ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ಗೆ ಭಾವನಾತ್ಮಕ ಉಡುಗೊರೆ ನೀಡಿ ಅವರ ಅಜ್ಜನ ನೆನಪಿಸಿದ ಪ್ರಧಾನಿ ಮೋದಿ..!

ವಾಷಿಂಗ್ಟನ್‌: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris)​, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್​ ಮಾರಿಸನ್​, ಜಪಾನ್​ ಪ್ರಧಾನಿ ಯೋಶಿಹಿದೆ ಸುಗಾರನ್ನು ಭೇಟಿಯಾಗಿದ್ದಾರೆ. ಮೋದಿಯವರು ಕಮಲಾ ಹ್ಯಾರಿಸ್​, ಯೋಶಿಹಿದೆ ಸುಗಾ ಮತ್ತು ಸ್ಕಾಟ್​ ಮಾರಿಸನ್​ ಅವರಿಗೆ ಉಡುಗೊರೆಗಳನ್ನೂ ನೀಡಿದ್ದಾರೆ. ಅದರಲ್ಲೂ ಭಾರತೀಯ ಮೂಲದವರಾದ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಅವರಿಗೆ ನೀಡಿದ ಉಡುಗೊರೆ ವಿಶೇಷ ಮಹತ್ವ ಪಡೆದಿದೆ.
ಕಮಲಾ ಹ್ಯಾರಿಸ್‌ ತಾಯಿಯ ಊರು ತಮಿಳುನಾಡಿನ ತುಳಸೇಂದ್ರಪುರಂ. ಇವರ ತಾತ ಪಿ.ವಿ.ಗೋಪಾಲನ್​ ಸರ್ಕಾರಿ ಉದ್ಯೋಗಿಯಾಗಿದ್ದು, ಬ್ರಿಟಿಷರ ಆಡಳಿತ ಕಾಲದಲ್ಲಿ ಭಾರತದಲ್ಲಿ ವಿವಿಧ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿಯವರು ಕಮಲಾ ಹ್ಯಾರಿಸ್‌ ಅವರ ಅಜ್ಜ ಪಿ.ವಿ.ಗೋಪಾಲನ್​ ಅವರನ್ನು ಸ್ಮರಿಸುವಂಥ ಭಾವನಾತ್ಮಕ ಉಡುಗೊರೆಯೊಂದನ್ನು ಕಮಲಾ ಅವರಿಗೆ ನೀಡಿದ್ದಾರೆ. ತಾತ ಗೋಪಾಲನ್​​ರಿಗೆ ಸಂಬಂಧಪಟ್ಟ ಹಳೇ ಅಧಿಸೂಚನೆಗಳ ಪ್ರತಿಯನ್ನು ಮರದ ಕರಕುಶಲ ಫ್ರೇಮ್​​ನಲ್ಲಿ ಹಾಕಿ ಮೊಮ್ಮಗಳು ಕಮಲಾ ಹ್ಯಾರಿಸ್​ಗೆ ನೀಡಿದ್ದಾರೆ.
ಕೇಂದ್ರ ಸರ್ಕಾರದಲ್ಲಿ ಉದ್ಯೋಗದಲ್ಲಿದ್ದ ಪಿ.ವಿ.ಗೋಪಾಲನ್ ಜಂಟಿ ಕಾರ್ಯದರ್ಶಿಯಾಗಿದ್ದರು. 1966 ರಲ್ಲಿ ಪಿ.ವಿ.ಗೋಪಾಲನ್ ಅವರನ್ನು ಜಾಂಬಿಯಾದ ನಿರಾಶ್ರಿತರ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಭಾರತ ಸರ್ಕಾರದಿಂದ ನೇಮಿಸಲಾಗಿತ್ತು. ಅದುವರೆಗೂ ಪಿ.ವಿ.ಗೋಪಾಲನ್ ಕೇಂದ್ರ ಸರ್ಕಾರದ ಕಾರ್ಮಿಕ, ಉದ್ಯೋಗ ಮತ್ತು ಪುನರ್ ವಸತಿ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿದ್ದರು. ಈ ಬಗ್ಗೆ ವರ್ಗಾವಣೆಯ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಈಗ ಕಮಲಾ ಹ್ಯಾರಿಸ್ ಗೆ ಗಿಫ್ಟ್ ಆಗಿ ಪ್ರಧಾನಿ ಮೋದಿ ನೀಡಿದ್ದಾರೆ. ಇದರೊಂದಿಗೆ ವಾರಾಣಸಿಯ ಪ್ರಸಿದ್ಧ ಕ್ರಾಫ್ಟ್​ ಎನ್ನಿಸಿರುವ ಗುಲಾಬಿ ಮೀನಾಕಾರಿ (ಬೆಳ್ಳಿ ಗುಲಾಬಿ ಮೀನಾಕ್ಷಿ) ಚೆಸ್​ ಸೆಟ್​​ನ್ನೂ ಕೂಡ ಗಿಫ್ಟ್ ಆಗಿ ಕೊಟ್ಟಿದ್ದಾರೆ. ವಾರಾಣಸಿ ಸೊಬಗನ್ನು ಬಿಂಬಿಸುವ ಈ ಚೆಸ್​​ ಸೆಟ್​ನಲ್ಲಿ ಕರಕುಶಲತೆಯ ಕೌಶಲ್ಯ ಎದ್ದು ಕಾಣುವಂತಿದೆ.
ಆಸ್ಟ್ರೇಲಿಯಾ, ಜಪಾನ್​ ಪ್ರಧಾನಿಗಳಿಗೂ ಗಿಫ್ಟ್​ ನೀಡಿದ ಮೋದಿ..:
ಪ್ರಧಾನಿ ನರೇಂದ್ರ ಮೋದಿ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್​ ಮಾರಿಸನ್​ಗೆ ಬೆಳ್ಳಿ ಗುಲಾಬಿ ಮೀನಾಕಾರಿ (ಬೆಳ್ಳಿ ಗುಲಾಬಿ ಮೀನಾಕ್ಷಿ) ಹಡಗಿನ ಕ್ರಾಫ್ಟ್​​ನ್ನು ಉಡುಗೊರೆ ನೀಡಿದ್ದಾರೆ. ಇದೂ ಕೂಡ ಕಾಶಿಯ ಕಲಾ ವಿಶೇಷದ ಪ್ರತೀಕವಾಗಿದೆ. ಜಪಾನ್​ ಪ್ರಧಾನಿ ಯೋಶಿಹಿದೆ ಅವರಿಗೆ ಬುದ್ಧನ ಶ್ರೀಗಂಧದ ಪ್ರತಿಮೆಯನ್ನು ನೀಡಿದ್ದಾರೆ. ನೀಡಲಾದ ಎಲ್ಲ ಉಡುಗೋರೆಗಳೂ ಕಾಶಿಯನ್ನೇ ಪ್ರತಿಬಿಂಬಿಸುತ್ತವೆ. ವಾರಾಣಸಿ ಭಾರತದ ಪವಿತ್ರ ತಾಣವಾಗಿದ್ದು, ಜಗತ್ತಿನ ಹಳೇ ನಗರಗಳಲ್ಲಿ ಒಂದಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ...| 'ತೃಣಮೂಲ ಕಾಂಗ್ರೆಸ್ಸಿಗಿಂತ ಬಿಜೆಪಿಗೆ ಮತ ಹಾಕುವುದು ಉತ್ತಮ' ಎಂದ ಕಾಂಗ್ರೆಸ್‌ ಹಿರಿಯ ನಾಯಕ...! ಟಿಎಂಸಿ ಕೆಂಡ

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement