ಮುಂಬೈ ಕರಾವಳಿಯಲ್ಲಿ ಕ್ರೂಸ್‌ನಲ್ಲಿ ರೇವ್ ಪಾರ್ಟಿ ಮೇಲೆ ಎನ್‌ಸಿಬಿ ದಾಳಿ; ಸೂಪರ್‌ ಸ್ಟಾರ್‌ ನಟನ ಪುತ್ರ ಸೇರಿ 10 ಜನರ ಬಂಧನ

ಮುಂಬೈ: ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್ ಸಿಬಿ)ದವರು ಮುಂಬೈ ಕರಾವಳಿಯಲ್ಲಿ ಕ್ರೂಸ್ ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿದ್ದಾರೆ. ವರದಿಗಳ ಪ್ರಕಾರ ಸೂಪರ್‌ ಸ್ಟಾರ್ ನಟನ ಪುತ್ರ ಸೇರಿದಂತೆ 10 ಜನರನ್ನು ಬಂಧಿಸಿದ್ದಾರೆ.
ಖಚಿತ ಸುಳಿವು ಪಡೆದ ನಂತರ, ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ಇತರ ಎನ್‌ಸಿಬಿ ಅಧಿಕಾರಿಗಳು ಪ್ರಯಾಣಿಕರ ವೇಷದಲ್ಲಿ ಹಡಗನ್ನು ಹತ್ತಿದ್ದಾರೆ. ಹಡಗು ಮುಂಬಯಿಯಿಂದ ಹೊರಟು ಸಮುದ್ರದ ಮಧ್ಯೆ ತಲುಪಿದಾಗ, ರೇವ್ ಪಾರ್ಟಿ ಆರಂಭವಾಯಿತು. ತರುವಾಯ, ಫೆಡರಲ್ ಮಾದಕದ್ರವ್ಯ ವಿರೋಧಿ ಏಜೆನ್ಸಿ ಎನ್‌ಸಿಬಿ ಕಾರ್ಯಾಚರಣೆ ಆರಂಭವಾಯಿತು.
ಏಳು ಗಂಟೆಗಳ ಸುದೀರ್ಘ ಕಾರ್ಯಾಚರಣೆ ನಂತರ 10 ಜನರನ್ನು ಬಂಧಿಸಲಾಯಿತು. ಇದರಲ್ಲಿ ಸೂಪರ್‌ಸ್ಟಾರ್ ಮಗನೂ ಸೇರಿದ್ದಾನೆ ಎಂದು ತಿಳದುಬಂದಿದೆ. ಬಂಧಿತರನ್ನು ಮುಂಬೈಗೆ ಕರೆತರಲಾಗುತ್ತಿದೆ. ದೆಹಲಿ ಮೂಲದ ಕಂಪನಿಯೊಂದು ಈ ರೇವ್ ಪಾರ್ಟಿಯ ಹಿಂದೆ ಇತ್ತು ಎಂದು ಹೇಳಲಾಗುತ್ತಿದೆ. ಪಾರ್ಟಿಗೆ ಪ್ರವೇಶ ಶುಲ್ಕ ಪ್ರತಿ ವ್ಯಕ್ತಿಗೆ 80,000 ರೂ.ಗಳನ್ನು ನಿಗದಿಪಡಿಸಲಾಗಿತ್ತಂತೆ.
ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಅವರ ಗೆಳತಿಯ ಸಹೋದರ ಅಗಿಸಿಲಾವ್ ಡೆಮೆಟ್ರಿಯಡ್ಸ್ ಅವರನ್ನು ಸೈಕೋಟ್ರೊಪಿಕ್ ವಸ್ತುಗಳನ್ನು ಹೊಂದಿದ್ದ ಆರೋಪದ ಮೇಲೆ ಎನ್‌ಸಿಬಿ ಬಂಧಿಸಿದ ಕೆಲವು ದಿನಗಳ ನಂತರ ರೇವ್‌ ಪಾರ್ಟಿಯ ಮೇಲೆ ದಾಳಿ ನಡೆದಿದೆ. ದಕ್ಷಿಣ ಆಫ್ರಿಕಾದ ಪ್ರಜೆಯಾದ ಡಿಮೆಟ್ರಿಯಡ್ಸ್‌ನನ್ನು ಕಳೆದ ಎರಡು ವರ್ಷಗಳಲ್ಲಿ ಮೂರು ಬಾರಿ ಎನ್‌ಸಿಬಿ ಬಂಧಿಸಿದೆ.
ಕಳೆದ ವರ್ಷ, ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯ ಒಂದು ಅಂಗವಾಗಿ ಮುಂಬೈನ ಪ್ರಮುಖ ಡ್ರಗ್ಸ್ ಪ್ರಕರಣಗಳ ತನಿಖೆಯ ಜೊತೆಗೆ ಮುಂಬೈನಲ್ಲಿ ಡ್ರಗ್ಸ್ ಹಾವಳಿಯನ್ನು ಹೋಗಲಾಡಿಸಲು ಎನ್‌ಸಿಬಿ ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿತು.
ರಜಪೂತ್ ಸಾವಿನ ತನಿಖೆಯಿಂದ ಹೊರಬಂದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಏಜೆನ್ಸಿ ಆತನ ಲಿವ್‌-ಇನ್ ಪಾರ್ಟನರ್ ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೋವಿಕ್ ಮತ್ತು ಇತರರನ್ನು ನಾರ್ಕೋಟಿಕ್ಸ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ (ಎನ್ಡಿಪಿಎಸ್) ಕಾಯ್ದೆಯ ಹಲವಾರು ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಬಂಧಿಸಿತ್ತು. ದೀಪಿಕಾ ಪಡುಕೋಣೆ,‌ ಅವರ ಮಾಜಿ ಮ್ಯಾನೇಜರ್ ಕರಿಷ್ಮಾ ಪ್ರಕಾಶ್, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ರಕುಲ್ ಪ್ರೀತ್ ಸಿಂಗ್ ಸೇರಿದಂತೆ ಹಲವಾರು ಬಾಲಿವುಡ್ ಎ-ಲಿಸ್ಟರ್‌ಗಳನ್ನು ಫೆಡರಲ್ ಮಾದಕದ್ರವ್ಯ ವಿರೋಧಿ ಏಜೆನ್ಸಿ ವಿಚಾರಣೆಗೊಳಪಡಿಸಿದೆ.

ಪ್ರಮುಖ ಸುದ್ದಿ :-   "ನನ್ನ 90 ಸೆಕೆಂಡುಗಳ ಭಾಷಣವು ಕಾಂಗ್ರೆಸ್, ಇಂಡಿಯಾ ಮೈತ್ರಿಕೂಟದಲ್ಲಿ ತಲ್ಲಣ ಮೂಡಿಸಿದೆ" : ಪ್ರಧಾನಿ ಮೋದಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement