ಸುಪ್ರೀಂ ಕೋರ್ಟ್‌ ಆಕ್ಷೇಪಣೆ ನಂತರ ಕೋರ್ಟ್‌ನ ಅಧಿಕೃತ ಇಮೇಲ್‌ಗಳಲ್ಲಿ ಮೋದಿ ಭಾವಚಿತ್ರ ಕೈಬಿಟ್ಟ ಎನ್‌ಐಸಿ

ಸುಪ್ರೀಂ ಕೋರ್ಟ್‌ ಆಕ್ಷೇಪಣೆ ನಂತರ ಕೋರ್ಟ್‌ನ ಅಧಿಕೃತ ಇಮೇಲ್‌ಗಳಲ್ಲಿ ಮೋದಿ ಭಾವಚಿತ್ರ ಕೈಬಿಟ್ಟ ಎನ್‌ಐಸಿ
ನವದೆಹಲಿ: ಸರ್ವೋಚ್ಚ ನ್ಯಾಯಾಲಯದ ಆಕ್ಷೇಪಣೆಯ ನಂತರ ಸುಪ್ರೀಂ ಕೋರ್ಟಿನ ಅಧಿಕೃತ ಇ ಮೇಲ್‌ಗಳ ಕೆಳ ಅಂಚಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವುಳ್ಳ ಜಾಹಿರಾತು ಬ್ಯಾನರ್‌ಗಳನ್ನು ರಾಷ್ಟ್ರೀಯ ಮಾಹಿತಿ ಕೇಂದ್ರವು (ಎನ್‌ಐಸಿ) ತೆಗೆದು ಹಾಕಿದೆ.
ನ್ಯಾಯಾಂಗದೊಂದಿಗೆ ಈ ಜಾಹಿರಾತು ಚಿತ್ರಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಆಕ್ಷೇಪಿಸಿ ಸುಪ್ರೀಂ ಕೋರ್ಟ್‌ ಎನ್‌ಐಸಿಗೆ ಪತ್ರ ಬರೆದ ನಂತರ ಎನ್‌ಐಸಿ ಮೋದಿ ಭಾವಚಿತ್ರವುಳ್ಳ ಬ್ಯಾನರ್‌ ಅಂಚನ್ನು ಸುಪ್ರೀಂ ಕೋರ್ಟ್‌ನ ಅಧಿಕೃತ ಇ ಮೇಲ್‌ಗಳಿಂದ ತೆಗೆದುಹಾಕಿದೆ ಎಂದು ಬಾರ್‌ ಎಂಡ್‌ ಬೆಂಚ್‌ ವರದಿ ಮಾಡಿದೆ.
ಈ ಕುರಿತು ಸುಪ್ರೀಂ ಕೋರ್ಟ್‌ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ. ಆದರೆ, ಈ ಪ್ರಕಟಣೆಯಲ್ಲಿ ತನ್ನ ಇಮೇಲ್‌ಗಳ ಅಂಚಿಗೆ ಲಗತ್ತಿಸಿದ್ದ ಚಿತ್ರದ ನಿಖರದ ಸ್ವರೂಪದ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ.
ಈ ಬಗೆಗಿನ ವಿವರಣಾ ಪ್ರಕಟಣೆಯಲ್ಲಿ ಸುಪ್ರೀಂ ಕೋರ್ಟ್‌, “ಭಾರತದ ಸುಪ್ರೀಂ ಕೋರ್ಟ್‌ನ ಅಧಿಕೃತ ಇಮೇಲ್‌ಗಳ ಕೆಳಅಂಚಿನಲ್ಲಿ ನ್ಯಾಯಾಂಗದ ಕಾರ್ಯಕ್ಕೆ ಯಾವುದೇ ರೀತಿಯಲ್ಲಿಯೂ ಸಂಬಂಧಪಡದ ಚಿತ್ರವೊಂದನ್ನು ಅಳವಡಿಸಲಾಗಿರುವುದನ್ನು ಸುಪ್ರೀಂ ಕೋರ್ಟ್‌ ರೆಜಿಸ್ಟ್ರಿಗೆ ನಿನ್ನೆ ತಡ ಸಂಜೆ ಗಮನಕ್ಕೆ ತರಲಾಯಿತು. ಸುಪ್ರೀಂ ಕೋರ್ಟ್‌ನಿಂದ ಕಳುಹಿಸಲಾಗುವ ಇಮೇಲ್‌ಗಳಿಂದ ಆ ಚಿತ್ರವನ್ನು ಕೈಬಿಡುವಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಇಮೇಲ್‌ ಸೇವೆಯನ್ನು ಒದಗಿಸುವ ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ ನಿರ್ದೇಶಿಸಲಾಯಿತು,” ಎಂದು ಮಾಹಿತಿ ನೀಡಿದೆ ಎಂದು ವರದಿ ಹೇಳಿದೆ.
ಇದಲ್ಲದೆ ಇಮೇಲ್‌ಗಳಲ್ಲಿ ಸುಪ್ರೀಂ ಕೋರ್ಟ್‌ನ ಚಿತ್ರವನ್ನು ಬಳಸುವಂತೆಯೂ ಸಹ ಸರ್ವೋಚ್ಚ ನ್ಯಾಯಾಲಯವು ಎನ್‌ಐಸಿಗೆ ಸೂಚನೆ ನೀಡಿದ್ದು ಅದರ ಪಾಲನೆಯನ್ನು ಮಾಡಲಾಗಿದೆ. ‌

ಪ್ರಮುಖ ಸುದ್ದಿ :-   ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣದ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement