ಕಾಂಗ್ರೆಸ್ಸಿನಲ್ಲಿ ಕಾಣುತ್ತಿರುವ ಬಿಕ್ಕಟ್ಟಿಗೆ ಮೂವರು ಗಾಂಧಿಗಳೇ ಹೊಣೆ: ಮಾಜಿ ಕೇಂದ್ರ ಸಚಿವ ನಟ್ವರ್ ಸಿಂಗ್ ವಾಗ್ದಾಳಿ

ನವದೆಹಲಿ: ಮಾಜಿ ವಿದೇಶಾಂಗ ಸಚಿವ ನಟ್ವರ್ ಸಿಂಗ್ ಕಾಂಗ್ರೆಸ್ ತೊರೆದಿದ್ದರೂ ಅದರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಪ್ರಸ್ತುತ ಕಾಂಗ್ರೆಸ್ ವಿದ್ಯಮಾನದ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿನ ಬಿಕ್ಕಟ್ಟಿಗೆ ಸೋನಿಯಾ, ರಾಹುಲ್ ಹಾಗೂ ಪ್ರಿಯಾಂಕಾ ಈ ಮೂವರು ಗಾಂಧಿಗಳೇ ಹೊಣೆಗಾರರು ಎಂದು ವಾಗ್ದಾಳಿ ನಡೆಸಿರುವ ಅವರು, ರಾಹುಲ್ ಗಾಂಧಿ ಯಾವುದೇ ಸ್ಥಾನ ಹೊಂದದಿದ್ದರೂ ಪಕ್ಷಕ್ಕೆ ದೊಡ್ಡ ಹೊಡೆತ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಪಕ್ಷಕ್ಕೆ ಹಾನಿ ಮಾಡುತ್ತಿರುವವರು ಗುಲಾಂ ನಬಿ ಅಜಾದ್ ಅಲ್ಲ, ಎಕೆ ಆಂಟನಿ ಅಲ್ಲ, ಕಾರ್ಯಕಾರಿ ಸಮಿತಿಯಲ್ಲಿ ಯಾರು ಇಲ್ಲ, ಮೂವರು ಗಾಂಧಿಗಳೇ ಕಾಂಗ್ರೆಸ್ಸಿಗೆ ಹಾನಿ ಮಾಡುತ್ತಿದ್ದಾರೆ ಎಂದು ಅವರು ಎಂದು ಸಿಎಎನ್ ನ್ಯೂಸ್ 18 ಸಂದರ್ಶನದಲ್ಲಿ ಹೇಳಿದ್ದಾರೆ.
ಕಾಂಗ್ರೆಸ್‌ ಪಕ್ಷದಲ್ಲಿ ಬದಲಾವಣೆಗೆ ಹಾಗೂ ಬೇರೆಯವರಿಗೆ ಈ ಗಾಂಧಿಗಳು ಅವಕಾಶ ನೀಡುತ್ತಿಲ್ಲ. ರಾಹುಲ್ ಗಾಂಧಿ 2002ರಿಂದ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆಗಿನಿಂದಲೂ ಸಂಸದರಾಗಿದ್ದಾರೆ. ಅವರಿಗೆ 50 ವರ್ಷ ವಯಸ್ಸಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಯುವಕರ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪಂಜಾಬಿನಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಟ್ವರ್ ಸಿಂಗ್, ಇದು ನಿಜವಾಗಿಯೂ ಆಘಾತಕಾರಿ ವಿಷಯ. ಅವರು ದೇಶದ ಹಿರಿಯ ಮುಖ್ಯಮಂತ್ರಿಗಳು ಹಾಗೂ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು. ಒಂಬತ್ತೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅವರು ಒಳ್ಳೆಯ ಕೆಲಸಗಳನ್ನು ಮಾಡಿದ್ದರು. ಆದರೆ, ಅವರಿಂದ ಯಾವುದೇ ವಿವರಣೆ ಕೇಳದೆ, ಏಕಾಏಕಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗಿದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೇ ನಷ್ಟವಾಗಲಿದೆ ಎಂದು ಹೇಳಿದ ಅವರು, ಅಮರಿಂದರ್‌ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂದು ಪ್ರಶ್ನಿಸಿದರು. ಸಿಧು ಅತ್ಯುತ್ತಮ ಕ್ರಿಕೆಟಿಗರಷ್ಟೆ. ಅವರು ಅದಕ್ಕೇ ಮರಳುವುದು ಸೂಕ್ತ ಎಂದು ಹೇಳಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ