
ಬೆಂಗಳೂರು: ಕನ್ನಡ ಕಿರುತೆರೆಗಳಲ್ಲಿ ನಟಿಸುತ್ತಿದ್ದ ನಟಿ ಸೌಜನ್ಯ ಇಂದು (ಗುರುವಾರ) ಬೆಂಗಳೂರಿನ ದೊಡ್ಡಬೆಲೆ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಸನ್ ವರ್ತ್ ಅಪಾರ್ಟ್ಮೆಂಟ್ನಲ್ಲಿ ಕಿರುತೆರೆ ನಟಿ ಸೌಜನ್ಯ (25) ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ದೊಡ್ಡಬೆಲೆ ಗ್ರಾಮದ ಕುಂಬಳಗೋಡು ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ನಟಿ ಸೌಜನ್ಯ(25) ಇಂದು ಬೆಳಗ್ಗೆ ಪಿಎಗೆ ತಿಂಡಿ ತರಲು ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಡೇತ್ ನೋಟ್ನಲ್ಲಿ ನನ್ನ ಸಾವಿಗೆ ನಾನೇ ಕಾರಣ, ಬೇರೆ ಯಾರೂ ಕಾರಣವಲ್ಲ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನದ ನೋವನ್ನ ಅಕ್ಷರಕ್ಕಿಳಿಸಿದ್ದಾರೆ. ಅಮ್ಮ-ಅಮ್ಮ ನನ್ನನ್ನು ಕ್ಷಮಿಸಿ. ನಾನು ನಿಮ್ಮಿಬ್ಬರನ್ನೂ ತುಂಬಾ ಪ್ರೀತಿಸುವೆ. ಸದ್ಯ ನನ್ನ ಮನಸ್ಥಿತಿ ಸರಿ ಇಲ್ಲ. ಅನಾರೋಗ್ಯ ನನ್ನನ್ನು ತೀವ್ರವಾಗಿ ಕಾಡುತ್ತಿದೆ. ನಾನು ಸಾವಿನ ಮನೆಗೆ ಹೋಗುತ್ತಿದ್ದೇನೆ. ಕ್ಷಮಿಸಿ ಎಂದು ಸ್ನೇಹಿತರು ಮತ್ತು ಸಹೋದರರ ಹೆಸರನ್ನೂ ಬರೆದಿದ್ದಾರೆ.
ಸೌಜನ್ಯ ಮೂಲತಃ ಕೊಡಗು ಜಿಲ್ಲೆಯ ಕುಶಾಲನಗರದವರಾಗಿದ್ದು, ಕನ್ನಡದ ಚೌಕಟ್ಟು, ಫನ್ ಎಂಬ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕೋವಿಡ್ 19 ನಿಂದ ಚಿತ್ರರಂಗದ ಚಟುವಟಿಕೆ ಸ್ಥಗಿತಗೊಂಡು ಅವಕಾಶ ಸಿಗದ ಕಾರಣ ಖಿನ್ನತೆಗೆ ಒಳಗಾಗಿ ಸೌಜನ್ಯ ಆತ್ಮಹತ್ಯೆಗೆ ಶರಣಾರಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.ಸ್ಥಳಕ್ಕೆ ಕುಂಬಳಗೋಡು ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ