ಬೆಂಗಳೂರು : ಮೂರು ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘ ಕರೆ ನೀಡಿರುವ ಇಂದಿನ ಭಾರತ್ ಬಂದ್ ಗೆ ಕರ್ನಾಟಕದಲ್ಲಿ ಹಲವು ಸಂಘಟನೆಗಳು ಬೆಂಬಲ ನೀಡಿದರೆ ಇನ್ನೂ ಹಲವು ಸಂಘಟನೆಗಳು ಕೇವಲ ನೈತಿಕ ಬೆಂಬಲವನ್ನಷ್ಟೇ ನೀಡಿವೆ.
ಸಂಯುಕ್ತ ಕಿಸಾನ್ ಮೋರ್ಚಾದ (ಎಸ್‌ಕೆಎಂ) ಸೋಮವಾರ ಭಾರತ್ ಬಂದ್‌ಗೆ ಹಲವಾರು ಸಂಘಟನೆಗಳು ತಮ್ಮ ಬೆಂಬಲವನ್ನು ನೀಡುತ್ತಿದ್ದು, ಮೂರು ‘ವಿವಾದಾತ್ಮಕ’ ಕೃಷಿ ಕಾನೂನುಗಳು ರಾಷ್ಟ್ರಪತಿಗಳ ಒಪ್ಪಿಗೆ ಪಡೆದ ಮೊದಲ ವಾರ್ಷಿಕೋತ್ಸವದ ಅಂಗವಾಗಿ, ಬೆಂಗಳೂರು ನಗರದಲ್ಲಿ ಸಂಚಾರ ವ್ಯತ್ಯಯ ಆಗುವ ಸಾಧ್ಯತೆಯಿದೆ.
ರೈತ ಸಂಘಗಳಲ್ಲದೆ, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ, ಆಲ್ ಇಂಡಿಯಾ ಸೆಂಟರ್ ಆಫ್ ಟ್ರೇಡ್ ಯೂನಿಯನ್ (ಎಐಸಿಟಿಯು), ಆಟೋ-ರಿಕ್ಷಾ ಚಾಲಕರು ಮತ್ತು ರಾಜ್ಯ ಕಾಂಗ್ರೆಸ್ ಘಟಕವು ಪ್ರತಿಭಟನೆಗೆ ತಮ್ಮ ಬೆಂಬಲವನ್ನು ನೀಡಿವೆ.
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಸೋಮವಾರ 8,000 ರಿಂದ 10,000 ರೈತರು, ಹಣ್ಣು ಮತ್ತು ತರಕಾರಿ ಮಾರಾಟಗಾರರು ಆಂದೋಲನಗಳಲ್ಲಿ ಭಾಗವಹಿಸುವ ಸಾಧ್ಯತೆಯಿದೆ ಎಂದು ಹೇಳಿದರು. “ನಾವು ಕೆಆರ್ ಪುರಂ ಮಾರುಕಟ್ಟೆಯಿಂದ ಟೌನ್ ಹಾಲ್ ವರೆಗೆ ಮೆರವಣಿಗೆಯನ್ನು ಕೈಗೊಳ್ಳಲಿದ್ದೇವೆ” ಎಂದು ಅವರು ಹೇಳಿದರು.
ಸೋಮವಾರ ಬೆಳಗ್ಗೆ 8 ರಿಂದ ನಗರದ ಪ್ರವೇಶ ಮತ್ತು ನಿರ್ಗಮನ ಕೇಂದ್ರಗಳಲ್ಲಿ ರೈತರು ರಸ್ತೆಗಳನ್ನು ನಿರ್ಬಂಧಿಸಲು ಯೋಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್.ಕಾಮ್ ವರದಿ ಮಾಡಿದೆ.
ಸಂಘಗಳು ತಮ್ಮ ಬೆಂಬಲಿಗರನ್ನು ಮೈಸೂರು-ಬೆಂಗಳೂರು ರಸ್ತೆ, ಬೆಂಗಳೂರು-ಹೈದರಾಬಾದ್ ರಸ್ತೆ ಮತ್ತು ಬೆಂಗಳೂರು-ಚೆನ್ನೈ ರಸ್ತೆ, ಇತರೆ ಹೆದ್ದಾರಿಗಳಲ್ಲಿ ಜೋಡಿಸುವಂತೆ ಕೇಳಿಕೊಂಡಿದೆ.
ಕರ್ನಾಟಕದಲ್ಲಿ ಭಾರತ್ ಬಂದ್ ಗೆ ಮುಖ್ಯವಾಗಿ ರೈತ ಸಂಘ, ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘ, ದಲಿತ ಸಂಘಟನೆಗಳು, ಕಾರ್ಮಿಕ ಸಂಘಗಳ ಯೂನಿಯನ್, ಗ್ರಾಮೀಣ ಬ್ಯಾಂಕ್ ನೌಕರರ ಸಂಘ, ಕನ್ನಡ ಒಕ್ಕೂಟ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಬೆಂಬಲ ಸೂಚಿಸಿದೆ.
ಪ್ರತಿಭಟನಾ ಜಾಥಾ ನಡೆಸಲು ಯೋಜನೆ ರೂಪಿಸಲಾಗಿದ್ದು, ಬೆಂಗಳೂರಲ್ಲಿ ಹಲವು ಕಡೆಗಳಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ಭಾರತದ ಕಮ್ಯುನಿಸ್ಟ್ ಪಾರ್ಟಿ (ಮಾರ್ಕ್ಸ್ ವಾದಿ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ-ಲೆನಿನಿಸ್ಟ್) ನಂತಹ ಎಡ ಪಕ್ಷಗಳು ಕೂಡ ಬಂದ್ ಗೆ ತಮ್ಮ ಬೆಂಬಲವನ್ನು ವಿಸ್ತರಿಸಿವೆ.
ಬೆಂಗಳೂರು ಟ್ರಾಫಿಕ್ ಪೊಲೀಸರು ಸೋಮವಾರ ಕೆಜಿ ರಸ್ತೆಯಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆ ಮತ್ತು ನೃಪತುಂಗ ರಸ್ತೆ ಮೂಲಕ ಸಂಚಾರವನ್ನು ನಿಷೇಧಿಸಿದ್ದಾರೆ. ಪ್ರತಿಭಟನೆಯನ್ನು ಕಾನೂನುಬದ್ಧವಾಗಿ ನಡೆಸಬಹುದು ಆದರೆ ಪ್ರತಿಭಟನಾಕಾರರು ಸಂಚಾರವನ್ನು ನಿರ್ಬಂಧಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ. ನಗರ ಸಶಸ್ತ್ರ ಮೀಸಲು (ಸಿಎಆರ್), ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಮತ್ತು ನಗರ ಪೊಲೀಸರನ್ನು ಸೋಮವಾರ ಮುಂಜಾನೆಯಿಂದ ನಗರದಾದ್ಯಂತ ನಿಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.
ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ನಾಳೆ ಬಂದ್ ತೀವ್ರವಾಗುವ ಸಾಧ್ಯತೆಯಿದೆ. ಕರಾವಳಿ ಜಿಲ್ಲೆಗಳಲ್ಲಿ ನಾಳೆ ಬಂದ್ ತೀವ್ರವಾಗುವ ಸಾಧಯತೆ ಕಡಿಮೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿಯೂ ಬಂದ್‌ಗೆ ಬೆಂಬಲ ಸೂಚಿಸಲಾಗಿದೆ. ಹೀಗಾಗಿ ಕೆಲವು ಕಡೆ ರಸ್ತೆ ತಡೆಗಳು ಹಾಗೂ ಪ್ರತಿಭಟನೆಗಳು ನಡೆಯುವ ಸಾಧ್ಯತೆಯಿದೆ.
ಬಂದ್ ಗೆ ರಾಜ್ಯ ಹೋಟೆಲ್ ಮಾಲೀಕರ ಸಂಘ, ಬೀದಿ ಬದಿ ವ್ಯಾಪಾರಿಗಳ ಸಂಘ, ಲಾರಿ ಮಾಲೀಕರ ಸಂಘ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರು, ಖಾಸಗಿ ಶಾಲೆ ಹಾಗೂ ಕಾಲೇಜುಗಳ ಒಕ್ಕೂಟ, ಆಟೋ ಚಾಲಕರು ಮತ್ತು ಮಾಲೀಕರ ಸಂಘ, ಟ್ಯಾಕ್ಸಿ ಚಾಲಕರ ಸಂಘ, ಬೆಂಗಳೂರು ವಕೀಲರ ಸಂಘ, ಬಿಎಂಆರ್‌ಸಿಎಲ್ ನೌಕರರು, ಎಪಿಎಂಸಿ ವರ್ತಕರ ಸಂಘಗಳು ನಾಳೆಯ ಬಂದ್‌ಗೆ ನೈತಿಕ ಬೆಂಬಲ ಸೂಚಿಸಿವೆ. ಖಾಸಗಿ ಶಾಲೆ ಹಾಗೂ ಕಾಲೇಜುಗಳ ಒಕ್ಕೂಟವು ಶಾಲೆ ಕಾಲೇಜುಗಳನ್ನು ಬಂದ್ ಮಾಡುವುದಿಲ್ಲ ಎಂದು ಹೇಳಿವೆ, ಬದಲಾಗಿ ಕಪ್ಪು ಪಟ್ಟಿ ಧರಿಸಿ ಬಂದ್‌ಗೆ ಬೆಂಬಲ ಸೂಚಿಸುವುದಾಗಿ ತಿಳಿಸಿದೆ.
ಹೀಗಾಗಿ ನಾಳೆ ಶಾಲೆ, ಕಾಲೇಜುಗಳು ಎಂದಿನಂತೆ ನಡೆಯಲಿದ್ದು, ಸರಕಾರಿ ಹಾಗೂ ಖಾಸಗಿ ಬಸ್ಸುಗಳು ಕೂಡ ಸಂಚಾರವನ್ನು ನಡೆಸಲಿದೆ. ಆಟೋ, ಟ್ಯಾಕ್ಸಿಗಳು ರಸ್ತೆಗೆ ಇಳಿಯುವುದರಿಂದ ಸಾರ್ವಜನಿಕರಿಗೆ ಯಾವುದೇಸಮಸ್ಯೆಯಾಗುವ ಸಾಧ್ಯತೆ ಕಡಿಮೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಬಲವಂತವಾಗಿ ಬಂದ್ ಮಾಡಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಬಂದ್ ಮಾಡುವವರೂ ಸಹ ಶಾಂತಿಯುತವಾಗಿ ಬಂದ್ ಆಚರಿಸುವುದಾಗಿ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ