ಬೆಂಗಳೂರಲ್ಲಿ ಶಿಶು ಮಾರಾಟ ಜಾಲ ಪತ್ತೆ, ಐವರು ಬಂಧನ, 12 ಮಕ್ಕಳ ರಕ್ಷಣೆ..!

ಬೆಂಗಳೂರು: ಅಸಹಾಯಕ ಪೋಷಕರಿಂದ ನವಜಾತ ಶಿಶುಗಳನ್ನು ಪಡೆದು ಲಕ್ಷಾಂತರ ರೂ.ಗಳಿಗೆ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಪಶ್ಚಿಮ ವಲಯದ ಮಾನವ ಕಳ್ಳ ಸಾಗಾಣಿಕೆ ನಿಗ್ರಹ ಘಟಕ ಪತ್ತೆ ಹಚ್ಚಿದ್ದು, ಮೂವರು ಮಹಿಳೆಯರು ಸೇರಿದಂತೆ ಐದು ಮಂದಿ ಅಂತಾರಾಜ್ಯ ಆರೋಪಿಗಳನ್ನು ಬಂಧಿಸಿದ್ದಾರೆ.
ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮಗು ಕಳ್ಳತನ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ ತಲಘಟ್ಟಪುರದ ಸಬ್ ಇನ್‌ಸ್ಪೆಕ್ಟರ್ ಶ್ರೀನಿವಾಸ್ ಮಕ್ಕಳ ಮಾರಾಟ ಕರಾಳ ದಂಧೆ ಪತ್ತೆ ಮಾಡಿದ್ದಾರೆ.
ಮಹಾರಾಷ್ಟ್ರದ ರಂಜನಾ ದೇವಿದಾಸ್ ಖಂಡಗಳೆ (32), ಬೆಂಗಳೂರಿನ ವಿದ್ಯಾರಣ್ಯ ಪುರದ ದೇವಿ (26), ಜಾಲಹಳ್ಳಿಯ ಮಲ್ಲಸಂದ್ರ ನಿವಾಸಿ ಧನಲಕ್ಷ್ಮೀ (30), ಕತ್ರಿಗುಪ್ಪೆಯ ರಂಗಪ್ಪ ಲೇಔಟ್ ನಿವಾಸಿ ಮಹೇಶ್‍ಕುಮಾರ್ (50)ಮತ್ತು ತಮಿಳುನಾಡಿನ ಜನಾರ್ಧನ್ (33) ಬಂಧಿತ ಆರೋಪಿಗಳು. ಆರೋಪಿಗಳ ಜಾಲದಲ್ಲಿ ಸಿಲುಕಿದ್ದ 12 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಹಾಗೂ ಪೋಷಕರನ್ನು ಪತ್ತೆ ಮಾಡಿ ಮುಂದಿನ ಕ್ರಮಕ್ಕಾಗಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ಮುಂದೆ ಹಾಜರುಪಡಿಸಲಾಗಿದೆ.
ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆ ಕಾರ್ಯ ಹಾಗೂ ಈ ಜಾಲದಲ್ಲಿ ಸಿಲುಕಿರುವ ಇತರಮಕ್ಕಳನ್ನು ಪತ್ತೆ ಕಾರ್ಯ ಮುಂದುವರೆದಿದೆ. ವಿಲ್ಸನ್‍ಗಾರ್ಡನ್ ನಿವಾಸಿ ದೇವಿ ಎಂಬವರು ಮುಂಬಯಿಂದ ಮಕ್ಕಳನ್ನು ತರಿಸಿ ಹಣಕ್ಕಾಗಿ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಮಾನವ ಕಳ್ಳ ಸಾಗಾಣಿಕೆ ನಿಗ್ರಹ ದಳಕ್ಕೆ ಲಭಿಸಿತ್ತು.
ಖಚಿತ ಮಾಹಿತಿ ಮೇರೆಗೆ ಮಾರು ವೇಷದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡು ನಿನ್ನೆ ರಾತ್ರಿ 8 ಗಂಟೆಯಲ್ಲಿ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಮಗು ಮಾರಾಟ ಮಾಡಲು ಬಂದಿದ್ದ ಆರೋಪಿತೆ ರಂಜನಾ ದೇವಿದಾಸ್ ಖಂಡಗಳೆ ಹಾಗೂ ಖರೀದಿ ಮಾಡಲು ಬಂದಿದ್ದ ದೇವಿ ಎಂಬಾಕೆಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಯಿತು.
ಆರೋಪಿ ರಂಜನಾ ವಶದಲ್ಲಿದ್ದ ಒಂದು ತಿಂಗಳ ನವಜಾತ ಹೆಣ್ಣು ಶಿಶುವನ್ನು ರಕ್ಷಿಸಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ತನಿಖೆ ನಡೆಸಿ ಉಳಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಇವರು ನೀಡಿದ ಸುಳಿವಿನ ಮೇರೆಗೆ ಈ ಜಾಲದಲ್ಲಿ ಸಿಲುಕಿದ 12 ಮಕ್ಕಳನ್ನು ಹಾಗೂ ಈ ಮಕ್ಕಳ ಪಾಲನೆ, ಪೋಷಣೆ ಮಾಡುತ್ತಿದ್ದ ಪೋಷಕರನ್ನು ಪತ್ತೆ ಮಾಡಿ ಮುಂದಿನ ಕ್ರಮಕ್ಕಾಗಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ಮುಂದೆ ಹಾಜರುಪಡಿಸಲಾಗಿದೆ.
ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಹರೀಶ್ ಪಾಂಡೆ ಮಾರ್ಗದರ್ಶನದಲ್ಲಿ ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಬಸವನಗುಡಿ ಮಹಿಳಾ ಠಾಣೆ ಇನ್ಸ್‍ಪೆಕ್ಟರ್ ಮೀನಾಕ್ಷಿ ಅವರನ್ನೊಳಗೊಂಡ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದೆ.

ಪ್ರಮುಖ ಸುದ್ದಿ :-   ಶ್ರೀರಂಗಪಟ್ಟಣ: ಐಸ್‌ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳ ಸಾವು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement