ಸಿಧು ಜೊತೆ ಮಾತನಾಡಿದ ಚನ್ನಿ: ಎಲ್ಲ ವಿಷಯಗಳ ಬಗ್ಗೆ ಅವರೊಂದಿಗೆ ಮಾತನಾಡಲು ಸಿದ್ಧ ಎಂದ ಪಂಜಾಬ್‌ ಸಿಎಂ

ಚಂಡೀಗಡ:ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಅವರು ರಾಜ್ಯ ಕಾಂಗ್ರೆಸ್ ನಾಯಕರು ಕುಳಿತು ಪಕ್ಷದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಬಗ್ಗೆ ಮಾತನಾಡಬೇಕು ಹಾಗೂ ಪರಿಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ ಮತ್ತು ಬುಧವಾರ ನವಜೋತ್ ಸಿಂಗ್ ಸಿಧು ಅವರೊಂದಿಗೆ ಮಾತನಾಡಿರುವುದಾಗಿ ತಿಳಿಸಿದ್ದಾರೆ. .
ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ ನವಜೋತ್ ಸಿಂಗ್ ಸಿಧು ಇದ್ದಕ್ಕಿದ್ದಂತೆ ನಿರ್ಗಮಿಸಿದ ಒಂದು ದಿನದ ನಂತರ, ಮುಖ್ಯಮಂತ್ರಿ ಚನ್ನಿ ಅವರು ಎಲ್ಲಾ ವಿಷಯಗಳ ಬಗ್ಗೆ ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥ ಸಿಧು ಅವರೊಂದಿಗೆ ಮಾತನಾಡಲು ಸಿದ್ಧ ಎಂದು ಹೇಳಿದರು.
ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ನವಜೋತ್ ಸಿಂಗ್ ಸಿಧು ಅವರಿಗೆ ಯಾವ ವಿಷಯಗಳ ಬಗ್ಗೆ ಆಕ್ಷೇಪಣೆಯಿದೆ ಎಂಬುದರ ಕುರಿತು ಚರ್ಚೆ ನಡೆಸಲಾಗುವುದು ಎಂದು ಚನ್ನಿ ಹೇಳಿದ್ದಾರೆ.
ಬುಧವಾರ ನಡೆಸಿದ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಉದ್ದೇಶಪೂರ್ವಕವಾಗಿ ಏನನ್ನೂ ಮಾಡಿಲ್ಲ. ಯಾವುದೇ ನೇಮಕಾತಿಯಲ್ಲಿ ಯಾರಾದರೂ ಆಕ್ಷೇಪಣೆ ಹೊಂದಿದ್ದರೆ, ನಾನು ಆ ಬಗ್ಗೆ ಕಠಿಣ ನಿಲುವು ಹೊಂದಿಲ್ಲ, ಎಲ್ಲ ವಿಷಯಗಳ ಬಗ್ಗೆ ಮಾತನಾಡಲು ನನಗೆ ಯಾವುದೇ ಅಹಂ ಇಲ್ಲ ಮತ್ತು ಎಲ್ಲ ನಾಯಕರೊಂದಿಗೆ ಚರ್ಚೆಗೆ ಕುಳಿತುಕೊಳ್ಳಲು ನಾನು ಸಿದ್ಧನಿದ್ದೇನೆ. ನಾನು ಸಿಧು ಅವರನ್ನು ಪಂಜಾಬಿನಲ್ಲಿ ಪಕ್ಷದ ಸರ್ವೋಚ್ಚ ನಾಯಕ ಎಂದು ತಿಳಿದುಕೊಂಡಿದ್ದೇನೆ, ಮಾತನಾಡೋಣ ಬನ್ನಿ, ಚರ್ಚೆಯ ಮೂಲಕ ಸಮಸ್ಯೆಗಳಿದ್ದರೆ ಬಗೆಹರಿಸಿಕೊಳ್ಳೋಣ ಎಂದು ಮುಖ್ಯಮಂತ್ರಿ ಚನ್ನಿ ಸಿಧು ಅವರಿಗೆ ಆಹ್ವಾನ ನೀಡಿದ್ದಾರೆ.
ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ನೇತೃತ್ವದಲ್ಲಿ ಪಂಜಾಬ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಂಪುಟ ರಚನೆ ಆಗುತ್ತಿದ್ದಂತೆ ಪಕ್ಷದೊಂದಿಗೆ ಯಾವುದೇ ರೀತಿ ಸಮಾಲೋಚನೆ ನಡೆಸದೆ ನವಜೋತ್ ಸಿಂಗ್ ಸಿಧು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮಧ್ಯೆ ಬುಧವಾರ ವಿಡಿಯೋ ಸಂದೇಶವೊಂದನ್ನು ನೀಡಿರುವ ಸಿಧು, ತಮ್ಮ ಕೊನೆಯುಸಿರು ಇರುವವರೆಗೂ ಸತ್ಯಕ್ಕಾಗಿ ನ್ಯಾಯಕ್ಕಾಗಿ ಹೋರಾಟ ನಡೆಸುವುದಾಗಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2ನೇ ಹಂತದ ಮತದಾನ : ಶ್ರೀಮಂತ ಅಭ್ಯರ್ಥಿ ₹ 622 ಕೋಟಿ ಒಡೆಯ, ಅತ್ಯಂತ ಬಡ ಅಭ್ಯರ್ಥಿ ಬಳಿ ಇರುವುದು ಕೇವಲ...

ಪಂಜಾಬ್‌ನಲ್ಲಿ ಕಾರ್ಯಚೂಚಿ ಹಾಗೂ ನ್ಯಾಯಕ್ಕಾಗಿ ನನ್ನ ಹೋರಾಟ ಮುಂದುವರಿಯುತ್ತದೆ ಎಂದು ನವಜೋತ್ ಸಿಂಗ್ ಸಿಧು ತಮ್ಮ ವಿಡಿಯೋ ಸಂದೇಶದಲ್ಲಿ ಸಾರಿ ಹೇಳಿದ್ದಾರೆ. ನನ್ನ ಕೊನೆಯ ಉಸಿರು ಇರುವವರೆಗೂ ನ್ಯಾಯ ಮತ್ತು ಸತ್ಯಕ್ಕಾಗಿ ಹೋರಾಟ ನಡೆಸುತ್ತೇನೆ ಪಂಜಾಬ್‌ನ ಭವಿಷ್ಯ ಮತ್ತು ಪಂಜಾಬ್‌ನ ಕಲ್ಯಾಣದ ವಿಷಯದಲ್ಲಿ ನಾನು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಆದ್ದರಿಂದ, ನಾನು ಈ ಮೂಲಕ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಾನು ಕಾಂಗ್ರೆಸ್ ಸೇವೆ ಮುಂದುವರಿಸುತ್ತೇನೆ,” ಎಂದು ಹೇಳಿದ್ದಾರೆ.

ರಾಜೀನಾಮೆ ಹಿಂಪಡೆಯುವಂತೆ ನಾಯಕರ ಒತ್ತಾಯ:
ಪಂಜಾಬ್ ವಿಧಾನಸಭೆ ಚುನಾವಣೆಗೆ ನಾಲ್ಕು ತಿಂಗಳಷ್ಟೇ ಬಾಕಿ ಇರುವಂತೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ಸಲ್ಲಿಸಿರುವುದು ಪಕ್ಷದೊಳಗೆ ಹೊಸ ಬಿಕ್ಕಟ್ಟಿಗೆ ಕಾರಣವಾಗಿದೆ. ಈ ಮಧ್ಯೆ ಕಾಂಗ್ರೆಸ್ ನಾಯಕರಿಂದ ಮನವೊಲಿಕೆಯ ಪ್ರಯತ್ನ ಜೋರಾಗಿ ನಡೆಯುತ್ತಿದೆ. ಸಿಧು ನೀಡಿರುವ ರಾಜೀನಾಮೆಯನ್ನು ವಾಪಸ್ ಪಡೆಯುವಂತೆ ಹೈಕಮಾಂಡ್ ನಾಯಕರು ನವಜೋತ್ ಸಿಂಗ್ ಸಿಧು ಅವರನ್ನು ಒತ್ತಾಯಿಸಿದ್ದಾರೆ. ಆಂತರಿಕ ಮಟ್ಟದಲ್ಲಿ ಸ್ವತಃ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸಿಧು ಜೊತೆಗೆ ಚರ್ಚಿಸಿ ತಮ್ಮ ನಿರ್ಧಾರ ಬದಲಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿಧು ಬೆಂಬಲಿಗರಿಂದ ರಾಜೀನಾಮೆ:
ಪಂಜಾಬ್ ಸರ್ಕಾರದಲ್ಲಿ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಎರಡೇ ದಿನಗಳಲ್ಲಿ ರಜಿಯಾ ಸುಲ್ತಾನಾ ಮಂಗಳವಾರ “ನವಜೋತ್ ಸಿಂಗ್ ಸಿಧು ಅವರಿಗೆ ಬೆಂಬಲಾರ್ಥವಾಗಿ ತಮ್ಮ ಸಚಿವ ಸ್ಥಾನಕ್ಕೆ” ರಾಜೀನಾಮೆ ನೀಡಿದ್ದಾರೆ. ಇದಾದ ಬೆನ್ನಲ್ಲೇ ಪಂಜಾಬ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯೋಗಿಂದರ್ ಧಿಂಗ್ರಾ ಮತ್ತು ಖಜಾಂಚಿ ಗುಲ್ಜಾರ್ ಇಂದರ್ ಚಹಲ್ ಕೂಡಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement