ಇಸಿಎಲ್‌ಜಿಎಸ್‌: ಎಂಎಸ್​ಎಂಇ ತುರ್ತು ಸಾಲ ಯೋಜನೆ ಅವಧಿ 2022ರ ಮಾರ್ಚ್ ತನಕ ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ಹಣಕಾಸು ಸಚಿವಾಲಯವು ಸೆಪ್ಟೆಂಬರ್ 29ರಂದು ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ECLGS) ವ್ಯಾಪ್ತಿಯನ್ನು ಆರು ತಿಂಗಳವರೆಗೆ, ಅಂದರೆ ಮಾರ್ಚ್ 2022ರ ವರೆಗೆ ವಿಸ್ತರಿಸಿದೆ.
ಕೊವಿಡ್ 19 ಸಾಂಕ್ರಾಮಿಕದ ಎರಡನೇ ಅಲೆಯಿಂದ ಪ್ರಭಾವಕ್ಕೆ ಒಳಗಾಗಿರುವ ವಿವಿಧ ವ್ಯವಹಾರಗಳನ್ನು ಬೆಂಬಲಿಸುವ ದೃಷ್ಟಿಯಿಂದ, ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ECLGS) ಗಡುವನ್ನು 31.03.2022ರ ವರೆಗೆ ಅಥವಾ 4.5 ಲಕ್ಷ ಕೋಟಿ ರೂಪಾಯಿಯ ಮೊತ್ತದ ಗ್ಯಾರಂಟಿ ವರೆಗೆ ಈ ಎರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಯೋಜನೆಯ ಅಡಿಯಲ್ಲಿ ವಿತರಣೆಯ ಕೊನೆಯ ದಿನಾಂಕವನ್ನು ಸಹ ಜೂನ್ 30, 2022ರ ವರೆಗೆ ವಿಸ್ತರಿಸಲಾಗಿದೆ. ಕೊವಿಡ್ -19 ಬಿಕ್ಕಟ್ಟಿನಿಂದ ಉಂಟಾಗುವ ಒತ್ತಡವನ್ನು ತಗ್ಗಿಸಲು 3 ಲಕ್ಷ ಕೋಟಿ ರೂಪಾಯಿಯ ಇಸಿಎಲ್‌ಜಿಎಸ್ ಅನ್ನು ಹಲವು ವಲಯಗಳಿಗೆ ಪರಿಚಯಿಸಲಾಗಿದೆ. ಈ ಯೋಜನೆಯನ್ನು 20 ಲಕ್ಷ ಕೋಟಿ ರೂಪಾಯಿಯ ಕೊವಿಡ್-19 ಪರಿಹಾರ ಪ್ಯಾಕೇಜಿನ ಭಾಗವಾಗಿ ಘೋಷಿಸಿ, 2020ರ ಮೇ ತಿಂಗಳಲ್ಲಿ ಇದನ್ನು ಆತ್ಮನಿರ್ಭರ ಭಾರತ್ ಅಭಿಯಾನ್ ಎಂದು ಕರೆಯಲಾಯಿತು. ಈ ವರ್ಷದ ಆರಂಭದಲ್ಲಿ ಸರ್ಕಾರವು ಇದರ ಮಿತಿಯನ್ನು 4.5 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಿತು ಮತ್ತು ಜೂನ್ 30ರಿಂದ ಸೆಪ್ಟೆಂಬರ್ 30ರ ವರೆಗೆ ಯೋಜನೆಯ ಅವಧಿಯನ್ನು 3 ತಿಂಗಳು ವಿಸ್ತರಿಸಿತು.
ಕೊವಿಡ್ -19 ಬಿಕ್ಕಟ್ಟಿನಿಂದ ಬಳಲುತ್ತಿರುವ ಮತ್ತು ವರ್ಕಿಂಗ್ ಕ್ಯಾಪಿಟಲ್ ಪೂರೈಸಲು ಕಷ್ಟಪಡುತ್ತಿರುವ ವ್ಯಾಪಾರ ಸಂಸ್ಥೆಗಳಿಗೆ ತುರ್ತು ಸಾಲವನ್ನು ವಿಸ್ತರಿಸಿ ಉತ್ತೇಜಿಸಲು ಅನುವು ಮಾಡಿಕೊಡುವ ಸಲುವಾಗಿ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFCs) ಮತ್ತು ಇತರ ಸಾಲ ನೀಡುವ ಸಂಸ್ಥೆಗಳಿಗೆ ಶೇ 100ರಷ್ಟು ಖಾತ್ರಿ ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಸೆಪ್ಟೆಂಬರ್ 24, 2021ರ ಹೊತ್ತಿಗೆ 2.86 ಲಕ್ಷ ಕೋಟಿ ರೂಪಾಯಿ ಸಾಲ ಮಂಜೂರು ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಒಟ್ಟು ಖಾತ್ರಿಗಳ ಪೈಕಿ ಶೇ 95ರಷ್ಟು ಕಿರು, ಸಣ್ಣ ಮತ್ತು ಮಧ್ಯಮ ಸಂಸ್ಥೆಗಳಿಗೆ ಮಂಜೂರು ಮಾಡಲಾಗಿದೆ ಎಂದು ಅದು ಹೇಳಿದೆ. ಕೊವಿಡ್​ನ ಎರಡನೇ ಅಲೆಯಿಂದ ಪ್ರಭಾವಿತವಾದ ವ್ಯವಹಾರಗಳಿಗೆ ಬೆಂಬಲ ನೀಡಲು ಸರ್ಕಾರವು ಈ ಯೋಜನೆಯಲ್ಲಿ ಕೆಲವು ಮಾರ್ಪಾಡುಗಳನ್ನು ಘೋಷಿಸಿದೆ.
ಗರಿಷ್ಠ 200 ಕೋಟಿ ರೂಪಾಯಿ
“ECLGS 1.0 ಮತ್ತು 2.0 ಅಡಿಯಲ್ಲಿ ಅಸ್ತಿತ್ವದಲ್ಲಿರುವ ಸಾಲಗಾರರು 29.02.2020 ಅಥವಾ 31.03.2021ರವರೆಗಿನ ಒಟ್ಟು ಕ್ರೆಡಿಟ್‌ನ ಶೇ 10ರ ವರೆಗಿನ ಸಾಲಕ್ಕೆ ಅಥವಾ ಯಾವುದು ಹೆಚ್ಚೋ ಆ ಮೊತ್ತದ ಕ್ರೆಡಿಟ್ ಬೆಂಬಲಕ್ಕೆ ಅರ್ಹರಾಗಿರುತ್ತಾರೆ,” ಎಂದು ಸಚಿವಾಲಯ ಹೇಳಿದೆ. ಅಲ್ಲದೆ, ECLGS 1.0 ಅಥವಾ 2.0 ಅಡಿಯಲ್ಲಿ ಕ್ರೆಡಿಟ್ ಪಡೆಯದ ವ್ಯಾಪಾರಿಗಳು 31.03.2021 ರವರೆಗಿನ ತಮ್ಮ ಕ್ರೆಡಿಟ್ ಬಾಕಿಯ ಶೇ 30ರಷ್ಟು ಮತ್ತು ECLGS 3.0 ಅಡಿಯಲ್ಲಿರುವ ವಲಯಗಳು ತಮ್ಮ ಕ್ರೆಡಿಟ್ ಬಾಕಿಯ ಶೇ 40ವರೆಗೆ ಕ್ರೆಡಿಟ್ ಬೆಂಬಲವನ್ನು ಪಡೆಯಬಹುದು. 31.03.2021 ಅನ್ವಯ ಆಗುವಂತೆ ಒಬ್ಬ ಸಾಲಗಾರರಿಗೆ ಗರಿಷ್ಠ 200 ಕೋಟಿ ರೂ. ಇದೆ.
ಇಸಿಎಲ್‌ಜಿಎಸ್ ಅನ್ನು ಆರಂಭದಲ್ಲಿ ಎಂಎಸ್‌ಎಂಇ (ಕಿರು, ಸಣ್ಣ, ಮಧ್ಯಮ ಸಂಸ್ಥೆ) ವಲಯಕ್ಕೆ ಘೋಷಿಸಲಾಯಿತು. ಆದರೆ ನಂತರ ವಿವಿಧ ಪರಿಷ್ಕರಣೆಗಳೊಂದಿಗೆ ಆರೋಗ್ಯ ರಕ್ಷಣೆ, ಆತಿಥ್ಯದಲ್ಲಿ ವ್ಯಾಪಾರ ಉದ್ಯಮಗಳು, ಪ್ರವಾಸ ಮತ್ತು ಪ್ರವಾಸೋದ್ಯಮ ಮತ್ತು ವಾಯುಯಾನದಿಂದ ಗುರುತಿಸಲಾದ 26 ಒತ್ತಡ ವಲಯಗಳಿಗೆ ಇದನ್ನು ವಿಸ್ತರಿಸಲಾಯಿತು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2024 : 2ನೇ ಹಂತದ 88 ಕ್ಷೇತ್ರಗಳಲ್ಲಿ 63% ಮತದಾನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement