ಶಿರೂರು ಮಠಕ್ಕೆ ಪೀಠಾಧಿಪತಿಯಾಗಿ ಅಪ್ರಾಪ್ತ ಸನ್ಯಾಸಿ ನೇಮಕ ಎತ್ತಿ ಹಿಡಿದ ಹೈಕೋರ್ಟ್‌: ಕಾನೂನುಬದ್ಧತೆ ಪ್ರಶ್ನಿಸಿದ್ದ ಅರ್ಜಿ ವಜಾ

ಬೆಂಗಳೂರು: ಉಡುಪಿಯ ಅಷ್ಟಮಠಗಳ ಪೈಕಿ ಒಂದಾಗಿರುವ ಶಿರೂರು ಮಠಕ್ಕೆ ಬಾಲ ಸನ್ಯಾಸಿ ನೇಮಕ ಮಾಡಿರುವುದನ್ನು ಬುಧವಾರ ಎತ್ತಿಹಿಡಿದಿರುವ ಕರ್ನಾಟಕ ಹೈಕೋರ್ಟ್‌ ಅಪ್ರಾಪ್ತರು ಸ್ವಾಮಿಯಾಗಬಾರದು ಎಂಬುದಕ್ಕೆ ಕಾನೂನಿನ ತೊಡಕು ಇಲ್ಲ ಎಂದು ಮಹತ್ವದ ತೀರ್ಪು ಪ್ರಕಟಿಸಿದೆ.
:16 ವರ್ಷದ ಅಪ್ರಾಪ್ತನನ್ನು ಉಡುಪಿ ಶಿರೂರು ಮಠದ ಪೀಠಾಧಿಪತಿಗಳನ್ನಾಗಿ ನೇಮಕ ಮಾಡಿರುವ ಕಾನೂನುಬದ್ಧತೆ ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಪೀಠಾಧಿಪತಿಗಳ ನೇಮಕ ವಿಚಾರದಲ್ಲಿ 800 ವರ್ಷಗಳಿಂದ‌ ನಡೆದುಕೊಂಡು ಬರುತ್ತಿರುವ ಮಠದ ಸಂಪ್ರದಾಯದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸುವುದಿಲ್ಲ ಎಂದು ಹೇಳಿದ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಶಿರೂರು ಮಠದ ಪೀಠಾಧಿಪತಿಯನ್ನಾಗಿ 16 ವರ್ಷದ ಅನಿರುದ್ಧ ಸರಳತ್ತಾಯ (ಈಗ ವೇದವರ್ಧನ ತೀರ್ಥ) ಅವರನ್ನು ನೇಮಕ ಮಾಡಿದ್ದರ ಸಿಂಧುತ್ವ ಪ್ರಶ್ನಿಸಿ ಶಿರೂರು ಮಠದ ಭಕ್ತ ಸಮಿತಿಯ ಕಾರ್ಯದರ್ಶಿ ಪಿ ಲಾತವ್ಯ ಆಚಾರ್ಯ ಸೇರಿ ನಾಲ್ವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಗೆ ಸಂಬಂಧಿಸಿದಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ತೀರ್ಪು ನೀಡಿದೆ.
18 ವರ್ಷಕ್ಕಿಂತ ಚಿಕ್ಕವರು ಸನ್ಯಾಸಿಗಳಾಗಬಾರದು ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ಶಾಸನಬದ್ಧ ಕಾನೂನು ಇಲ್ಲ. 18 ವರ್ಷವಾಗುವುದಕ್ಕೂ ಮುಂಚಿತವಾಗಿ ಸನ್ಯಾಸಿಯಾಗಲು ಧರ್ಮದಲ್ಲಿ ಅವಕಾಶವಿದೆ ಎಂಬುದನ್ನು ಅಮಿಕಸ್‌ ಕ್ಯೂರಿ ಎಸ್‌ ಎಸ್‌ ನಾಗಾನಂದ್‌ ವಿಸ್ತೃತವಾಗಿ ವಿವರಿಸಿದ್ದಾರೆ. ಹೀಗಾಗಿ, ಅದಕ್ಕೆ ಯಾವುದೇ ನಿರ್ಬಂಧವಿಲ್ಲ. ಪ್ರಮುಖವಾದ ಧಾರ್ಮಿಕ ಚಟುವಟಿಕೆಗಳ ದೃಷ್ಟಿಯಿಂದ ಶಿರೂರುಮಠಕ್ಕೆ ಪೀಠಾಧಿಪತಿ ನೇಮಕ ಮಾಡುವ ಅಧಿಕಾರ ಸೋದೆ ವಾದಿರಾಜ ಮಠದ ಪೀಠಾಧಿಪತಿಗೆ ಇದೆ. ಈ ವಿಚಾರದಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸಲಾಗದು. ಅದಾಗ್ಯೂ, ಧಾರ್ಮಿಕ ವಿಧಿವಿಧಾನ ಮತ್ತು ಧರ್ಮದಲ್ಲಿ ಅಸ್ತಿತ್ವದಲ್ಲಿರುವ ನಂಬಿಕೆಗಳು ಎಲ್ಲಿಯವರೆಗೆ ವ್ಯಕ್ತಿಯ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲವೋ ಅಲ್ಲಿಯವರೆಗೆ ಅವುಗಳನ್ನು ಪಾಲಿಸುವ ಹೊಣೆಗಾರಿಕೆ ಇದೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.
ಅನಿರುದ್ಧ ಸರಳತ್ತಾಯ ಅವರನ್ನು ಪೀಠಾಧಿಪತಿಯನ್ನಾಗಿ ನೇಮಿಸಿರುವುದನ್ನು ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಹೇಳಲಾಗದು. ಶಾಸನಬದ್ಧ ನಿಬಂಧನೆಗಳನ್ನು ಉಲ್ಲಂಘಿಸಲಾಗಿದೆ ಎಂಬುದರತ್ತ ಮನವರಿಕೆ ಮಾಡಲು ಅರ್ಜಿದಾರರು ವಿಫಲರಾಗಿದ್ದಾರೆ. ಈ ಪರಂಪರೆಯು 800 ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದು ಹೇಳಿರುವ ಪೀಠವು ಪಿಐಎಲ್‌ ಅನ್ನು ವಜಾ ಮಾಡಿದೆ.
ಕಳೆದ ಗುರುವಾರ ಸುದೀರ್ಘವಾಗಿ ನಾಲ್ಕು ತಾಸುಗಳ ವಾದ-ಪ್ರತಿವಾದ ಆಲಿಸಿದ್ದ ಪೀಠವು ತೀರ್ಪು ಕಾಯ್ದಿರಿಸಿತ್ತು. ಅರ್ಜಿದಾರರ ಪರವಾಗಿ ವಾದಿಸಿದ್ದ ವಕೀಲ ಡಿ ಆರ್‌ ರವಿಶಂಕರ್‌ ಅವರು “ಅಪ್ರಾಪ್ತರಿಗೆ ಸನ್ಯಾಸವನ್ನು ಹೇರುವುದರಿಂದ ಅವರು ಐಹಿಕ ಭೋಗಗಳನ್ನು ಪರಿತ್ಯಾಗ ಮಾಡಬೇಕಾಗುತ್ತದೆ. ಇದು ಸಂವಿಧಾನದ 21 ಮತ್ತು 39 (ಇ) ಮತ್ತು (ಎಫ್‌) ವಿಧಿಯ ಉಲ್ಲಂಘನೆಯಾಗುತ್ತದೆ ಎಂದು ವಾದಿಸಿದ್ದರು.
ಅಮಿಕಸ್‌ ಕ್ಯೂರಿಯಾಗಿರುವ ಹಿರಿಯ ವಕೀಲ ಎಸ್‌ ಎಸ್‌ ನಾಗಾನಂದ್‌ ಅವರು “18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸನ್ಯಾಸ ದೀಕ್ಷೆ ನೀಡುವುದಕ್ಕೆ ಯಾವುದೇ ಶಾಸನಬದ್ಧ, ಸಂವಿಧಾನಬದ್ಧವಾದ ನಿರ್ಬಂಧವಿಲ್ಲ ಮತ್ತು ಅದು ಅಪಾಯಕರ ಅಭ್ಯಾಸವಲ್ಲ” ಎಂದು ಪೀಠಕ್ಕೆ ವಿವರಿಸಿದ್ದರು.
ಶಿರೂರು ಮಠಕ್ಕೆ ಪೀಠಾಧಿಪತಿಯನ್ನು ನೇಮಿಸುವ ಅಧಿಕಾರ ಸೋದೆ ವಾದಿರಾಜ ಮಠಕ್ಕೆ ಇದೆಯೇ ಎಂಬ ಅರ್ಜಿದಾರರ ಪ್ರಶ್ನೆಗೆ ಅಮಿಕಸ್‌ ಕ್ಯೂರಿ ನಾಗಾನಂದ್‌ ಅವರು “1917ರಲ್ಲೇ ಮದ್ರಾಸ್‌ ಹೈಕೋರ್ಟ್‌ ದ್ವಂದ್ವ ಮಠ ವ್ಯವಸ್ಥೆಯನ್ನು ಪರಿಗಣಿಸಿದೆ. ಈ ಸಂಪ್ರದಾಯದ ಪ್ರಕಾರ ದ್ವಂದ್ವ ಮಠದ ಪೈಕಿ ಒಂದು ಮಠದ ಮುಖ್ಯ ಪೀಠಾಧಿಪತಿ ತಮ್ಮ ಉತ್ತರಾಧಿಕಾರಿಯನ್ನು ಗುರುತಿಸದೇ ನಿಧನರಾದರೆ ಮತ್ತೊಂದು ಮಠದ ಮುಖ್ಯ ಪೀಠಾಧಿಪತಿಯು ಸದರಿ ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಿಸುವ ಅಧಿಕಾರ ಹೊಂದಿರುತ್ತಾರೆ” ಎಂದು ತಿಳಿಸಿದ್ದರು.
ಭಾರತೀಯ ಪ್ರೌಢವಾಸ್ಥೆ ಕಾಯಿದೆ ಪ್ರಕಾರ 18 ವರ್ಷದವರನ್ನು ಪ್ರಾಪ್ತ ವಯಸ್ಕರು ಎನ್ನಲಾಗುತ್ತದೆ. ಆದರೆ, ಧಾರ್ಮಿಕ ವಿಷಯಗಳಿಗೆ ಬಂದಾಗ 14 ವರ್ಷ ವಯಸ್ಸನ್ನು ಪರಿಗಣಿಸಲಾಗುತ್ತದೆ. ಶಾಸ್ತ್ರಗಳು ಹಾಗೂ ಶ್ಲೋಕಗಳ ಪ್ರಕಾರ 14 ವರ್ಷದ ದಾಟಿದವರು ವೈರಾಗ್ಯ ನಿರ್ಧಾರ ಕೈಗೊಳ್ಳಬಹುದು. ಬೌದ್ಧ ಧರ್ಮದವರಲ್ಲಿ ಚಿಕ್ಕ ಮಕ್ಕಳಿಗೇ ಸನ್ಯಾಸ ನೀಡಲಾಗುತ್ತದೆ. ಶಿರೂರು ಮಠಕ್ಕೆ ಮಠಾಧಿಪತಿ ಆಗಿರುವವರಿಗೆ 17 ವರ್ಷ. ತಂದೆ ಡಾಕ್ಟರೇಟ್ ಪಡೆದಿದ್ದು, ತಾಯಿಯೂ ವಿದ್ಯಾವಂತೆ. ಮಗನಿಗೂ ವಿರಕ್ತಿಯಲ್ಲಿ ಆಸಕ್ತಿಯಿದೆ. ಆ ಪ್ರಕಾರವೇ ಸನ್ಯಾಸ ದೀಕ್ಷೆ ನೀಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಲೋಪವೇನೂ ಆಗಿಲ್ಲ” ಎಂದು ಹೇಳಿದ್ದರು.

ಪ್ರಮುಖ ಸುದ್ದಿ :-   ಜಾತ್ರಾ ಮಹೋತ್ಸವದ ವೇಳೆ ರಥದ ಚಕ್ರದಡಿ ಸಿಲುಕಿ ಇಬ್ಬರು ಸಾವು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement