ಮುಂಬೈ: ಮುಂಬೈ ಕರಾವಳಿಯಲ್ಲಿ ಗೋವಾಕ್ಕೆ ತೆರಳುವ ಕ್ರೂಸ್ ಹಡಗಿನ ಮಾದಕದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಂಧಿಸಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರ ಜಾಮೀನು ಅರ್ಜಿಯನ್ನು ಮುಂಬೈ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ಗುರುವಾರ, ಪ್ರಕರಣದ ಆರ್ಯನ್ ಖಾನ್ ಮತ್ತು ಇತರ ಏಳು ಆರೋಪಿಗಳನ್ನು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್ ಎಂ ನೆರ್ಲಿಕರ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ವಿಚಾರಣೆಗಾಗಿ ತಮ್ಮ ಮುಂದಿನ ಕಸ್ಟಡಿಗೆ ಎನ್ಸಿಬಿಯ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.
ಆರ್ಯನ್ ಖಾನ್ ಸದ್ಯ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಇದ್ದಾನೆ. ಆರ್ಯಾನ್ ಖಾನ್ ಜೊತೆಗೆ ಆತನ ಆಪ್ತ ಮಿತ್ರ ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೆಚ, ನೂಪುರ್ ಸಾರಿಕಾ, ಇಸ್ಮೀತ್ ಸಿಂಗ್, ಮೋಹಕ್ ಜಸ್ವಾಲ್, ವಿಕ್ರಾಂತ್ ಚೋಕರ್ ಮತ್ತು ಗೋಮಿತ್ ಚೋಪ್ರಾ ಅವರನ್ನು ಕಾರ್ಡೆಲಿಯಾ ಕ್ರೂಸ್ ಒಡೆತನದ ಗೋವಾಕ್ಕೆ ಸೇರಿದ ಹಡಗಿನ ಮೇಲೆ ದಾಳಿ ಮಾಡಿದ ನಂತರ ಬಂಧಿಸಲಾಯಿತು.
ದಾಳಿ ಸಮಯದಲ್ಲಿ 13 ಗ್ರಾಂ ಕೊಕೇನ್, 21 ಗ್ರಾಂ ಚರಸ್, 22 ಮಾತ್ರೆಗಳು MDMA, 5 ಗ್ರಾಂ MD ಮತ್ತು 1.33 ಲಕ್ಷ ನಗದು ವಶಪಡಿಸಿಕೊಂಡಿದೆ ಎಂದು ಎನ್‌ಸಿಬಿ ಹೇಳಿಕೊಂಡಿದೆ. ಆರ್ಯನ್ ಖಾನ್ ಅವರ ವಕೀಲರು ತಮ್ಮ ಕಕ್ಷಿದಾರನ ವಶದಲ್ಲಿದ್ದ ಯಾವುದೇ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿಲ್ಲ ಎಂದು ವಾದಿಸಿದರು.
ಕಳೆದ ವಾರ ಶನಿವಾರ ಹಡಗಿನ ಮೇಲೆ ದಾಳಿ ನಡೆಸಿದ ನಂತರ ಇದುವರೆಗೆ ಆರ್ಯನ್ ಖಾನ್ ಸೇರಿದಂತೆ 18 ಜನರನ್ನು ಎನ್ ಸಿಬಿ ಬಂಧಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ