ಬೆಳಗಾವಿ: ಮಾಜಿ ಸೈನಿಕನೋರ್ವ ಕೋರ್ಟ್ ಆವರಣದಲ್ಲೇ ಪತ್ನಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕಾಲನ್ನೇ ಕತ್ತರಿಸಿದ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಮಾಜಿ ಸೈನಿಕ ಶಿವಪ್ಪ ನಿಂಗಪ್ಪ ಅಡಕಿ (35), ತನ್ನ ಪತ್ನಿ ಜಯಮಾಲಾ (33) ಅವರ ಮೇಲೆ ಮಚ್ಚನಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ಜಯಮಾಲಾ ಅವರ ತಲೆ, ಕೈ, ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು, ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.
ಹಣಕಾಸು ವಿಚಾರವಾಗಿ ಶಿವಪ್ಪ- ಜಯಮಾಲಾ ದಂಪತಿ ನಡುವೆ ಜಗಳ ಆಗುತ್ತಿತ್ತು ಎನ್ನಲಾಗಿದೆ. ಈ ಕುರಿತಾದ ವ್ಯಾಜ್ಯವು ನ್ಯಾಯಾಲಯದಲ್ಲಿತ್ತು. ಜಗಳದ ಪರಿಣಾಮ ಪತಿಯಿಂದ ದೂರವಾಗಿ ಜಯಮಾಲಾ ತನ್ನ ತವರು ಮನೆಯಲ್ಲಿದ್ದರು. ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ಗಂಡ ಶಿವಪ್ಪ ಹಾಗೂ ಹೆಂಡತಿ ಜಯಮಾಲಾ ಇಬ್ಬರೂ ಕೋರ್ಟಿಗೆ ಬಂದಿದ್ದರು. ಈ ವೇಳೆ ಮತ್ತೆ ಮಾತಿಗೆ ಮಾತು ಬೆಳೆದಿದೆ. ಆಗ ಕೋಪಗೊಂಡ ಶಿವಪ್ಪ ಪತ್ನಿ ಜಯಮಾಲಾ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಬೈಲಹೊಂಗಲ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಿಮ್ಮ ಕಾಮೆಂಟ್ ಬರೆಯಿರಿ