ಲಖಿಂಪುರ್ ಹಿಂಸಾಚಾರ ಘಟನೆ: ನನ್ನ ಮಗ ವಾಹನ ಚಲಾಯಿಸುತ್ತಿರಲಿಲ್ಲ, ಇದೆಲ್ಲಾ ಷಡ್ಯಂತ್ರ -ಕೇಂದ್ರ ಸಚಿವ ಅಜಯ್ ಮಿಶ್ರಾ

ಲಕ್ನೋ: ಲಖಿಮಪುರ ಖೇರಿ ಹಿಂಸಾಚಾರದ ಕುರಿತು ಕೇಂದ್ರ ಸಚಿವ ಅಜಯ್ ಮಿಶ್ರಾ ಪ್ರತಿಕ್ರಿಯೆ ನೀಡಿದ್ದು, ಘಟನೆ ನಡೆದ ವೇಳೆ ನನ್ನ ಪುತ್ರ ಆಶೀಶ್ ಮಿಶ್ರಾ ಅಲ್ಲಿ ಇರಲೇ ಇಲ್ಲ. ಪ್ರತಿಭಟನಾಕಾರ ಗುಂಪಿನಲ್ಲಿ ಕೆಲ ಸಮಾಜ ವಿರೋಧಿಗಳು ಶಾಮೀಲಾಗಿದ್ದಾರೆ. ಪ್ರತಿಭಟನಾಕಾರು ಕಲ್ಲು ತೂರಾಟ ನಡೆಸಿ ವಾಹನಗಳನ್ನು ಪಲ್ಟಿ ಮಾಡಿದರು. ಈ ವೇಳೆ ವಾಹನಗಳ ಕೆಳಗೆ ಸಿಲುಕಿ ರೈತರಿಬ್ಬರು ಮೃತಪಟ್ಟಿದ್ದಾರೆ. ಇಡೀ ಘಟನೆ ಪಕ್ಕಾ ಪೂರ್ವನಿಯೋಜಿತವಾಗಿತ್ತು ಎಂದು ಹೇಳಿದ್ದಾರೆ.
ಗಲಾಟೆ ಸೃಷ್ಟಿಸುವ ಉದ್ದೇಶದಿಂದಲೇ ಕೆಲವರು ಗುಂಪಿನಲ್ಲಿ ಸೇರಿಕೊಂಡಿದ್ದರು ಎಂದು ಅಜಯ್ ಮಿಶ್ರಾ ಆರೋಪಿಸಿದ್ದಾರೆ. ಆರಂಭದಲ್ಲಿ ಸಚಿವರ ಪುತ್ರನ ಹೆಸರು ಅಭಿಷೇಕ್ ಎಂದು ಹೇಳಲಾಗಿತ್ತು. ಇದೀಗ ಸಚಿವರು ಅಭಿಷೇಕ್ ಅಲ್ಲ ಆಶೀಶ್ ಎಂದು ದೃಢಪಡಿಸಿದ್ದಾರೆ.
ಲಖಿಮಪುರ ಖೇರಿಯ ಹಿಂಸಾಚಾರದಲ್ಲಿ ನಮ್ಮ ಚಾಲಕ ಸೇರಿದಂತೆ ಮೂವರು ಬಿಜೆಪಿ ಕಾರ್ಯಕರ್ತರು ಸಹ ಮೃತಪಟ್ಟಿದ್ದಾರೆ. ನಮ್ಮ ಚಾಲಕ ವಾಹನ ಚಲಾಯಿಸುತ್ತಿದ್ದರು. ಇದೊಂದು ಪೂರ್ವಯೋಜಿತ ಘಟನೆ ಎಂದು ಸಚಿವರು ಆರೋಪಿಸಿದ್ದಾರೆ.
ಪುತ್ರ ಆಶೀಶ್ ಪೊಲೀಸರ ತನಿಖೆಗೆ ಸ್ಪಂದಿಸುತ್ತಿದ್ದಾರೆ. ಹಿಂಸಾಚಾರದ ಬಳಿಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿಗದಿಯಾಗಿದ್ದ ತಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಲಕ್ನೋಗೆ ಹಿಂದಿರುಗುತ್ತಿದ್ದಾರೆ. ನಗರಕ್ಕೆ ಆಗಮಿಸುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಈ ಘಟನೆಯಲ್ಲಿ ಮೃತಪಟ್ಟ ಎಂಟು ಜನರಲ್ಲಿ ನಾಲ್ವರು ರೈತರಾಗಿದ್ದರೆ, ಇನ್ನೂ ನಾಲ್ವರು ಕಾರಿನಲ್ಲಿದ್ದವರು ಎನ್ನಲಾಗಿದೆ. ಕಾರಿನಲ್ಲಿದ್ದ ಡ್ರೈವರ್ ಹಾಗೂ ಮೂವರು ಬಿಜೆಪಿ ಕಾರ್ಯಕರ್ತರನ್ನ ಉದ್ರಿಕ್ತ ಜನರು ಕೊಂದು ಹಾಕಿದರು ಎಂದು ಕೇಂದ್ರ ಸಚಿವ ಮಿಶ್ರಾ ಆರೋಪಿಸಿದ್ದಾರೆ.

ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಮೌರ್ಯ ಲಖಿಮಪುರಕ್ಕೆ ಆಗಮಿಸುತ್ತಿರುವ ವಿಷಯ ತಿಳಿದ ರೈತರು ಹೆಲಿಪ್ಯಾಡ್ ಗೆ ನುಗ್ಗಿ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಅಜಯ್ ಮಿಶ್ರಾ ಸೇರಿದಂತೆ ಇನ್ನಿತರರು ರಸ್ತೆ ಮಾರ್ಗವಾಗಿಯೇ ಲಖಿಮಪುರಕ್ಕೆ ತೆರಳಿದ್ದರು. ಕಾರ್ಯಕ್ರಮದ ನಂತರ ಹಿಂದಿರುಗುತ್ತಿದ್ದ ವೇಳೆ ರೈತರ ಗುಂಪು ಕಪ್ಪು ಬಾವುಟ ಪ್ರದರ್ಶಿಸಿ ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಈ ವೇಳೆ ಸಚಿವರ ಪುತ್ರ ರೈತರ ಮೇಲೆ ಕಾರ್ ಚಲಾಯಿಸಿದರು ಎಂಬ ಆರೋಪಗಳು ಕೇಳಿ ಬಂದಿದೆ. ಹಿಂಸಾಚಾರದಲ್ಲಿ ಪೊಲೀಸರು ಸಹ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಇಂಟರ್ ನೆಟ್ ಬಂದ್:
ಹಿಂಸಾಚಾರ ನಡೆದ ಸ್ಥಳದಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ ನಿರ್ಮಾಣವಾಗಿದೆ. ಎಡಿಜಿ ಸೇರಿದಂತೆ ಹಿರಿಯ ಪೊಲೀಸರು ಸ್ಥಳದಲ್ಲಿ ಹಾಜರಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಘಟನಾ ಸ್ಥಳದ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ