ಉತ್ತರ ಪ್ರದೇಶ ಸರ್ಕಾರ-ಪ್ರತಿಭಟನಾ ನಿರತ ರೈತರ ನಡುವೆ ಮಾತುಕತೆ ಯಶಸ್ವಿ: ಮೃತರ ಕುಟುಂಬಕ್ಕೆ 45 ಲಕ್ಷ ರೂ. ಪರಿಹಾರ, ಗಾಯಾಳಿಗಳಿಗೆ ತಲಾ 10 ಲಕ್ಷ ರೂ.ಪರಿಹಾರ

ಲಖನೌ: ಲಖಿಂಪುರ ಖೇರಿಯಲ್ಲಿ ಭಾನುವಾರ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಪ್ರಾಣ ಕಳೆದುಕೊಂಡ ನಂತರ ಪ್ರತಿಭಟನೆ ನಡೆಸುತ್ತಿದ್ದ ರೈತರೊಂದಿಗೆ ಉತ್ತರ ಪ್ರದೇಶ ಸರ್ಕಾರ ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು, ಹೀಗಾಗಿ ತಮ್ಮ ಹೋರಾಟ ಕೈಬಿಡುವುದಾಗಿ ರೈತರು ಪ್ರಕಟಿಸಿದ್ದಾರೆ.
ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತಕುಮಾರ್ ಪ್ರಕಾರ, ಮಾತುಕತೆ ವೇಳೆ ಹಿಂಸಾಚಾರದಲ್ಲಿ ಮೃತಪಟ್ಟ ನಾಲ್ವರು ರೈತರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ 45 ಲಕ್ಷ ರೂ. ಪರಿಹಾರ ಹಾಗೂ ಮೃತರ ಅವಲಂಬಿತರಿಗೆ ಸರ್ಕಾರಿ ಉದ್ಯೋಗ ಮತ್ತು ಹಿಂಸಾಚಾರದಲ್ಲಿ ಗಾಯಗೊಂಡವರಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡುವ ಭರವಸೆ ನೀಡಲಾಗಿದೆ.
ಹಿಂಸಾಚಾರದ ಬಗ್ಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮತ್ತು ಮುಂದಿನ ಎಂಟು ದಿನಗಳ ಒಳಗೆ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಲಾಗಿದೆ ಎಂದು ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಪ್ರತಿಭಟನಾ ನಿರತ ರೈತರು ಮತ್ತು ಉತ್ತರ ಪ್ರದೇಶ ಸರ್ಕಾರದ ನಡುವಿನ ಮಾತುಕತೆ ಯಶಸ್ವಿಯಾದ ನಂತರವೇ ಪ್ರತಿಭಟನಾಕಾರರು ಭಾನುವಾರ ಹಿಂಸಾಚಾರದಲ್ಲಿ ಮೃತಪಟ್ಟ ನಾಲ್ವರು ರೈತರ ಮರಣೋತ್ತರ ಪರೀಕ್ಷೆಗೆ ಒಪ್ಪಿಕೊಂಡರು. ಶವಪರೀಕ್ಷೆಯನ್ನು ಐವರು ವೈದ್ಯರ ಸಮಿತಿಯಿಂದ ಮಾಡಲಾಗುವುದು ಮತ್ತು ಪ್ರಕ್ರಿಯೆಯನ್ನು ವಿಡಿಯೊ ಮಾಡಲಾಗುತ್ತದೆ.
ಲಖಿಂಪುರ್ ಖೇರಿಯಲ್ಲಿ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ಭೇಟಿಯನ್ನು ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಹಿಂಸಾಚಾರ ಭುಗಿಲೆದ್ದ ಪರಿಣಾಮ ರೈತರು ಮತ್ತು ಬಿಜೆಪಿ ಕಾರ್ಯಕರ್ತರು ಸೇರಿ 8 ಮಂದಿ ಮೃತಪಟ್ಟಿದ್ದಾರೆ.

ಪ್ರಮುಖ ಸುದ್ದಿ :-   ಪಕ್ಷದ ರಾಜ್ಯಾಧ್ಯಕ್ಷರ ನೇಮಕ ವಿಚಾರದಲ್ಲಿ ತೆಲಂಗಾಣ ಬಿಜೆಪಿಯಲ್ಲಿ ಬಿರುಕು ; ಬಿಜೆಪಿಗೆ ಶಾಸಕ ಟಿ.ರಾಜಾ ಸಿಂಗ್ ರಾಜೀನಾಮೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement