ಕಪಿಲ್ ಸಿಬಲ್ ಟೀಕೆಯ ನಂತರ, ಶೀಘ್ರವೇ ಸಿಡಬ್ಲ್ಯುಸಿ ಸಭೆ ನಡೆಯಲಿದೆ ಎಂದ ಕಾಂಗ್ರೆಸ್

ನವದೆಹಲಿ: ಜಿ -23 ನಾಯಕರ ಬೇಡಿಕೆಯನ್ನು ಅನುಸರಿಸಿ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯೂಸಿ) ಸಭೆಯನ್ನು ಶೀಘ್ರದಲ್ಲೇ ಕರೆಯಲಾಗುವುದು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಗುರುವಾರ ತಿಳಿಸಿದ್ದಾರೆ.
ಜಿ -23 – ಕಾಂಗ್ರೆಸ್ ಪಕ್ಷದಲ್ಲಿ ಸಾಂಸ್ಥಿಕ ಬದಲಾವಣೆಗಳನ್ನು ಕೋರಿ ಕಾಂಗ್ರೆಸ್ ಉನ್ನತಾಧಿಕಾರಿಗಳಿಗೆ ಪತ್ರ ಬರೆದ ನಾಯಕರ ಗುಂಪು -ಅದು ಪಕ್ಷದಲ್ಲಿ ಸಾಂಸ್ಥಿಕ ಚುನಾವಣೆಗೆ ಒತ್ತಾಯಿಸುತ್ತಿದೆ.
ಶಿಮ್ಲಾಕ್ಕೆ ತೆರಳುವ ಮೊದಲು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಿಡಬ್ಲ್ಯೂಸಿ ಸಭೆಯನ್ನು ಶೀಘ್ರದಲ್ಲಿ ಕರೆಯುವ ಕುರಿತು ಸೂಚಿಸಿದ್ದರು. ಅದರ ಪ್ರಕಾರ, ಮುಂದಿನ ದಿನಗಳಲ್ಲಿ ಸಿಡಬ್ಲ್ಯೂಸಿ ಸಭೆ ನಡೆಯಲಿದೆ ಎಂದು ಸುರ್ಜೆವಾಲಾ ಹೇಳಿದ್ದಾರೆ.
ಪಕ್ಷದ ಹಿರಿಯ ನಾಯಕರಾದ ಕಪಿಲ್ ಸಿಬಲ್ ಮತ್ತು ಗುಲಾಂ ನಬಿ ಆಜಾದ್ ಅವರು ಸಿಡಬ್ಲ್ಯೂಸಿಯನ್ನು ತಕ್ಷಣವೇ ಕರೆಯಬೇಕೆಂದು ಒತ್ತಾಯಿಸಿದ ಒಂದು ದಿನದ ನಂತರ ಈ ಸ್ಪಷ್ಟೀಕರಣವು ಬಂದಿದೆ. ಬುಧವಾರ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಸಿಬಲ್, ಕಾಂಗ್ರೆಸ್ ಪಕ್ಷದ ಪ್ರಸ್ತುತ ಸ್ಥಿತಿಯನ್ನು ನೋಡಿದರೆ ತಮ್ಮ ಹೃದಯ ಒಡೆಯುತ್ತದೆ ಎಂದು ಹೇಳಿದ್ದರು. ಅಲ್ಲದೆ. ಜಿ -23 ಜೀ ಹುಜೂರ್ 23 ಅಲ್ಲ ಎಂದು ಒತ್ತಿ ಹೇಳಿದ್ದರು.
ನಮ್ಮ ಪಕ್ಷದಲ್ಲಿ ಸದ್ಯಕ್ಕೆ ಅಧ್ಯಕ್ಷರಿಲ್ಲ. ಆದ್ದರಿಂದ ಯಾರು ಈ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆಂದು ನಮಗೆ ತಿಳಿದಿಲ್ಲ. ತಕ್ಷಣವೇ ಸಿಡಬ್ಲ್ಯೂಸಿಯನ್ನು ಕರೆಯಲು ನನ್ನ ಹಿರಿಯ ಸಹೋದ್ಯೋಗಿಯೊಬ್ಬರು ಕಾಂಗ್ರೆಸ್ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ ಎಂದು ನಾನು ನಂಬುತ್ತೇನೆ. ಆದ್ದರಿಂದ ನಾವು ಸಾರ್ವಜನಿಕವಾಗಿ ಮಾತನಾಡಲು ಸಾಧ್ಯವಾಗದ ಕೆಲವು ವಿಷಯಗಳನ್ನು ನಾವು ಸಿಡಬ್ಲ್ಯೂಸಿಯಲ್ಲಿ ಮಾತನಾಡುತ್ತೇವೆ ಎಂದು ಸಿಬಲ್ ಹೇಳಿದ್ದರು.
ಸಿಬಲ್‌ ಅವರು ಗಾಂಧಿ ಕುಟುಂಬವನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಿದ್ದಕ್ಕಾಗಿ ನಂತರ ಸಿಬಲ್ ನಿವಾಸದ ಹೊರಗೆ ಪ್ರತಿಭಟನೆಗಳು ನಡೆದವು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ