ಲಖಿಂಪುರ ಖೇರಿ ದುರ್ಘಟನೆ : 2ನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ರೈತನ ಅಂತ್ಯಕ್ರಿಯೆ

ಬಹ್ರೈಚ್: ಲಖಿಂಪುರ ಖೇರಿ ಘಟನೆಯಲ್ಲಿ ಮೃತ ಪಟ್ಟಿದ್ದ ಮತ್ತೊಬ್ಬ ರೈತನ ಶವವನ್ನು ಎರಡನೇ ಬಾರಿಗೆ ಮರಣೋತ್ತರ ಪರೀಕ್ಷೆ ಮಾಡಿದ ನಂತರ ಇಂದು (ಬುಧವಾರ) ಮುಂಜಾನೆ ಅಂತ್ಯ ಸಂಸ್ಕಾರ ಮಾಡಲಾಗಿದೆ.
ಭಾನುವಾರ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಲಖಿಂಪುರ ಖೇರಿಗೆ ಭೇಟಿ ನೀಡುವುದನ್ನು ಕೇಂದ್ರ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸುತ್ತಿರುವ ರೈತರು ವಿರೋಧಿ ಪ್ರದರ್ಶನ ನಡೆಸಿದ್ದರು. ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಆಜಯ್ ಮಿಶ್ರಾರಿಗೆ ಸೇರಿದ ಕಾರು ಹಾಯ್ದಿತ್ತು.
ಘಟನೆಯಲ್ಲಿ ನಾಲ್ವರು ರೈತರು ಮೃತಪಟ್ಟಿದ್ದರು. ಈ ದುರ್ಘಟನೆಯನ್ನು ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಪುತ್ರನೆ ಮಾಡಿದ್ದಾನೆ ಎಂಬದು ರೈತರ ಆರೋಪ. ಘಟನೆ ಬಳಿಕ ನಡೆದ ಹಿಂಸಾಚಾರದಲ್ಲಿ ಕಾರಿನ ಚಾಲಕ ಹಾಗೂ ಇತರ ಮೂವರು ಹತ್ಯೆಯಾಗಿದ್ದರು. ಮೃತ ಪಟ್ಟ ರೈತರ ಪೈಕಿ ಮೂವರ ಶವಸಂಸ್ಕಾರ ನಿನ್ನೆ ನಡೆದಿತ್ತು. ನಾಲ್ಕನೆ ರೈತ ಗುರ್ವಿಂದರ್‍ಸಿಂಗ್ ಅಲಿಯಾಸ್ ಜ್ಞಾನಿಜಿ (22)ಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಅದನ್ನು ಸರಿಯಾಗಿ ನಮೂದಿಸಿಲ್ಲ ಎಂದು ಕುಟುಂಬದ ಸದಸ್ಯರು ಆಕ್ಷೇಪಿಸಿದರು.
ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಯಬೇಕು ಎಂದು ಒತ್ತಾಯಿಸಿದರು. ರೈತ ನಾಯಕ ರಾಕೇಶ್ ಟಿಕಾಯತ್ ಮತ್ತು ಪಂಜಾಬ್‍ನ ಗಾಯಕರಾದ ಸೋನಿಯಾ ಮಾನ್ ಕುಟುಂಬದ ಸದಸ್ಯರ ಬೇಡಿಕೆ ಬೆಂಬಲ ವ್ಯಕ್ತ ಪಡಿಸಿದ್ದರು. ಶವ ಪರೀಕ್ಷೆ ಸರಿಯಾಗಿ ನಡೆಯದ ಹೊರತು ಸಂಸ್ಕಾರ ಮಾಡುವುದಿಲ್ಲ ಎಂದು ಕುಟುಂಬದ ಸದಸ್ಯರು ಪಟ್ಟು ಹಿಡಿದಿದ್ದರು. ಎರಡನೇ ಬಾರಿ ಮರಣೋತ್ತರ ಪರೀಕ್ಷೆಗೆ ಸರ್ಕಾರ ಅನುಮತಿ ನೀಡಿತ್ತು.
ಲಕ್ನೋದ ತಜ್ಞ ವೈದ್ಯರ ಸಮ್ಮುಖದಲ್ಲಿ ನಿನ್ನೆ ರಾತ್ರಿ ಶವ ಪರೀಕ್ಷೆ ನಡೆಸಲಾಗಿದೆ. ಎಲ್ಲವನ್ನೂ ವಿಡಿಯೋ ಚಿತ್ರಿಕರಣ ಮಾಡಲಾಗಿದೆ. ನಂತರ ಇಂದು ಬೆಳಗ್ಗೆ ಮೃತನ ತವರೂರಾದ ಬಹ್ರೈಚ್‍ನಲ್ಲಿ ಕುಟುಂಬದ ಸದಸ್ಯರೊಟ್ಟಿಗೆ ರೈತ ನಾಯಕ ರಾಕೇಶ್ ಟಿಕಾಯತ್, ಗೋರಖಪುರದ ಎಡಿಜಿ ಅಖಿಲ್ ಕುಮಾರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಗ್ರಾಮಾಂತರದ ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಅಶೋಕ್ ಕುಮಾರ್ ತಿಳಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ