ನಂಜನಗೂಡು ಉಚ್ಚಗಣಿ ಮಹದೇವಮ್ಮ ದೇವಾಲಯ ತೆರವು ಪ್ರಕರಣ:ತಹಶೀಲ್ದಾರ್ ತಲೆದಂಡ

ಮೈಸೂರು: ಮೈಸೂರಿನ ನಂಜನಗೂಡಿನಲ್ಲಿ ದೇವಾಲಯ ತೆರವು ಮಾಡಿ ದೊಡ್ಡ ವಿವಾದವಾಗಿ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಈಗ ಸರ್ಕಾರ ನಂಜನಗೂಡು ತಹಶೀಲ್ದಾರ್ ವರ್ಗಾವಣೆಗೊಳಿಸಿ ಜನರ ಆಕ್ರೋಶ ತಣ್ಣಗಾಗಿಸುವ ಪ್ರಯತ್ನ ಮಾಡಿದೆ.
ಸೋಮವಾರ ನಂಜನಗೂಡು ತಹಶೀಲ್ದಾರ್ ಮೋಹನಕುಮಾರಿ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ. ವರ್ಗಾವಣೆ ಬಳಿಕ ತಹಶೀಲ್ದಾರ್ ಹುದ್ದೆಯನ್ನು ಖಾಲಿ ಬಿಟ್ಟಿದ್ದು, ಅವರ ಬದಲಿಗೆ ಯಾರನ್ನೂ ನೇಮಕ ಮಾಡಿಲ್ಲ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಉಚ್ಚಗಣಿ ಮಹದೇವಮ್ಮ ದೇವಾಲಯ ತೆರವು ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಹನಕುಮಾರಿ ವರ್ಗಾವಣೆಯಾಗಿದೆ.
ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರಶ್ಮಿ ಎಂ. ಎಸ್. ಅವರು ತಹಶೀಲ್ದಾರ್ ಮೋಹನ ಕುಮಾರಿ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದಾರೆ. ಐಎಂಎ ವಂಚನೆ ಪ್ರಕರಣ ಮತ್ತು ಸಕ್ಷಮ ಪ್ರಾಧಿಕಾರ ಬೆಂಗಳೂರು ಇಲ್ಲಿನ ತಹಶೀಲ್ದಾರ್ ಗ್ರೇಡ್ – 1 ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ನೇಮಕ ಮಾಡಲಾಗಿದೆ.
ಸರ್ಕಾರ ನಂಜನಗೂಡು ತಹಶೀಲ್ದಾರ್ ಹುದ್ದೆಯನ್ನು ಖಾಲಿ ಉಳಿಸಿಕೊಂಡಿದೆ. ತಹಶೀಲ್ದಾರ್ ಹುದ್ದೆಗೆ ಸೂಕ್ತ ಪ್ರಭಾರ ವ್ಯವಸ್ಥೆ ಮಾಡಲು ಮೈಸೂರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸುಪ್ರೀಂಕೋರ್ಟ್ ಆದೇಶದ ಅನ್ವಯ ದೇವಾಲಯ ತೆರವು ಮಾಡಲಾಗಿದೆ ಎಂದು ಮೈಸೂರು ಜಿಲ್ಲಾಡಳಿತ ಹೇಳಿತ್ತು. ಆದರೆ ದೇವಾಲಯ ತೆರವು ವಿವಾದ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೇವಾಲಯ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಸೂಚನೆ ಕೊಟ್ಟಿದ್ದರು.
ನಂಜನಗೂಡು ತಾಲೂಕಿನ ಹಲವು ದೇವಾಲಯಗಳು ತೆರವುಗೊಳಿಸುವ ಪಟ್ಟಿಯಲ್ಲಿದ್ದವು. ಆದರೆ ಅಧಿಕಾರಿಗಳು ಜನಪ್ರತಿನಿಧಿಗಳ ಜೊತೆ ಸಮಾಲೋಚನೆ ನಡೆಸದೇ ಏಕಾಏಕಿ ದೇವಾಲಯ ತೆರವುಗೊಳಿಸಿದ್ದರು.
ಸೆಪ್ಟೆಂಬರ್ 8ರ ರಾತ್ರಿ ಉಚ್ಚಗಣಿ ಮಹದೇವಮ್ಮ ದೇವಾಲಯವನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸಲಾಗಿತ್ತು. ದೇವಾಲಯ ತೆರವು ವಿಚಾರ ದೊಡ್ಡದಾಗುತ್ತಲೇ ತಹಶೀಲ್ದಾರ್ ತಲೆದಂಡವಾಗಲಿದೆ ಎಂಬ ಮಾತುಗಳು ಕೇಳಿ ಬಂದಿತ್ತು.
ಸೋಮವಾರ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸೋಮವಾರ ದೇವಾಲಯ ತೆರವುಗೊಳಿಸಿರುವ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದರು. ದೇಗುಲ ತೆರವು ಬಳಿಕ ಶೆಡ್‌ನಲ್ಲಿ ಪ್ರತಿಷ್ಠಾಪನೆ ಮಾಡಿರುವ ಮೂರ್ತಿಗೆ ಪೂಜೆ ಸಲ್ಲಿಸಿದ್ದರು.
ಉಚ್ಚಗಣಿ ಮಹದೇವಮ್ಮ ದೇಗುಲ ತೆರವು ವಿಚಾರದಲ್ಲಿ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಆರೋಪ ಸಹ ತಹಶೀಲ್ದಾರ್ ಮೋಹನ ಕುಮಾರಿ ಮೇಲಿತ್ತು. ದೇವಾಲಯನ್ನು ತೆರವುಗೊಳಿಸಿ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆಡಳಿತ ಪಕ್ಷ ಬಿಜೆಪಿಯ ನಾಯಕರೇ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದ್ದರು.

ಪ್ರಮುಖ ಸುದ್ದಿ :-   ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ ನೇಮಕ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement