ನವದೆಹಲಿ: ನ್ಯಾಯಾಲಯಗಳು ಯಾವುದೇ ವ್ಯಕ್ತಿಯನ್ನು ಡಿಎನ್‌ಎ ಪರೀಕ್ಷೆಗೆ ಯಾಂತ್ರಿಕವಾಗಿ ಆದೇಶಿಸಬಾರದು. ಮಹತ್ವವಿರುವ ಅರ್ಹ ಪ್ರಕರಣಗಳಲ್ಲಿ ಮಾತ್ರವೇ ಡಿಎನ್‌ಎ ಪರೀಕ್ಷೆಗೆ ಅದೇಶಿಸಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.
ಉಭಯ ಪಕ್ಷಕಾರರ ಹಿತಾಸಕ್ತಿಯಲ್ಲಿ ಸಮತೋಲನ ಸಾಧಿಸಿದ ನಂತರವಷ್ಟೇ ನ್ಯಾಯಾಲಯಗಳು ಈ ನಿಟ್ಟಿನಲ್ಲಿ ತಮ್ಮ ವಿವೇಚನೆಯನ್ನು ಬಳಸಬೇಕು ಹಾಗೂ ನ್ಯಾಯಯುತ ನಿರ್ಧಾರಕ್ಕಾಗಿ ಡಿಎನ್‌ಎ ಪರೀಕ್ಷೆಯ ಅಗತ್ಯವಿದೆಯೇ ಎಂದು ಮನಗಂಡ ನಂತರವೇ ಆದೇಶಿಸಬೇಕು ಎಂದು ನ್ಯಾ. ಆರ್. ಸುಭಾಷ್ ರೆಡ್ಡಿ ಮತ್ತು ನ್ಯಾ. ಹೃಷಿಕೇಷ್ ರಾಯ್ ಅವರಿದ್ದ ಪೀಠ ಹೇಳಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ಇತರ ಪುರಾವೆಗಳು ಲಭ್ಯವಿರುವ ಸಂದರ್ಭಗಳಲ್ಲಿ, ಸಂಬಂಧ ಸಾಬೀತುಪಡಿಸಲು ಅಥವಾ ಪ್ರಶ್ನಿಸಲು ನ್ಯಾಯಾಲಯವು ಯಾಂತ್ರಿಕವಾಗಿ ರಕ್ತ ಪರೀಕ್ಷೆಗೆ ಆದೇಶಿಸುವುದನ್ನು ತಡೆಯಬೇಕು. ಏಕೆಂದರೆ ಇಂತಹ ಪರೀಕ್ಷೆಗಳು ವ್ಯಕ್ತಿಯ ಖಾಸಗಿತನದ ಹಕ್ಕಿಗೆ ಧಕ್ಕೆಗೊಳಿಸುವ ಮೂಲಕ ಪ್ರಮುಖ ಸಾಮಾಜಿಕ ಪರಿಣಾಮಗಳಿಗೆ ಕಾರಣವಾಗಬಹುದು” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಉಭಯ ಪಕ್ಷಗಳ ಹಿತ ಕಾಯಬೇಕಾದ ಸಂದರ್ಭದಲ್ಲಿ ಹಾಗೂ ಪರೀಕ್ಷೆಯ ಅಗತ್ಯತೆಯು ಗುರುತರವಾಗಿ ಅವಶ್ಯಕವಿರದಿದ್ದಲ್ಲಿ ಸಂಬಂಧಪಟ್ಟ ವ್ಯಕ್ತಿಯ ಖಾಸಗಿ ಹಕ್ಕನ್ನು ರಕ್ಷಿಸುವುದು ಆದ್ಯತೆಯಾಗಬೇಕು ಎಂದು ಕೋರ್ಟ್ ಹೇಳಿದೆ.
ಸಂಬಂಧವನ್ನು ಸಾಬೀತುಪಡಿಸಲು ಅಥವಾ ವಿವಾದಿಸಲು ಪುರಾವೆಗಳು ಲಭ್ಯವಿರುವ ಸಂದರ್ಭಗಳಲ್ಲಿ, ನ್ಯಾಯಾಲಯ ರಕ್ತ ಪರೀಕ್ಷೆಗೆ ಆದೇಶಿಸುವುದನ್ನು ತಡೆಯಬೇಕು ಏಕೆಂದರೆ ಅವು ಖಾಸಗಿತನದ ಹಕ್ಕಿಗೆ ಧಕ್ಕೆ ತರುತ್ತವೆ. ಒಬ್ಬ ವ್ಯಕ್ತಿಯನ್ನುಅಕ್ರಮ ಸಂತಾನ ಎಂದು ಕಳಂಕಗೊಳಿಸುವಿಕೆ, ಪ್ರೌಢಾವಸ್ಥೆಯಲ್ಲಿರುವ ವ್ಯಕ್ತಿಗೆ ತಾನು ತನ್ನ ಹೆತ್ತವರ ಜೈವಿಕ ಮಗನಲ್ಲ ಎಂಬ ಮಾನಹಾನಿಕರ ಸಂಗತಿ ಖುದ್ದು ಆತನಿಗೆ ಭರಿಸಲಾಗದೇ ಹೋಗುವ ವಿಚಾರ ಮಾತ್ರವಲ್ಲದೆ ಆತನ ಖಾಸಗಿತನದ ಹಕ್ಕಿಗೆ ಕೂಡ ಧಕ್ಕೆ ತರುತ್ತದೆ ಎಂದು ನ್ಯಾಯಾಲಯ ಹೇಳಿದೆ ಎಂದು ವರದಿ ತಿಳಿಸಿದೆ.
ಕೆಎಸ್ ಪುಟ್ಟಸ್ವಾಮಿ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣದಲ್ಲಿನ ಮಹತ್ವದ ತೀರ್ಪನ್ನು ಕೂಡ ಪೀಠ ಅವಲಂಬಿಸಿತು. ಅಲ್ಲದೆ ಪ್ರಸ್ತುತ ಅರ್ಜಿದಾರರು ಸಾಕ್ಷ್ಯ ಒದಗಿಸಿದ ಬಳಿಕ ಪ್ರತಿವಾದಿಗಳು ಸಾಕ್ಷ್ಯ ನೀಡಬೇಕಾದ ವೇಳೆ ಡಿಎನ್‌ಎ ಪರೀಕ್ಷೆಗಾಗಿ ಪ್ರತಿವಾದಿಗಳು ಅರ್ಜಿ ಸಲ್ಲಿಸಿದ್ದರು ಎಂಬುದನ್ನು ನ್ಯಾಯಾಲಯ ಗಮನಿಸಿತು. ಅರ್ಜಿ ಸಲ್ಲಿಸಿರುವ ಸಂದರ್ಭವನ್ನು ಪ್ರಶ್ನಿಸಿ ವಿಚಾರಣಾ ನ್ಯಾಯಾಲಯ ಪ್ರತಿವಾದಿಗಳ ಅರ್ಜಿಯನ್ನು ವಜಾಗೊಳಿಸಿದ್ದು ಇದು ಸರಿಯಾದ ಆದೇಶ ಎಂದು ನಾವು ಭಾವಿಸುತ್ತೇವೆ ಎಂದಿದೆ. ಈ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದ ಪೀಠ ಆಕ್ಷೇಪಿಸಲಾಗಿದ್ದ ತೀರ್ಪನ್ನು ತಳ್ಳಿಹಾಕಿತು.
ಘಟನೆಯ ಹಿನ್ನೆಲೆ
ಮೃತ ದಂಪತಿಯ ಆಸ್ತಿ ಮಾಲೀಕತ್ವಕ್ಕಾಗಿ ಅರ್ಜಿದಾರರು ಕೋರಿದ್ದರು. ತಾನು ಮೃತ ದಂಪತಿಯ ಮಗ ಮತ್ತು ತನಗೆ ಆಸ್ತಿಯ ಮೇಲೆ ವಿಶೇಷ ಹಕ್ಕಿದೆ ಎಂಬ ಅರ್ಜಿದಾರರ ವಾದವನ್ನು ಮೂವರು ಹೆಣ್ಣುಮಕ್ಕಳು ನಿರಾಕರಿಸಿದ್ದರು. ಹೀಗಾಗಿ ತಮ್ಮ ತಂದೆಯೊಂದಿಗಿನ ಜೈವಿಕ ಸಂಬಂಧವನ್ನು ಸಾಬೀತುಪಡಿಸಲು ಅರ್ಜಿದಾರನನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಬೇಕು ಎಂದು ಪ್ರತಿವಾದಿಗಳು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ಬಳಿ ಕೋರಿದ್ದರು.
ಇದನ್ನು ಕಾನೂನು ಪ್ರಕ್ರಿಯೆಯ ದುರುಪಯೋಗ ಎಂದ ಅರ್ಜಿದಾರ ತಾನು ದಂಪತಿಯ ಮಗ ಎಂದು ಸಾಬೀತುಪಡಿಸುವ ಸಾಕ್ಷ್ಯಗಳನ್ನು ಮಂಡಿಸಿದ್ದರು. ವಿಚಾರಣಾ ನ್ಯಾಯಾಲಯ ಡಿಎನ್‌ಎ ಪರೀಕ್ಷೆಗೆ ಆದೇಶಿಸಲು ನಿರಾಕರಿಸಿದ್ದರಿಂದ ಪ್ರತಿವಾದಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಪ್ರತಿವಾದಿಗಳ ಪರವಾಗಿ ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ