ಬಡಾಲ ಅಂಕಲಗಿ ದುರಂತ :ಮೃತರ ಕುಟುಂಬಕ್ಕೆ 35 ಲಕ್ಷ ರೂ. ಚೆಕ್ ವಿತರಿಸಿದ ಸಚಿವ ಕಾರಜೋಳ

ಬೆಳಗಾವಿ :ಧಾರಾಕಾರ ಮಳೆಯಿಂದ ಮನೆ ಗೋಡೆ ಕುಸಿದು ಒಂದೇ ಕುಟುಂಬದ 7 ಜನರು ಮೃತಪಟ್ಟಿರುವ ಬಡಾಲ ಅಂಕಲಗಿ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಗುರುವಾರ(ಅ.7) ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಮನೆಯ ಗೋಡೆ ಕುಸಿದು ಏಳು ಜನರು ಪ್ರಾಣ ಕಳೆದುಕೊಂಡಿರುವುದು ಬಹಳ ನೋವಿನ ಸಂಗತಿ. ನಾವು ಸರ್ಕಾರದಿಂದ ಪರಿಹಾರ ಕೊಡಬಹುದು; ಆದರೆ ಪ್ರಾಣ ಕೊಡಲು ಸಾಧ್ಯವಿಲ್ಲ. ದೇವರು ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ, ಕುಟುಂಬಸ್ಥರ ನೆರವಿಗೆ ಸರ್ಕಾರವಿದೆ ಎಂದು ತಿಳಿಸಿದರು.
ಮೃತರ ಕುಟುಂಬದ ವಾರಸುದಾರರಾದ ಭೀಮಪ್ಪ ಖನಗಾವಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಇದೇ ಸಂದರ್ಭದಲ್ಲಿ ಒಟ್ಟು 35 ಲಕ್ಷ ರೂಪಾಯಿ ಪರಿಹಾರ ಚೆಕ್ ವಿತರಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ತಲಾ 2 ಲಕ್ಷದಂತೆ 7 ಜನರಿಗೆ ಘೋಷಣೆ ಮಾಡಿದ್ದಾರೆ. ಘಟನೆಗೆ ತಕ್ಷಣವೇ ಸ್ಪಂದಿಸಿ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಈ ಭಾಗದಲ್ಲಿನ ಅನೇಕ ಮನೆಗಳು ಬಿದಿದ್ದು, ಮಣ್ಣಿನ ಮನೆಗಳು ಹೆಚ್ಚಾಗಿವೆ. ಅಪಾಯದ ಸ್ಥಿತಿಯಲ್ಲಿರುವ ಮನೆಗಳು ಹಾಗೂ ಶಾಲೆಗಳನ್ನು ಸಮೀಕ್ಷೆ ಮಾಡಿ ತಕ್ಷಣ ಜನರನ್ನು ರಕ್ಷಿಸಿ ಸ್ಥಳಾಂತರಿಸಲು ಪಿಡಿಓಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಕಾರಜೋಳ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಳಗಾವಿ ಸಂಸದೆ ಮಂಗಳಾ‌ ಸುರೇಶ್ ಅಂಗಡಿ ಅವರು ಬಡಾಲ ಅಂಕಲಗಿ ಗ್ರಾಮಕ್ಕೆ ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ