ಇಸಿಜಿಸಿ ಐಪಿಒಗೆ ಕೇಂದ್ರ ಕ್ಯಾಬಿನೆಟ್ ಅನುಮೋದನೆ; ಮುಂದಿನ 5 ವರ್ಷಗಳಲ್ಲಿ 4,400 ಕೋಟಿ ರೂ.ಗಳ ಹೂಡಿಕೆ

ನವದೆಹಲಿ: ಸ್ಟಾಕ್ ಎಕ್ಸ್‌ಚೇಂಜ್‌ಗಳ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಸರ್ಕಾರಿ ಸ್ವಾಮ್ಯದ ರಫ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (Export Credit Guarantee Corporation) ಪಟ್ಟಿ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಬುಧವಾರ ತಿಳಿಸಿದ್ದಾರೆ.
ಇಸಿಜಿಚಿ(ECGC)ಯಲ್ಲಿ 4,400 ಕೋಟಿ ರೂ.ಗಳ ಬಂಡವಾಳ ಒಳಹರಿವಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ನಂತರ ಮಾಧ್ಯಮ ಬ್ರೀಫಿಂಗ್‌ನಲ್ಲಿ ಸಚಿವ ಪಿಯೂಷ್‌ ಗೋಯಲ್‌ ಮಾಹಿತಿ ನೀಡಿದ್ದಾರೆ. ಐಪಿಒ ಮೂಲಕ ಮುಂದಿನ 5 ವರ್ಷಗಳಲ್ಲಿ 4,400 ಕೋಟಿ ರೂಪಾಯಿಗಳನ್ನು ಇಸಿಜಿಸಿಯಲ್ಲಿ ಸರ್ಕಾರವು ಹೂಡಿಕೆ ಮಾಡಲಿದೆ. ಈ ಯೋಜನೆಯ ಮೂಲಕ ರಫ್ತುದಾರರಿಗೆ ಮಾತ್ರವಲ್ಲದೆ ಬ್ಯಾಂಕುಗಳಿಗೂ ಸಹಾಯ ಮಾಡಲಾಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಐಪಿಒ ಮೂಲಕ ರಫ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಲಿಮಿಟೆಡ್‌ ಪಟ್ಟಿಯನ್ನು ಕೇಂದ್ರ ಕ್ಯಾಬಿನೆಟ್ ಅನುಮೋದಿಸಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಅನುಮೋದಿತ ಮೊತ್ತವನ್ನು ಕಂತುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ, ಆ ಮೂಲಕ, ಅಪಾಯಗಳನ್ನು ಅಂಡರ್‌ರೈಟ್ ಮಾಡುವ ಸಾಮರ್ಥ್ಯವನ್ನು 88,000 ಕೋಟಿ ರೂ.ಗಳಿಗೆ ಹೆಚ್ಚಿಸುತ್ತದೆ ಮತ್ತು ಅಸ್ತಿತ್ವದಲ್ಲಿರುವ ಮಾದರಿಗೆ ಅನುಗುಣವಾಗಿ ಇದು ಐದು ವರ್ಷಗಳ ಅವಧಿಯಲ್ಲಿ 5.28 ಲಕ್ಷ ಕೋಟಿ ರೂಪಾಯಿಗಳ ಹೆಚ್ಚುವರಿ ರಫ್ತುಗಳನ್ನು ಬೆಂಬಲಿಸುವ ಕವರ್‌ಗಳನ್ನು ನೀಡಲು ಇಸಿಜಿಸಿಯನ್ನು ಶಕ್ತಗೊಳಿಸುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಕ್ರಮವು ಔಪಚಾರಿಕ ವಲಯದಲ್ಲಿ 2.6 ಲಕ್ಷ ಸೇರಿದಂತೆ 59 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಈ ಯೋಜನೆಗಾಗಿ ಸುಮಾರು 500 ಕೋಟಿ ರೂ.ಗಳನ್ನು ತಕ್ಷಣೆವೇ ಹೂಡಿಕೆ ಮಾಡಲಾಗುತ್ತದೆ. ಮತ್ತು ಮುಂದಿನ ಹಣಕಾಸು ವರ್ಷದ ವೇಳೆಗೆ ಇಸಿಜಿಸಿಯನ್ನು ಷೇರು ವಿನಿಮಯ ಕೇಂದ್ರಗಳಲ್ಲಿ ಪಟ್ಟಿ ಮಾಡಬಹುದು ಎಂದು ಗೋಯಲ್ ಹೇಳಿದರು.
ಕಾರ್ಪೊರೇಟ್ ಮತ್ತು ರಾಜಕೀಯ ಕಾರಣಗಳಿಂದಾಗಿ ವಿದೇಶಿ ಖರೀದಿದಾರರು ಪಾವತಿಸದಿದ್ದಲ್ಲಿ ರಫ್ತುದಾರರಿಗೆ ಕ್ರೆಡಿಟ್ ವಿಮಾ ಸೇವೆಗಳನ್ನು ಒದಗಿಸುವ ಮೂಲಕ ರಫ್ತುಗಳನ್ನು ಉತ್ತೇಜಿಸಲು ರಫ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ರಚಿಸಲಾಯಿತು. ಇದು ರಫ್ತುದಾರರು ಸಾಲ ತೆಗೆದುಕೊಳ್ಳುವ ಸಂದರ್ಭದಲ್ಲಿ ಅಪಾಯದ ವಿರುದ್ಧ ಬ್ಯಾಂಕುಗಳಿಗೆ ವಿಮೆಯನ್ನು ಒದಗಿಸುತ್ತದೆ.
ಇಸಿಜಿಸಿಯಲ್ಲಿ ಬಂಡವಾಳದ ಒಳಹರಿವಿನೊಂದಿಗೆ, ಕಂಪನಿಯು ರಫ್ತು-ಆಧಾರಿತ ಉದ್ಯಮದಲ್ಲಿ, ವಿಶೇಷವಾಗಿ ಕಾರ್ಮಿಕ-ತೀವ್ರ ವಲಯಗಳಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ಸಾಧ್ಯವಾಗುತ್ತದೆ. ಇಸಿಜಿಸಿ(ECGC)ಯು ದೇಶದಲ್ಲಿ ರಫ್ತು ಕ್ರೆಡಿಟ್ ವಿಮಾ ಮಾರುಕಟ್ಟೆಯಲ್ಲಿ 85 % ಮಾರುಕಟ್ಟೆ ಪಾಲನ್ನು ಹೊಂದಿದೆ. ರಫ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ರಫ್ತುದಾರರಿಗೆ ತಮ್ಮ ಬಾಕಿಯ ಮೇಲೆ ವಿಮೆಯನ್ನು ಒದಗಿಸುತ್ತದೆ. 97 ರಷ್ಟು ಪಾಲಿಸಿದಾರರು MSME ವಲಯದ ವ್ಯವಹಾರದಾರರಾಗಿದ್ದಾರೆ.

ಪ್ರಮುಖ ಸುದ್ದಿ :-   100 ವರ್ಷಗಳಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮೊದಲ ಮಹಿಳಾ ಉಪಕುಲಪತಿ ನೇಮಕ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement