ಟ್ ಬುಧವಾರ ನಿರಾಕರಿಸಿದೆ.
ಪರೀಕ್ಷೆ ಸಂಬಂಧ ಕುಶ್ ಕಲ್ರಾ ಎಂಬುವವರು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಅರ್ಜಿದಾರರ ಪರವಾಗಿ ಹಿರಿಯ ವಕೀಲ ಚಿನ್ಮಯ್ ಪ್ರದೀಪ್ ಶರ್ಮಾ ಅವರು ನ್ಯಾಯಾಲಯದಲ್ಲಿ ಹಾಜರಿದ್ದರು.
ಅರ್ಜಿಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಎಸ್. ಕೆ. ಕೌಲ್ ನೇತೃತ್ವದ ಪೀಠ, ಮೇ 2022ರಲ್ಲಿ ಪರೀಕ್ಷೆಗೆ ಹಾಜರಾದರೆ ಜೂನ್ 2023 ರಲ್ಲಿ ಪ್ರವೇಶ ಪ್ರಕ್ರಿಯೆ ನಡೆಯುತ್ತದೆ. ನಾವು ಒಂದು ವರ್ಷದವರೆಗೆ ವಿಳಂಬ ಮಾಡಲು ಸಾಧ್ಯವಿಲ್ಲ. ನಾವು ಹುಡುಗಿಯರಿಗೆ ಭರವಸೆ ನೀಡಿದ್ದೇವೆ. ನಾವು ಈಗ ಆ ಭರವಸೆಯನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಅಲ್ಲದೆ, ಈ ವರ್ಷವೇ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಪರೀಕ್ಷೆ ಬರೆಯಲು ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ಅದು ಆದೇಶಿಸಿದೆ.
ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸಶಸ್ತ್ರ ಪಡೆಗಳು ಅತ್ಯುತ್ತಮ ಪ್ರತಿಕ್ರಿಯಾ ತಂಡವಾಗಿದ್ದು, ಎನ್‌ಡಿಎಯಲ್ಲಿ ವಿಳಂಬವಿಲ್ಲದೆ ಮಹಿಳೆಯರ ಸೇರ್ಪಡೆಗೆ ಹಾದಿ ಸುಗಮಗೊಳಿಸಲು ಅಗತ್ಯವಾದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಆಶಿಸುತ್ತೇವೆ. ಇದಕ್ಕಾಗಿ ಯುಪಿಎಸ್‌ಸಿ ಸಹಯೋಗದೊಂದಿಗೆ ರಕ್ಷಣಾ ಇಲಾಖೆಯಿಂದ ಅಗತ್ಯವಾದ ಕೆಲಸಗಳನ್ನು ಮಾಡಬೇಕು ಎಂದು ಸುಪ್ರಿಂಕೋರ್ಟ್‌ ಸೂಚಿಸಿದೆ.
ಸಮಸ್ಯೆಗಳು ಅರ್ಥವಾಗುತ್ತದೆ. ಆದರೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ನಿಮಗಿದೆ. ಆಕಾಂಕ್ಷಿಗಳೇ ಪರೀಕ್ಷೆ ಬರೆಯಲು ಮುಂದೆ ಬರುತ್ತಿರುವಾಗ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಈ ಮನವಿಯನ್ನು ಪರಿಗಣಿಸುವುದು ಕಷ್ಟವಾಗುತ್ತದೆ. ಸಶಸ್ತ್ರ ಸೇವೆಗಳು ಅತ್ಯಂತ ಕಷ್ಟಕರ ಸನ್ನಿವೇಶಗಳನ್ನು ನಿಭಾಯಿಸಿವೆ. ತುರ್ತುಪರಿಸ್ಥಿತಿಗಳನ್ನು ಎದುರಿಸುವುದು ಅವರ ತರಬೇತಿಯ ಒಂದು ಭಾಗವಾಗಿದೆ. ಹೀಗಾಗಿ ಈಗಾಗಲೇ ನೀಡಲಾಗಿರುವ ಆದೇಶವನ್ನು ಹಿಂಪಡೆಯುವುದು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ನ್ಯಾಯಪೀಠ ಹೇಳಿದೆ.

ಪ್ರಮುಖ ಸುದ್ದಿ :-   ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣದ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement