ಅರಸಿಕೆರೆ ಜಂಕ್ಷನ್ನಿನಲ್ಲಿ ನಿಂತಿದ್ದ ರೈಲು ಬೋಗಿಗಳಲ್ಲಿ ಬೆಂಕಿ

ಹಾಸನ: ಕೊರೋನಾ ರೋಗಿಗಳ ಐಸೊಲೇಷನ್ ಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದ ರೈಲು ಬೋಗಿಗಳಿಗೆ ಅರಸಿಕೆರೆ ಜಂಕ್ಷನ್ ನಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ.
ಮಂಗಳವಾರ ರಾತ್ರಿ ಈ ಘಟನೆ ವರದಿಯಾಗಿದ್ದು, ಸೂಕ್ತ ಸಮಯಕ್ಕೆ ಅಗ್ನಿಶಾಮಕ ಪಡೆ ಆಗಮಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಅವಘಡ ಸಂಭವಿಸುವುದಕ್ಕೂ ಮುನ್ನ ಬೆಂಕಿಯನ್ನು ನಂದಿಸಲಾಗಿದೆ.

ರೈಲ್ವೆ ಪೊಲೀಸರ ಮಾಹಿತಿಯ ಪ್ರಕಾರ ಬೆಂಕಿ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಬ್ಯಾಟರಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಅಗ್ನಿ ಅವಘಡ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ. ಬೆಂಕಿ ಹತ್ತಿಕೊಂಡ ಹಿನ್ನೆಲೆ ಎರಡು ಭೋಗಿಗಳ ಆಸನಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಬೆಂಕಿ ಅವಘಡ ಸಂಭವಿಸಿದ ಸಮೀಪವೇ ಇಂಧನ ಶೇಖರಣಾ ಘಟಕವಿತ್ತು. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement