ಹಂಪಿಯಲ್ಲಿ ಹೆಲಿ ಟೂರಿಸಂಗೆ ಅವಕಾಶ: ಸಿಎಂ ಬೊಮ್ಮಾಯಿ

posted in: ರಾಜ್ಯ | 0

ಹೊಸಪೇಟೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಜಯನಗರ ಜಿಲ್ಲೆಯಲ್ಲಿ ಮಹತ್ವದ ಪಾರಂಪರಿಕ ಪ್ರವಾಸೀ ಸ್ಥಳಗಳ ಅಭಿವೃದ್ಧಿಗಾಗಿ 643 ಕೋಟಿ ರೂ.ಗಳ ವಿಶೇಷ ಯೋಜನೆ ರೂಪಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ
ಅವರು ಅಕ್ಟೋಬರ್‌ 2ರಂದು ಹೊಸಪೇಟೆ ಕೇಂದ್ರ ಸ್ಥಾನವಾಗಿ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ರಾಜ್ಯದ 31 ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆಯ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ವಿಶ್ವ ಪಾರಂಪರಿಕ ತಾಣ ಹಂಪಿಗೆ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತಾಗಬೇಕು. ಅದಕ್ಕಾಗಿ ಹೆಲಿ ಟೂರಿಸಂಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
ಈ ವಿಜಯನಗರ ಜಿಲ್ಲೆಗೆ ಶ್ರೀಮಂತ ಪರಂಪರೆ ಇದೆ. ಈ ಜಿಲ್ಲೆಗೆ 83 ಎಕರೆ ವಿಸ್ತೀರ್ಣದ ವಿಶಾಲವಾದ ಜಿಲ್ಲಾಡಳಿತ ಕೇಂದ್ರ ಸ್ಥಾಪನೆಗೆ ಸರ್ಕಾರ ಆರ್ಥಿಕ ನೆರವನ್ನು ನೀಡಿದೆ. ಇಂದು 337 ಕೋಟಿ ರೂ.ಗಳ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ವಿಜಯನಗರ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿನ ಹಳ್ಳಿಗಳ ಕಟ್ಟಕಡೆಯ ಕುಟುಂಬವೂ ನೆಮ್ಮದಿಯಿಂದ ಬದುಕಲು ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಬೇಕಿದೆ ಅದಕ್ಕಾಗಿ ಪ್ರತಿಯೊಂದು ಗ್ರಾಮಪಂಚಾಯತಿಯ ಜನರಿಗೆ ಸರ್ಕಾರದ ಎಲ್ಲ ಸೇವೆಗಳನ್ನು ಸಮರ್ಪಿಸುವ ಕಾರ್ಯವನ್ನು ಮುಂದಿನ ಜನವರಿ 26 ರಂದು ಪ್ರಾರಂಭಿಸಲಾಗುವುದು ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಆನಂದ ಸಿಂಗ್, ಗೋವಿಂದ ಕಾರಜೋಳ, ಡಾ.ಸಿ.ಎನ್ ಅಶ್ವತ್ಥನಾರಾಯಣ, ಸಿ.ಸಿ. ಪಾಟೀಲ್. ಬೈರತಿ ಬಸವರಾಜ, ಬಿ.ಶ್ರೀರಾಮುಲು, ಸುನಿಲ್ ಕುಮಾರ್, ವಿವಿಧ ಮಠಾಧೀಶರು ಭಾಗವಹಿಸಿದ್ದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ