ಭಾರತ್ ಬಂದ್​: ದೆಹಲಿ ಗಡಿಗಳಲ್ಲಿ ವಾಹನಗಳ ಸಾಲು ಸಾಲು

ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತಸಂಘಟನೆಗಳು ಇಂದು (ಸೋಮವಾರ) ನಡೆಸುತ್ತಿರುವ ಭಾರತ್ ಬಂದ್​ನ ಬಿಸಿ ದೇಶದ ರಾಜಧಾನಿ ದೆಹಲಿಯ ಜನರಿಗೆ ಹೆಚ್ಚಾಗಿ ತಾಗುತ್ತಿದೆ. ಇಂದು ಬೆಳಿಗ್ಗೆಯಿಂದಲೇ ದೆಹಲಿಯ ಗಡಿಭಾಗಗಳಲ್ಲಿ ಭಾರೀ ಪ್ರಮಾಣದ ಟ್ರಾಫಿಕ್​ ಜ್ಯಾಮ್​ಗಳು ಏರ್ಪಟ್ಟಿರುವುದು ವರದಿಯಾಗಿದೆ.
ಸಂಯುಕ್ತ ಕಿಸಾನ್​​ ಮೋರ್ಚಾ ವೇದಿಕೆಯಡಿ 40 ರೈತ ಸಂಘಟನೆಗಳು ಒಟ್ಟಾಗಿ, ಇಂದು ಬೆಳಿಗ್ಗೆ 6 ರಿಂದ ಸಂಜೆ 4 ರವರೆಗೆ ಬಂದ್​ಗೆ ಕರೆ ನೀಡಿವೆ. ಸರ್ಕಾರಿ ಕಚೇರಿಗಳು, ಶಾಲೆ-ಕಾಲೇಜು, ವ್ಯಾಪಾರ-ವಹಿವಾಟುಗಳನ್ನು ನಡೆಸದಂತೆ ಆಗ್ರಹಿಸಿವೆ. ವಿವಾದಿತ ಕಾನೂನುಗಳನ್ನು ಅನುಷ್ಠಾನಗೊಳಿಸಿದರೆ, ಕೃಷಿ ಕ್ಷೇತ್ರವನ್ನು ಖಾಸಗಿ ಕಂಪೆನಿಗಳ ಹಿಡಿತಕ್ಕೆ ಒಳಗಾಗಲಿವೆ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ.
ಇಂದು ಬೆಳಿಗ್ಗೆಯಿಂದಲೇ, ಮುಖ್ಯವಾಗಿ ರೈತರ ಪ್ರತಿಭಟನಾ ಧರಣಿ ನಡೆಯುತ್ತಿರುವ ಘಾಜಿಪುರ ಗಡಿ ಬಳಿಯ ದೆಹಲಿ-ಮೀರತ್​ ಎಕ್ಸ್​ಪ್ರೆಸ್​ವೇ ಬ್ಲಾಕ್​ ಆಗಿತ್ತು. ಇದರಿಂದಾಗಿ ಉತ್ತರ ಪ್ರದೇಶದ ಕಡೆಯಿಂದ ಬರುವ ವಾಹನಗಳು ಸಿಕ್ಕಿಹಾಕಿಕೊಂಡಿದ್ದವು. ದೆಹಲಿಯ ಗುರ್​ಗಾಂವ್​ ಮತ್ತು ನೊಯ್ಡಾ ಗಡಿಗಳಲ್ಲಿಯೂ ಭಾರೀ ಜ್ಯಾಮ್​ ಕಂಡುಬಂದಿದ್ದು, ವಾಹನಗಳ ಸಾಲು ರಸ್ತೆಗಳನ್ನು ಆವರಿಸಿವೆ. ಪಂಜಾಬ್​​ ಮತ್ತು ಹರಿಯಾಣದ ಕಡೆಗಿನ ಶಂಭು ಗಡಿ ಕೂಡ ಬ್ಲಾಕ್​ ಆಗಿದೆ ಎನ್ನಲಾಗಿದೆ.
ಆದಾಗ್ಯೂ ನಗರದ ಒಳಗೆ ಆಟೋರಿಕ್ಷಾಗಳು, ಟ್ಯಾಕ್ಸಿಗಳು ಸಾಮಾನ್ಯದಂತೆಯೇ ಓಡುತ್ತಿವೆ ಮತ್ತು ವ್ಯಾಪಾರ ಮಳಿಗೆಗಳು ತೆರೆದಿವೆ. ಹಲವು ವ್ಯಾಪಾರಿ ಸಂಘಟನೆಗಳು ಬಂದ್​​ಗೆ ಕೇವಲ ಸೈದ್ಧಾಂತಿಕ ಬೆಂಬಲವನ್ನು ಮಾತ್ರ ಸೂಚಿಸಿದ್ದಾರೆ. ನಗರದ ಮತ್ತು ವಿವಿಧೆಡೆಯ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ.
ಕೆಲವು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಧರಣಿ ಸೇರಿದಂತೆ ಶಾಂತ ಪ್ರತಿಭಟನೆ ನಡೆಸುವುದಾಗಿ ರೈತಮುಖಂಡರು ಹೇಳಿದ್ದಾರೆ. ಪ್ರತಿಭಟನಾಕಾರರು ನಗರದೊಳಕ್ಕೆ ಪ್ರವೇಶಿಸದಂತೆ ಮತ್ತು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ದೆಹಲಿ ಪೊಲೀಸರೊಂದಿಗೆ, ಹೆಚ್ಚಿನ ಸಂಖ್ಯೆಯಲ್ಲಿ ಪ್ಯಾರಾಮಿಲಿಟರಿ ಜವಾನ್​ರನ್ನೂ ಗಡಿಗಳಲ್ಲಿ ನಿಯುಕ್ತಿಗೊಳಿಸಲಾಗಿದೆ.

ಪ್ರಮುಖ ಸುದ್ದಿ :-   ಪವಿತ್ರಾ ಜಯರಾಮ ಸಾವಿನ ಬೆನ್ನಲ್ಲೇ ಗೆಳೆಯ-ಕಿರುತೆರೆ ನಟ ಚಂದು ಆತ್ಮಹತ್ಯೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement