ಶೆಟ್ಟರ ಹೇಳಿಕೆಯಲ್ಲಿ ವಾಸ್ತವಾಂಶವಿಲ್ಲ, ಓಬಿಸಿ ಜಾತಿ ಗಣತಿ ಬಹಿರಂಗಕ್ಕೆ ರಾಜ್ಯದ ಬಿಜೆಪಿ ಸರ್ಕಾರ ಏಕೆ ಮುಂದಾಗುತ್ತಿಲ್ಲ: ವಸಂತ ಲದವಾ ಪ್ರಶ್ನೆ

ಹುಬ್ಬಳ್ಳಿ: ಹಿಂದುಳಿದ ವರ್ಗಗಳ ಜಾತಿ ಗಣತಿ ವರದಿ ಬಹಿರಂಗಕ್ಕೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಏಕೆ ಮುಂದಾಗುತ್ತಿಲ್ಲ ಎಂದು ಕಾಂಗ್ರೆಸ್‌ ವಕ್ತಾರ ವಸಂತ ಲದವಾ ಪ್ರಶ್ನಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಜಗದೀಶ ಶೆಟ್ಟರ ಅವರು ಅನೇಕ ವರ್ಷಗಳಿಂದ ರಾಜಕೀಯದಲ್ಲಿದ್ದವರು. ಸಂಪುಟ ಸಚಿವರು ಹಾಗೂ ಮುಖ್ಯಮಂತ್ರಿಗಳೂ ಆಗಿದ್ದರು. ಹಿಂದುಳಿದ ವರ್ಗಗಳ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ಅವರ ಅಧಿಕಾರಾವಧಿಯಲ್ಲಿಯೇ ಜಾತಿ ಗಣತಿ ಮಾಡಿಸಬಹುದಿತ್ತಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹಿಂದುಳಿದ ವರ್ಗಗಳಿಗೆ ನ್ಯಾಯಯುತ ಮೀಸಲಾತಿ ನಿರ್ಧರಿಸಲು ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಲು ೨೦೧೪ರಲ್ಲಿ, ೧೬೯ ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಆದೇಶಿಸಿದ್ದರು. ಆಯೋಗ ಏಪ್ರಿಲ್ ಮತ್ತು ಮೇ ತಿಂಗಳು ೨೦೧೫ರಲ್ಲಿ ಸುಮಾರು ಒಂದು ಕೋಟಿ ೧.೪೧ ಕೋಟಿ ಮನೆಗಳಿಗೆ ಸಮಕ್ಷಮ ಭೇಟಿ ನೀಡಿ, ಮಾಹಿತಿ ಸಂಗ್ರಹಿಸುವ ಕಾರ್ಯ ಮಾಡಿತು, ಆಯೋಗದ ಅಂದಿನ ಅಧ್ಯಕ್ಷರಾದ ಎಚ್. ಕಾಂತರಾಜ ಏಪ್ರಿಲ್‌ ೨೦೧೬ರಲ್ಲಿ ಸುದ್ದುಗೋಷ್ಠಿಯಲ್ಲಿ ಸುಮಾರು ೯೫%ರಷ್ಟು ಸಮೀಕ್ಷೆ ಕಾರ್ಯ ಮುಗಿದಿದ್ದು ಹಲವು ಅಂಕಿ ಸಂಖ್ಯೆ ಮಾಹಿತಿ ಇನ್ನೂ ಬರಬೇಕಾಗಿದೆ. ಈ ಕಾರಣಕ್ಕೆ ಸಮೀಕ್ಷೆ ಕಾರ್ಯ ವಿಳಂಬವಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ೨೦೧೩ರಲ್ಲಿ ಕಾಂತರಾಜ ಅಧ್ಯಕ್ಷತೆಯಲ್ಲಿ ಜಾತಿ ಗಣತಿ ನಡೆಸಿ ವರದಿ ನೀಡಿದ್ದರು ಎಂಬ ಶೆಟ್ಟರ ಹೇಳಿಕೆಯಲ್ಲಿ ಯಾವುದೇ ವಾಸ್ತವಾಂಶವಿಲ್ಲ. ಸರ್ಕಾರಿ ದಾಖಲೆಗಳ ಪ್ರಕಾರ ಎಚ್. ಕಾಂತರಾಜ ೨೦೧೩ರಲ್ಲಿ ಆಯೋಗದ ಅಧ್ಯಕ್ಷರೇ ಆಗಿರಲಿಲ್ಲ ಮತ್ತು ೨೦೧೫ರಲ್ಲಿ ವರದಿ ಸಲ್ಲಿಸಿದ್ದರೆಂಬುದು ಸತ್ಯಕ್ಕೆ ದೂರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಖ್ಯ ಮಂತ್ರಿ ಚಂದ್ರು ಅವರು ೨೦೨೧ರಲ್ಲಿ ಉಚ್ಚ ನ್ಯಾಯಾಲಯದಲ್ಲಿ ರೀಟ್ ಸಲ್ಲಿಸಿ ವರದಿ ಬಹಿರಂಗಪಡಿಸಲು ಒತ್ತಾಯಿಸಿದ್ದಾರೆಂದು ಶೆಟ್ಟರ ಹೇಳಿಕೆ ಸರಿ ಇರಬಹುದು. ಆದರೆ ರಿಟ್ ಸಲ್ಲಿಕೆ ಇಂದಿನ ಬಿಜೆಪಿ ಸರ್ಕಾರದ ವಿರುದ್ಧವೇ ಆಗಿದೆ. ಹಾಗಿದ್ದರೂ ೨೦೧೮ರಿಂದ ರಾಜ್ಯದಲ್ಲಿ ಅಧಿಕಾರದಲ್ಲಿದ್ದು ಈ ವರೆಗೂ ಆಯೋಗದ ವರದಿ ಬಹಿರಂಗ ಪಡಿಸದೇ ಕೇವಲ ರಾಜಕೀಯ ಹೇಳಿಕೆ ಏಕೆ? ಮುಖ್ಯಮಂತ್ರಿ ಚಂದ್ರು ಬೇಡಿಕೆ ಪ್ರಕಾರ ರಾಜಕೀಯ ಹೇಳಿಕೆ ಕೊಡದೆ ಆಯೋಗದ ವರದಿ ಏಕೆ ಬಹಿರಂಗ ಪಡಿಸುತ್ತಿಲ್ಲ ಎಂದು ಬಿಜೆಪಿ ಸರ್ಕಾರದವರು ರಾಜ್ಯದ ಜನರಿಗೆ ವಿವರಿಸಲಿ ಎಂದು ವಸಂತ ಲದವಾ ಒತ್ತಾಯಿಸಿದ್ದಾರೆ.
೧೯೩೧ರಲ್ಲಿ ಬ್ರಿಟಿಷ ಸರಕಾರ ಜಾತಿಗಣತಿ ಮಾಡಿದ್ದಾರೆ. ಹಾಗಾದರೆ ಸಂವಿಧಾನ ಬದ್ಧ, ಪ್ರಜಾಪ್ರಭುತ್ವ ರೀತ್ಯ ಸ್ವತಂತ್ರ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಏಕೆ ಆಗುತ್ತಿಲ್ಲ? ದೇಶದಲ್ಲಿ ಜಾನುವಾರು, ಕಾಡುಪ್ರಾಣಿ, ಪಕ್ಷಿಗಳ ಗಣತಿ ನಡೆಯುತ್ತದೆ. ಆದರೆ ಓಬಿಸಿಗಳ ಜಾತಿಗಣತಿ ಏಕಾಗಬಾರದು ಎಂಬುದರ ಬಗ್ಗೆ ಬಿಜೆಪಿಯವರು ಉತ್ತರಿಸಲಿ ಎಂದು ಹೇಳಿರುವ ಲದವಾ ಕೂಡಲೇ ಜಾತಿಗಣತಿ ವರದಿ ಪಡೆದು ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

4.5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement