ಕರ್ನಾಟಕದಲ್ಲಿ ‘ಚಿತ್ರಮಂದಿರ ಶೇ.100 ಭರ್ತಿಗೆ ಗ್ರೀನ್‌ ಸಿಗ್ನಲ್‌, 6ರಿಂದ12ನೇ ತರಗತಿಗೆ 100 % ಹಾಜರಾತಿಗೆ ಅವಕಾಶ

ಬೆಂಗಳೂರು: ತೀವ್ರ ಬೇಡಿಕೆ ಹಾಗೂ ಒತ್ತಡದ ಹಿನ್ನೆಲೆ ಕೊನೆಗೂ ರಾಜ್ಯದಲ್ಲಿ ಚಿತ್ರಮಂದಿರಗಳ 100 % ಸೀಟು ಭರ್ತಿಗೆ ಸರ್ಕಾರ ಅನುಮತಿ ನೀಡಿದೆ.
ಅಕ್ಟೋಬರ್ 1ರಿಂದ ಚಿತ್ರಮಂದಿರಗಳಲ್ಲಿ ಸಂಪೂರ್ಣ ಸೀಟು ಭರ್ತಿಗೆ ಅವಕಾಶ ಕಲ್ಪಿಸಿದೆ,ಆದರೆ ಕೆಲವೊಂದು ಮಾರ್ಗಸೂಚಿಗಳನ್ನು ಸೂಚಿಸಲಾಗಿದೆ.
ರಾಜ್ಯದಲ್ಲಿ ಪ್ರಸ್ತುತ ಸರಾಸರಿ ಪಾಸಿಟಿವಿಟಿ ದರ ಶೇ.0.66 ಇದೆ. ಅಕ್ಟೋಬರ್ 1ರಿಂದ ಕೋವಿಡ್ ಪಾಸಿಟಿವಿಟಿ ದರ ಶೇ.1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶೇ.100ರಷ್ಟು ಸೀಟುಗಳ ಭರ್ತಿಗೆ ಅವಕಾಶ ನೀಡಲಾಗುವುದು. ಶೇ.1ಕ್ಕಿಂತ ಹೆಚ್ಚಾದರೆ ಶೇ.50ರಷ್ಟು ಭರ್ತಿಗೆ ಹಾಗೂ ಶೇ.2ಕ್ಕಿಂತ ಹೆಚ್ಚಾದರೆ ಚಿತ್ರಮಂದಿರ ಬಂದ್ ಮಾಡಲಾಗುವುದು. ಪಬ್ ಗಳಿಗೂ ಇದೇ ಮಾನದಂಡ ಅನುಸರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಐಇ ತಿಳಿಸಿದ್ದಾರೆ.
ಇಂದು (ಶುಕ್ರವಾರ) ನಡೆದ ಕೋವಿಡ್ ನಿಯಂತ್ರಣ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಸಿಟಿವಿಟಿ ದರ ಶೇಕಡಾ 1ಕ್ಕಿಂಡ ಕಡಿಮೆ ಇರುವ ಜಿಲ್ಲೆಗಳಲ್ಲಿ ಚಿತ್ರಮಂದಿರಗಳ ಎಲ್ಲ ಆಸನಗಳ ಭರ್ತಿಗೆ ಸರ್ಕಾರ ಹಸಿರು ನಿಶಾನೆ ತೋರಿದೆ. ಜೊತೆಗೆ ಥಿಯೆಟರ್ ಪ್ರವೇಶಿಸಲು ಪ್ರೇಕ್ಷಕರು ಕಡ್ಡಾಯವಾಗಿ ಒಂದು ಡೋಸ್‍ ಲಸಿಕೆ ಪಡೆದಿರಬೇಕೆಂದು ಷರತ್ತಿ ವಿಧಿಸಲಾಗಿದೆ ಎಂದರು.
ಇದೇವೇಳೆ ಅಕ್ಟೋಬರ್ 3ರಿಂದ 6ನೇ ತರಗತಿಯಿಂದ ದ್ವಿತೀಯ ಪಿಯು ವರೆಗೆ ಶೇಕಡಾ 100ರಷ್ಟು ಮಕ್ಕಳ ಹಾಜರಾತಿಗೆ ಅವಕಾಶ ಕಲ್ಪಿಸಲಾಗುವುದು.ವಾರದಲ್ಲಿ ಐದು ದಿನ ಶಾಲಾ ಕಾಲೇಜುಗಳನ್ನು ನಡೆಸಲು ನಿರ್ಧರಿಸಲಾಯಿತು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ನೈಟ್ ಕರ್ಫ್ಯೂ ಸಮಯ ಬದಲಾವಣೆ ಮಾಡಲಾಗಿದ್ದು, ಇನ್ನು ಮುಂದೆ ರಾತ್ರಿ 10ರಿಂದ ಮುಂಜಾನೆ 5 ಗಂಟೆವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಅಕ್ಟೋಬರ್ 3ರಿಂದ ಪಬ್‌ಗಳಲ್ಲೂ ನಿರ್ಬಂಧ ತೆರವುಗೊಳಿಸಲಾಗುವುದು ಎಂದು ಅವರು ಘೋಷಿಸಿದರು.
ದಸರಾ ಬಗ್ಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು. ಗಡಿ ಭಾಗದಲ್ಲಿ ಹೆಚ್ಚು ನಿಗಾವಹಿಸಲಾಗುವುದು. ಯಾದಗಿರಿ, ರಾಯಚೂರು, ಕಲಬುರ್ಗಿ ಹಾಗೂ ಮೈಸೂರು ಜಿಲ್ಲೆಯಲ್ಲಿ ಲಸಿಕೆ ಅಭಿಯಾನ ತೀವ್ರಗೊಳಿಸಲು, ಜನರಲ್ಲಿ ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಲಾಗಿದೆ ಎಂದರು.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement