ಇದು ಅಧಿಕೃತ..ಏರ್‌ಇಂಡಿಯಾ ಬಿಡ್ ಗೆದ್ದ ಟಾಟಾ ಸನ್ಸ್, ಪುನಃ ಟಾಟಾ ಸುಪರ್ದಿಗೆ ಮಹಾರಾಜ

ನವದೆಹಲಿ: ಸಾಲದ ಭಾರಕ್ಕೆ ಕುಸಿಯುತ್ತಿರುವ ಏರ್ ಇಂಡಿಯಾದ ಉಕ್ಕಿನ ಹಕ್ಕಿಯ ಹೊಣೆ ಕೊನೆಗೂ ಟಾಟಾ ಸನ್ಸ್ ಪಾಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ DIPAM, ತುಹಿನ್ ಕಾಂತ ಪಾಂಡೆ ಅವರು ಈ ಬಗ್ಗೆ ಅಧಿಕೃತ ಘೋಷಣೆ ಮಾಡಿ, ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ್ದಾರೆ,
ಏರ್ ಇಂಡಿಯಾ ಕೊಳ್ಳಲು ಬಿಡ್ ಸಲ್ಲಿಸಿದ್ದ ಸಂಸ್ಥೆಗಳ ಪೈಕಿ ಟಾಟಾ ಸನ್ಸ್ , ಅಜಯ್ ಸಿಂಗ್ ಸಂಸ್ಥೆ ,ಸ್ಪೈಸ್ ಜೆಟ್ ಪ್ರಮುಖ ಸಂಸ್ಥೆಗಳಾಗಿದ್ದವು. ಈ ಪೈಕಿ ಏರ್ ಇಂಡಿಯಾವನ್ನು ಖರೀದಿಸಲು ಸಲ್ಲಿಸಿದ್ದ ಫೈನಲ್ ಬಿಡ್ ಟಾಟಾ ಸಮೂಹ ಸಂಸ್ಥೆ ಪಾಲಾಗಿದೆ ಎಂಬ ಸುದ್ದಿ ಇದೀಗ ಅಧಿಕೃತವಾಗಿದೆ.
ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್‌ ಕಾಂತಾ, ಟಾಟಾ ಸಮೂಹ ಒಟ್ಟು 18 ಸಾವಿರ ಕೋಟಿ ರೂ. ಬಿಡ್‌ ಮಾಡಿತ್ತು. ಡಿ.10ರ ವೇಳೆ ಸಂಪೂರ್ಣವಾಗಿ ಏರ್‌ ಇಂಡಿಯಾವನ್ನು ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮೊದಲ ವರ್ಷ ಎಲ್ಲ ಉದ್ಯೋಗಿಗಳು ಏರ್‌ ಇಂಡಿಯಾದಲ್ಲಿ ಇರಲಿದ್ದಾರೆ. ಅವರನ್ನು ಯಾವುದೇ ಕಾರಣಕ್ಕೂ ತೆಗೆಯುವುದಿಲ್ಲ. ಒಂದು ವರ್ಷದ ನಂತರ ಟಾಟಾ ಸಮೂಹವು ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆಯನ್ನು ನೀಡಲು ಅವಕಾಶವನ್ನು ಹೊಂದಿರುತ್ತದೆ.
ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ತಿಳಿಸುತ್ತಿದ್ದಂತೆ ಟಾಟಾ ಕಂಪನಿಯ ಮುಖ್ಯಸ್ಥ ರತನ್‌ ಟಾಟಾ Welcome back ಏರ್‌ ಇಂಡಿಯಾ ಎಂದು ಬರೆದು ಟ್ವೀಟ್‌ ಮಾಡಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ ಟ್ವೀಟ್‌ ಮಾಡಿದ್ದಾರೆ.
ಏರ್ ಇಂಡಿಯಾ ಖಾಸಗೀಕರಣಗೊಳಿಸುವ ಪ್ರಕ್ರಿಯೆಯ ಬಿಡ್‍ನಲ್ಲಿ ಕೊನೆಯಲ್ಲಿ ಸ್ಪೈಸ್ ಜೆಟ್ ಕಂಪನಿ ಮತ್ತು ಟಾಟಾ ಸನ್ಸ್ ಇತ್ತು. ಕೇಂದ್ರ ಸರ್ಕಾರ ಬಿಡ್‍ಗೆ 15-20 ಸಾವಿರ ಕೋಟಿ ರೂ. ಹಣವನ್ನು ಮೂಲ ಬೆಲೆಯಾಗಿ ಇಟ್ಟಿತ್ತು ಎಂದು ವರದಿಯಾಗಿತ್ತು. ಟಾಟಾ ಕಂಪನಿ ಸ್ಪೈಸ್ ಜೆಟ್‍ಗಿಂತಲೂ 5 ಸಾವಿರ ಕೋಟಿ ಹೆಚ್ಚು ಬಿಡ್ ಮಾಡಿತ್ತು ಎಂದು ವರದಿಯಾಗಿತ್ತು.
ಇಂಡಿಯನ್ ಏರ್‌ಲೈನ್ಸ್‌ ವಿಲೀನದ ಬಳಿಕ ಏರ್ ಇಂಡಿಯಾ ನಷ್ಟವನ್ನು ಅನುಭವಿಸುತ್ತಿದ್ದು ಆಗಸ್ಟ್‌ 2021ರ ವೇಳೆಗೆ 61,562 ಕೋಟಿ ರೂ. ನಷ್ಟದಲ್ಲಿತ್ತು. ಏರ್ ಇಂಡಿಯಾ ಸೇವೆಯಿಂದ ಪ್ರತಿದಿನ ಕೇಂದ್ರ ಸರ್ಕಾರಕ್ಕೆ 20 ಕೋಟಿ ರೂ. ನಷ್ಟವಾಗುತ್ತಿದೆ. ಖರೀದಿಯ ಬಳಿಕ ಟಾಟಾಗೆ 4,400 ದೇಶೀಯ ಮತ್ತು 1,800 ಅಂತರಾಷ್ಟ್ರೀಯ ಲ್ಯಾಂಡಿಂಗ್ ಸಿಗಲಿದೆ.
2019ರ ಲೋಕಸಭಾ ಚುನಾವಣೆಗೂ ಮೊದಲೇ ಏರ್ ಇಂಡಿಯಾವನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿತ್ತು. ಆದರೆ ಏರ್‌ ಇಂಡಿಯಾ ಮಾರಾಟ ಮಾಡುವ ಕೇಂದ್ರ ಸರ್ಕಾರದ ಮೊದಲ ಪ್ರಯತ್ನ ವಿಫಲವಾಗಿತ್ತು. 2018ರಲ್ಲಿ ಕೇಂದ್ರ ಸರ್ಕಾರ ಬಿಡ್‌ ಆಹ್ವಾನಿಸಿತ್ತು. ಆದರೆ ಯಾರೂ ಖರೀದಿಗೆ ಆಸಕ್ತಿ ತೋರಿಸಲಿಲ್ಲ. ಈ ಸಂದರ್ಭದಲ್ಲಿ ಶೇ.76 ರಷ್ಟು ಪಾಲು ಮಾರಾಟ ಮಾಡುವುದರ ಜೊತೆಗೆ ಸಾಲವನ್ನು ಪಾವತಿಸಬೇಕೆಂಬ ಷರತ್ತು ವಿಧಿಸಲಾಗಿತ್ತು
1932ರಲ್ಲಿ ಜೆಆರ್ ಡಿ ಟಾಟಾ ಅವರು ಟಾಟಾ ಏರ್ ಲೈನ್ಸ್ ಆರಂಭಿಸಿದರು. ಕರಾಚಿಯಿಂದ ಬಾಂಬೆಗೆ ಮೊದಲ ವಿಮಾನಯಾನಕ್ಕೆ ಟಾಟಾ ಪೈಲಟ್ ಆಗಿದ್ದರು. ವಿಮಾನ ಸಂಸ್ಥೆ ಟಾಟಾ ಅವರ ಕನಸಾಗಿತ್ತು. 1948ರಲ್ಲಿ ಏರ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್ (ಎಐಟಿಎ) ಸ್ಥಾಪಿಸಿದರು. 1978ರ ತನಕ ಏರ್ ಇಂಡಿಯಾದ ಏಳಿಗೆಗೆ ಶ್ರಮಿಸಿದ್ದರು. ಆದರೆ, ಟಾಟಾ ಕಟ್ಟಿ ಬೆಳೆಸಿದ ಸಂಸ್ಥೆ ರಾಜಕೀಯ ತಂತ್ರಕ್ಕೆ ಕೈ ತಪ್ಪಿತು. ದೇಶಕ್ಕಾಗಿ ಟಾಟಾ ಅವರು ತ್ಯಾಗಕ್ಕೆ ಸಿದ್ಧವಾಗಬೇಕಾಯಿತು.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

ಏರ್ ಇಂಡಿಯಾವನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆ ಮಾಡಿದ ನೆಹರೂ
1953ರಲ್ಲಿ ಅಂದಿನ ಪ್ರಧಾನಿ ಜವಾಹರ ಲಾಲ್ ನೆಹರೂ ಅವರು ಏರ್ ಇಂಡಿಯಾವನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಯನ್ನು ಘೋಷಿಸಲು ಮುಂದಾದಾಗ ಟಾಟಾಗೆ ನಿಜಕ್ಕೂ ಆಘಾತವಾಗಿತ್ತು. ತಪ್ಪನ್ನು ಸರಿಪಡಿಸುವ ನಿಟ್ಟಿನಲ್ಲಿ ಟಾಟಾ ಅವರನ್ನು ಸಂಸ್ಥೆಯ ಚೇರ್ಮನ್ ಆಗಿ ಮುಂದುವರೆಯುವಂತೆ ನೆಹರೂ ಒಪ್ಪಿಸಿದರು. 1977ರಲ್ಲಿ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಟಾಟಾ ಅವರನ್ನು ಸಂಸ್ಥೆ ಚೇರ್ಮನ್ ಸ್ಥಾನದಿಂದ ಕೆಳಗಿಸಿದರು. 1946ರಲ್ಲಿ ಟಾಟಾ ಏರ್ ಲೈನ್ಸ್ ಸಾರ್ವಜನಿಕ ಸಂಸ್ಥೆಯಾಗಿ ನಂತರ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಆಗಿದ್ದು ಈಗ ಇತಿಹಾಸ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement