ಅಕ್ಟೋಬರ್ ಮೊದಲ ವಾರದಿಂದ ಮಾರ್ಚ್‌-2020ರಲ್ಲಿ ಇದ್ದಂತೆ ಎನ್‌ಡಬ್ಲ್ಯುಕೆಆರ್‌ಟಿಸಿ ಪ್ರತಿಷ್ಠಿತ ಸಾರಿಗೆಗಳ ಪುನಾರಂಭ.. ವಿಶೇಷ ರಿಯಾಯ್ತಿ

ಹುಬ್ಬಳ್ಳಿ: ಸಾಲುಸಾಲು ಹಬ್ಬದ ರಜೆಗಳಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ ಮೊದಲ ವಾರದಿಂದ ಮಾರ್ಚ್‌-2020ರಲ್ಲಿ ಇದ್ದಂತೆ ಪ್ರತಿಷ್ಠಿತ ಸಾರಿಗೆಗಳ ಕಾರ್ಯಾಚರಣೆಯನ್ನು ಪುನಾರಂಭ ಮಾಡಲಾಗುವುದು ಎಂದು ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಕೋವಿಡ್-19 ರಿಂದ ವಿರಳ ಜನಸಂದಣಿಯಿಂದಾಗಿ ಪೂರ್ಣ ಪ್ರಮಾಣದಲ್ಲಿ ಪ್ರತಿಷ್ಠಿತ ಸಾರಿಗೆಗಳನ್ನು ಪ್ರಾರಂಭಿಸಿರಲಿಲ್ಲ. ಆದರೆ ಬೇಡಿಕೆಗಳಿಗೆ ಅನುಗುಣವಾಗಿ ಮುಂಗಡ ಟಿಕೇಟಗಳ ಸಂಖ್ಯೆಗಳನ್ನಾಧರಿಸಿ ಮಾತ್ರ ಕಾರ್ಯಾಚರಣೆ ಮಾಡಲಾಗುತ್ತಿತ್ತು. ಆದರೆ ಈಗ ಪ್ರತಿಷ್ಠಿತ ಸಾರಿಗೆ ಪ್ರಾರಂಭಿಸಲು ಪ್ರಯಾಣಿಕರ ಬೇಡಿಕೆ ಹೆಚ್ಚಾಗುತ್ತಿದೆ ಮತ್ತು ಅಕ್ಟೋಬರ್-2021 ತಿಂಗಳಲ್ಲಿ ಸಾಲು ಸಾಲು ಹಬ್ಬದ ರಜೆಗಳಿರುವ ಹಿನ್ನೆಲೆಯಲ್ಲಿ, ಮಾರ್ಚ್‌-2020ರಲ್ಲಿ ಇದ್ದಂತೆ ಸಂಸ್ಥೆಯ ಪ್ರತಿಷ್ಠಿತ ಸಾರಿಗೆಗಳನ್ನು ಪೂರ್ಣ ಪ್ರಮಾಣದಲ್ಲಿ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಬಾಗಲಕೋಟೆ, ಗದಗ, ಚಿಕ್ಕೋಡಿ ವಿಭಾಗಗಳ ಪ್ರಮುಖ ಸ್ಥಳಗಳಿಂದ ರಾಜ್ಯದ ಬೆಂಗಳೂರು, ಮಂಗಳೂರು, ಮೈಸೂರು, ಹಾಗೂ ನೆರೆ ರಾಜ್ಯದ ತಿರುಪತಿ, ಹೈದರಾಬಾದ, ಚೆನ್ನೈ, ಮುಂಬಯಿ, ಪುಣೆ ಹಾಗೂ ಗೋವಾ ಮುಂತಾದ ಸ್ಥಳಗಳಿಗೆ ಅಕ್ಟೋಬರ್-2021 ರ ಮೊದಲ ವಾರದಿಂದ ಪುನರಾರಂಭಿಸಲಾಗುತ್ತಿದೆ. ಸಂಸ್ಥೆಯ ಒಟ್ಟು 29 ವೋಲ್ವೊ ಮಲ್ಟಿ ಆಕ್ಸಲ್, 30 ಎ.ಸಿ.-ಸ್ಲೀಪರ್, 58 ನಾನ್-ಎ.ಸಿ.-ಸ್ಲೀಪರ್ ಹಾಗೂ 56 ರಾಜಹಂಸ ಹೀಗೆ ಒಟ್ಟು 173 ಪ್ರತಿಷ್ಠಿತ ಸಾರಿಗೆ ಅನುಸೂಚಿಗಳನ್ನು ಪ್ರೋತ್ಸಾಹಕ ದರಗಳೊಂದಿಗೆ ಪುನರಾರಂಭಿಸಲಾಗುತ್ತಿದೆ ಎಂದು ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತಿಳಿಸಿದೆ.
ಸಾರ್ವಜನಿಕ ಪ್ರಯಾಣಿಕರು ksrtc mobile app ಡೌನ್‌ಲೋಡ್ ಮಾಡಿಕೊಂಡು ಪ್ರತಿಷ್ಠಿತ ಮತ್ತು ವೇಗದೂತ ಸಾರಿಗೆಗಳಲ್ಲಿ ಮುಂಗಡ ಟಿಕೆಟನ್ನು ಸುಲಭವಾಗಿ ಕಾಯ್ದಿರಿಸಬಹುದು ಹಾಗೂ ದೂರದ ಮಾರ್ಗಗಳ ಬಸ್‌ ಸಂಚಾರಗಳ ವೇಳಾಪಟ್ಟಿ ಸಹ ತಿಳಿದುಕೊಳ್ಳಬಹುದಾಗಿದೆ. ಇತರೆ ಮಾಹಿತಿಯನ್ನು ಸಂಸ್ಥೆಯ ವೆಬ್‌ಸೈಟ್ www.ksrtc.in ಮತ್ತು ಸಂಸ್ಥೆಯ ಬಸ್ ನಿಲ್ದಾಣಗಳ ಹಾಗೂ ಸಂಸ್ಥೆಯಿಂದ ಗುರುತಿಸಲ್ಪಟ್ಟ ಅಧಿಕೃತ ಖಾಸಗಿ ಬುಕಿಂಗ್ ಕೌಂಟರ್‌ಗಳ ಮೂಲಕವೂ ಸಹ ಮುಂಗಡ ಟಿಕೆಟ್‌ ಕಾಯ್ದಿರಿಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಿಕೊಳ್ಳುವ ಪ್ರಯಾಣಿಕರಿಗೆ ಸಂಸ್ಥೆಯ ವತಿಯಿಂದ ರಿಯಾಯಿತಿ ಸಹ ಪ್ರಕಟಿಸಲಾಗಿದೆ.
*ಒಂದೇ ಟಿಕೆಟಿನಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಸೀಟುಗಳನ್ನು ಮುಂಗಡವಾಗಿಕಾಯ್ದಿರಿಸಿದಲ್ಲಿ ಮೂಲ ದರದ 5% ರಷ್ಟು ರಿಯಾಯಿತಿ ನೀಡಲಾಗುತ್ತದೆ.
*ಮರು ಪ್ರಯಾಣದ ರಿಯಾಯಿತಿ- ಒಂದೇ ವಹಿವಾಟಿನ ಅವಧಿಯಲ್ಲಿ (onward and return journey) ಪ್ರಯಾಣದ ಮತ್ತು ಮರುಪ್ರಯಾಣದ ಟಿಕೆಟುಗಳನ್ನು ಕಾಯ್ದಿರಿಸಿದಾಗ ಮೂಲ ಪ್ರಯಾಣ ದರದಲ್ಲಿ 10% ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
* ಹವಾನಿಯಂತ್ರಿತ ಸೇವೆಗಳನ್ನು ಹೊರತುಪಡಿಸಿ ನಗರ ಸಾರಿಗೆ ಸೇವೆಗಳಲ್ಲಿ ಉಚಿತ ಪ್ರಯಾಣ- ಮುಂಗಡ ಕಾಯ್ದಿರಿಸುವಿಕೆ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಪ್ರಯಾಣದ ಸಮಯಕ್ಕಿಂತ ಮುಂಚಿತವಾಗಿ 2 ಗಂಟೆಗಳ ಒಳಗೆ ನಗರ ಸಾರಿಗೆಗಳಲ್ಲಿ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಟಿಕೆಟ್‌ ಮತ್ತು ಗುರುತಿನ ಚೀಟಿ ತೋರಿಸಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.

ಮುಂಗಡ ಟಿಕೆಟ್‌ ಕಾಯ್ದಿರಿಸುವಿಕೆ ಮುಂತಾದ ಮಾಹಿತಿಗಳನ್ನು ಪಡೆಯಲು ಸಂಸ್ಥೆಯ ಅವತಾರ್ ಶಾಖೆಯ ಮೊಬೈಲ್ ಸಂಖ್ಯೆ-7349766655 ಸಂಪರ್ಕಿಸಲು ಕೋರಿದೆ.
ಈ ಸೌಲಭ್ಯದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ಗುರುದತ್ತ ಹೆಗಡೆ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement