ಏಪ್ರಿಲ್​ನಿಂದ ಆಗಸ್ಟ್​ ಅವಧಿಯ ಕೇಂದ್ರದ ವಿತ್ತೀಯ ಕೊರತೆ 4.7 ಲಕ್ಷ ಕೋಟಿ ರೂ.

ನವದೆಹಲಿ: 2021ರ ಏಪ್ರಿಲ್​ನಿಂದ ಆಗಸ್ಟ್‌ ಅವಧಿಯಲ್ಲಿ ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು 4.7 ಲಕ್ಷ ಕೋಟಿ ರೂ.ಗಳು ಅಥವಾ ಪೂರ್ಣ ವರ್ಷದ ಬಜೆಟ್ ಅಂದಾಜಿನ ಶೇ 31ರಷ್ಟು ಆಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು ಶೇಕಡಾ 109ರಷ್ಟು ಆಗಿತ್ತು ಎಂದು ಸೆಪ್ಟೆಂಬರ್ 30ರಂದು ಅಧಿಕೃತ ಮಾಹಿತಿಯು ತೋರಿಸಿದೆ.
ಈ ಬೆಳವಣಿಗೆಯು ಪ್ರಾಥಮಿಕವಾಗಿ ನೇರ ಮತ್ತು ಪರೋಕ್ಷ ತೆರಿಗೆ ಆದಾಯ ಸಂಗ್ರಹ ಬೆಂಬಲದಿಂದ ಆಗಿದೆ ಎಂದು ತಿಳಿಸಲಾಗಿದೆ. ಕಳೆದ ವರ್ಷ 2020ರ ಏಪ್ರಿಲ್​ನಿಂದ ಜೂನ್​ನಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ತೆರಿಗೆ ಸಂಗ್ರಹವು ಭಾರೀ ಇಳಿಕೆ ಆಗಿತ್ತು. ಕಳೆದ ವರ್ಷ ಏಪ್ರಿಲ್​ನಿಂದ ಆಗಸ್ಟ್​ನಲ್ಲಿ ವಿತ್ತೀಯ ಕೊರತೆಯು ಬಜೆಟ್ ಗುರಿಯನ್ನು ದಾಟಿತ್ತು.
ವಿತ್ತೀಯ ಕೊರತೆ ನಾಮಿನಲ್ ಜಿಡಿಪಿಯ ಶೇ 6.8ರಷ್ಟು
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿತ್ತೀಯ ಕೊರತೆಯ ಗುರಿಯನ್ನು 15.07 ಲಕ್ಷ ಕೋಟಿ ರೂಪಾಯಿ ಅಥವಾ ನಾಮಿನಲ್ ಜಿಡಿಪಿಯ ಒಟ್ಟು ಶೇ 6.8 ಎಂದು ಆರ್ಥಿಕ ವರ್ಷ 2021-22ರ ಬಜೆಟ್ ಅಂದಾಜು ಮಾಡಿದ್ದರು. ಆರ್ಥಿಕ ವರ್ಷ 2021 ವಿತ್ತೀಯ ಕೊರತೆಯು 18.49 ಲಕ್ಷ ಕೋಟಿ ರೂಪಾಯಿ ಅಥವಾ ಜಿಡಿಪಿಯ ಶೇ 9.5ಕ್ಕೆ ಪರಿಷ್ಕರಿಸಲಾಯಿತು. ಅದಕ್ಕೂ ಮುನ್ನ ಬಜೆಟ್​ನಲ್ಲಿ 7.96 ಲಕ್ಷ ಕೋಟಿ ರೂಪಾಯಿಗಳ ಅಥವಾ ಜಿಡಿಪಿಯ ಶೇ 3.5 ಎಂದು ಗುರಿ ಇರಿಸಿಕೊಳ್ಳಲಾಗಿತ್ತು. 2021-22 ಏಪ್ರಿಲ್-ಆಗಸ್ಟ್ ಮಧ್ಯೆ ನಿವ್ವಳ ತೆರಿಗೆ ಆದಾಯವು 6.45 ಲಕ್ಷ ಕೋಟಿ ರೂಪಾಯಿ ಅಥವಾ ಬಜೆಟ್​ ಅಂದಾಜಿನ ಶೇಕಡಾ 41.7ರಷ್ಟು ಬಂದಿದೆ. ಕಳೆದ ವರ್ಷದ ಇದೇ ಅವಧಿಗೆ ಇದು ಶೇಕಡಾ 17.4ರಷ್ಟು ಇತ್ತು.
ಏಪ್ರಿಲ್​ನಿಂದ ಆಗಸ್ಟ್‌ ಮಧ್ಯೆ ತೆರಿಗೆಯೇತರ ಆದಾಯವು 1.49 ಲಕ್ಷ ಕೋಟಿ ರೂ.ಗಳು ಅಥವಾ ಬಜೆಟ್​ ಅಂದಾಜಿನ ಶೇ 61.2ರಷ್ಟು ಬಂದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ 22.4ರಷ್ಟು ಬಂದಿತ್ತು. ಇದು ಮುಖ್ಯವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೇ ತಿಂಗಳಲ್ಲಿ ಕೇಂದ್ರಕ್ಕೆ ವರ್ಗಾಯಿಸಿದ 99,122 ಕೋಟಿ ರೂ.ಗಳಿಂದ ಬಂದಿತ್ತು ಎಂಬುದು ಗಮನಾರ್ಹ.
2021ರ ಏಪ್ರಿಲ್​ನಿಂದ ಆಗಸ್ಟ್‌ನ ಮಧ್ಯದ ಒಟ್ಟು ವೆಚ್ಚವು 12.76 ಲಕ್ಷ ಕೋಟಿ ರೂ.ಗಳಾಗಿದ್ದು, ಕಳೆದ ವರ್ಷದ ಬಜೆಟ್​ ಅಂದಾಜು ಶೇ 40ಕ್ಕೆ ಹೋಲಿಸಿದರೆ, ಈ ಬಾರಿ ಶೇಕಡಾ 36.7ರಷ್ಟಿದೆ. ಕಳೆದ ವರ್ಷದ ಆದಾಯದ ವೆಚ್ಚ 11.13 ಲಕ್ಷ ಕೋಟಿ ರೂಪಾಯಿಗೆ ಹೋಲಿಸಿದರೆ ಈ ವರ್ಷದ ಆದಾಯ ವೆಚ್ಚ 11.05 ಲಕ್ಷ ಕೋಟಿ ರೂಪಾಯಿ, ಕಳೆದ ವರ್ಷ ಬಂಡವಾಳ ವೆಚ್ಚ 1.72 ಲಕ್ಷ ಕೋಟಿ ರೂಪಾಯಿ ಇತ್ತು. ಈಗ 1.34 ಲಕ್ಷ ಕೋಟಿ ರೂಪಾಯಿ ಇದೆ.
ಒಟ್ಟಾರೆ ಆದಾಯ ವೆಚ್ಚವು ಬಜೆಟ್ ಮೊತ್ತದ ಕೇವಲ ಶೇ 37ರಷ್ಟು ಮಾತ್ರ. ಮುಖ್ಯವಾಗಿ ಸರ್ಕಾರವು ಹಾಕಿರುವ ನಿರ್ಬಂಧಗಳಿಂದಾಗಿ ಹೀಗಾಗಿದೆ. ಸಚಿವಾಲಯಗಳು ತಮ್ಮ ಬಜೆಟ್ ಅನ್ನು ಖರ್ಚು ಮಾಡಲು ಸರ್ಕಾರವು ಕೇಳಿದ್ದರಿಂದ ಇದು ದ್ವಿತೀಯಾರ್ಧದಲ್ಲಿ ಹೆಚ್ಚಾಗಬಹುದು ಎಂಬುದನ್ನು ನಾವು ನಿರೀಕ್ಷಿಸಬಹುದು ಎಂದು ಕೇರ್​ ರೇಟಿಂಗ್​ನ ಪ್ರಮುಖ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ