ಧಾರವಾಡ: ಪಂ.ವೆಂಕಟೇಶಕುಮಾರ್‌ಗೆ ಪಂ.ರಾಜಗುರು ರಾಷ್ಟ್ರೀಯ ಪ್ರಶಸ್ತಿ ಪ್ರದಾನ

posted in: ರಾಜ್ಯ | 0

ಧಾರವಾಡ : ಸ್ವರ ಸಮ್ರಾಟ್ ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ (ರಿ) ಟ್ರಸ್ಟ್ ವತಿಯಿಂದ ಪಂ.ಬಸವರಾಜ ರಾಜಗುರು ಜನ್ಮದಿನಾಚರಣೆ ಅಂಗವಾಗಿ ನೀಡುವ ರಾಷ್ಟ್ರೀಯ ಪ್ರಶಸ್ತಿಯನ್ನು ಹಿರಿಯ ಗಾಯಕ, ಪದ್ಮಶ್ರೀ ಪಂಡಿತ ಎಂ.ವೆಂಕಟೇಶಕುಮಾರ ಅವರಿಗೆ ಸೋಮವಾರ ಪ್ರದಾನ ಮಾಡಲಾಯಿತು.
ಪಂ. ಬಸವರಾಜ ರಾಜಗುರು ಅವರ 101ನೇ ನೇ ಜನ್ಮದಿನ ಅಂಗವಾಗಿ ನಗರದ ಸೃಜನಾ ರಂಗಮಂದಿರದಲ್ಲಿ ನಡೆದ ಸಂಗೀತೋತ್ಸವದಲ್ಲಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 1 ಲಕ್ಷ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡ ಪ್ರಶಸ್ತಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವ್ಹಿ.ಶ್ರೀಶಾನಂದ ಹಾಗೂ ಶಾಸಕ ಅರವಿಂದ ಬೆಲ್ಲದ ಅವರು, ಪಂಡಿತ ಎಂ.ವೆಂಕಟೇಶಕುಮಾರ ಅವರಿಗೆ ಪ್ರದಾನ ಮಾಡಿದರು‌.
ಅಲ್ಲದೆ, ತಲಾ 25 ಸಾವಿರ ನಗದು, ಸ್ಮರಣಿಕೆ ಒಳಗೊಂಡ ಯುವ ಪ್ರಶಸ್ತಿಯನ್ನು ಕೋಲ್ಕತ್ತಾದ ರಿಂಪಾ ಶಿವಾ ಹಾಗೂ ವಿಜಯಪುರದ ಕೃತಿಕಾ ಜಂಗಿನಮಠ ಅವರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅರವಿಂದ ಬೆಲ್ಲದ ಅವರು, ಧಾರವಾಡದಲ್ಲಿರುವ ಟ್ರಸ್ಟ್ ಗಳನ್ನು ಹೊರತುಪಡಿಸಿ ಉಳಿದ ಸಂಸ್ಥೆಗಳಲ್ಲಿ ಪ್ರಶಸ್ತಿ ನೀಡಲು ವಸೂಲಿ ಇರುವುದು ಗೊತ್ತಿರುವ ಸಂಗತಿ. ಇದಕ್ಕೆ ರಾಜ್ಯೋತ್ಸವ ಪ್ರಶಸ್ತಿಯೂ ಹೊರತಲ್ಲ’ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
‘ಆದರೆ ಅಪ್ಪಟ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಾ ಬಂದಿರುವ ಧಾರವಾಡದ ಟ್ರಸ್ಟ್ ಗಳ ಪ್ರಶಸ್ತಿಗಳ ಮೊತ್ತವನ್ನು ಸರ್ಕಾರ ಕಡಿತಗೊಳಿಸಬಾರದು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು.
ನಂತರ ಸಂಗೀತೋತ್ಸವದಲ್ಲಿ ಪ್ರಶಸ್ತಿ ಪುರಸ್ಕೃತ ಪಂ.ಎಂ.ವೆಂಕಟೇಶಕುಮಾರ ಅವರಿಂದ ಹಿಂದೂಸ್ತಾನಿ ಶಾಸ್ತೀಯ ಗಾಯನ ಹಾಗೂ ಯುವ ಪ್ರಶಸ್ತಿ ವಿಜೇತ ಕಲಾವಿದರಾದ ರಿಂಪಾ ಶಿವಾ ಮತ್ತು ಕೃತಿಕಾ ಜಂಗಿನಮಠ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಹಿರಿಯ ಶಾಸಕ ಚಂದ್ರಕಾಂತ ಬೆಲ್ಲದ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಟ್ರಸ್ಟನ ಸದಸ್ಯ ಕಾರ್ಯದರ್ಶಿ ಮಾಧವ ಗಿತ್ತೆ ಮೊದಲಾವರು ಇದ್ದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ