ತಮಗೆ ಆಹ್ವಾನ ನೀಡಿಲ್ಲವೆಂದು ಸಚಿವ ಶ್ರೀರಾಮುಲು ಕಾರು ಅಡ್ಡಗಟ್ಟಿ ಉದ್ಘಾಟನಾ ಕಾರ್ಯಕ್ರಮವನ್ನೇ ರದ್ದು ಮಾಡಿದ ಚಿಂಚನಸೂರ..!

ಸಚಿವ ಶ್ರೀರಾಮುಲು ಕಾರಿಗೆ ಅಡ್ಡಗಟ್ಟಿ ಕಾರ್ಯಕ್ರಮವನ್ನೇ ರದ್ದು ಮಾಡಿದ ಬಾಬುರಾವ್ ಚಿಂಚನಸೂರ
ಯಾದಗಿರಿ : ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಅವರ ಕಾರನ್ನು ಅಡ್ಡಗಟ್ಟಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ತಮಗೆ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದ ಪರಿಣಾಮ ನಡೆಯಬೇಕಿದ್ದ ಏಕಲವ್ಯ ಶಾಲಾ ಉದ್ಘಾಟನೆ ಕಾರ್ಯಕ್ರಮ ರದ್ದಾದ ಘಟನೆ ಶನಿವಾರ ನಡೆದಿದೆ.
ಸಚಿವ ಶ್ರೀರಾಮುಲು ಅವರು ಯಾದಗಿರಿ ಸಮೀಪದ ಏಕಲವ್ಯ ಶಾಲೆ ಉದ್ಘಾಟನೆಗಾಗಿ ಯಾದಗಿರಿಗೆ ಆಗಮಿಸಿದ್ದರು, ನಿಗದಿತ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಮಾಜಿ ಸಚಿವ ಬಾಬುರಾವ್ ಚಿಂತನಸೂರ್ ಅವರು ಸಚಿವರ ಕಾರನ್ನು ಅಡ್ಡಗಟ್ಟಿ ತಮಗೆ ಕಾರ್ಯಕ್ರಮಕ್ಕೆ ಆಹ್ವಾನವನ್ನೇ ನೀಡಿಲ್ಲ ಎಂದು ಜಿಲ್ಲಾಡಳಿತ ಹಾಗೂ ರಾಮುಲು ವಿರುದ್ಧ ಆಕ್ರೋಶ ಹೊರಹಾಕಿದರು.
ನಾನು ಕಷ್ಟಪಟ್ಟು ಏಕಲವ್ಯ ಶಾಲೆಯನ್ನು ಮಂಜೂರು ಮಾಡಿಕೊಟ್ಟಿದ್ದೆ, ಆದರೆ ಇವತ್ತು ಜಿಲ್ಲಾಡಳಿತ ನನ್ನ ಗಮನಕ್ಕೂ ತಾರದೆ ಶಾಲೆ ಉದ್ಘಾಟನೆ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ನಿಜಗುಣಿ ಶಿವಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷನಾದ ನಾನು ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಹೊಂದಿದ್ದು, ಐದು ಸಲ ಜನಪ್ರತಿನಿಧಿಗಳಿಂದ ಆಯ್ಕೆಯಾಗಿದ್ದೇನೆ. ನನಗೆ ಅವಮಾನ ಆಗಿದೆ. ಈ ಕಾರ್ಯಕ್ರಮವವು ರದ್ದಾಗಬೇಕು ಎಂದು ಪಟ್ಟು ಹಿಡಿದರು. ಮುಂದೆ ಒಂದು ದಿನಾಂಕ ನಿಗದಿ ಮಾಡಿಆಗ ಒಂದು ಲಕ್ಷ ಮಂದಿ ಕರೆದುಕೊಂಡು ಕಾರ್ಯಕ್ರಮಕ್ಕೆ ಬರುತ್ತೇನೆ ಎಂದು ಹೇಳಿದರು.
ಸಂಬಂಧಪಟ್ಟ ಇಲಾಖೆ ಅಧಿಕಾರಿ ಬಾಬುರಾವ್ ಅವರಿಗೆ ಕ್ಷಮೆಯಾಚಿಸಿ ಕಾಲಿಗೆ ಬೀಳಲು ಹೋಗಿ ಅವರಿಂದ ಬೈಸಿಕೊಂಡರು. ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಕೈ ಜೋಡಿಸಿ ವಿನಂತಿ ಮಾಡಿದರೂ ಜಗ್ಗದ ಬಾಬಾಬುರಾವ್ ಕಾರ್ಯಕ್ರಮ ರದ್ದಾಗಲೇಬೇಕು ಇಲ್ಲದಿದ್ದರೆ ಇಲ್ಲಿ ಪ್ರತಿಭಟನೆಗೆ ಕುಳಿತುಕೊಳ್ಳುವೆ ಎಂದು ಪಟ್ಟು ಹಿಡಿದರು. ಅವರ ಆಕ್ರೋಶಕ್ಕೆ ಮಣಿದು ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.
ರಾಮುಲು ಅಭಿಮಾನಿಗಳ ಆಕ್ರೋಶ : ಬಂದಳ್ಳಿ ಏಕಲವ್ಯ ಶಾಲೆ ಕಾರ್ಯಕ್ರಮ ರದ್ದಾದ ಹಿನ್ನೆಲೆ ರಾಮುಲು ಅಭಿಮಾನಿಗಳು ತಮ್ಮ ನಾಯಕರಿಗೆ ಅವಮಾನವಾಗಿದೆ ಎಂದು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದೇವೆ ಜಿಲ್ಲಾಡಳಿತ ಸ್ಪಷ್ಟನೆ : ಜಿಲ್ಲೆಯ ಯಾದಗಿರಿ ತಾಲೂಕಿನ ಬಂದಳ್ಳಿ ಗ್ರಾಮದ ನೂತನ ಏಕಲವ್ಯ ಮಾದರಿ ವಸತಿ ಶಾಲೆಯ ಕಟ್ಟಡ ಉದ್ಘಾಟನೆ, ವೇದಿಕೆ ಕಾರ್ಯಕ್ರಮ ಹಾಗೂ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ ಸಮಾರಂಭಕ್ಕೆ ಶಿಷ್ಟಾಚಾರ ಪ್ರಕಾರ ಎಲ್ಲ ಜನಪ್ರತಿನಿಧಿಗಳಿಗೆ ಆಹ್ವಾನ ಪತ್ರಿಕೆಯನ್ನು ತಲುಪಿಸಲಾಗಿದೆ. ಈ ಕಾರ್ಯಕ್ರಮಗಳನ್ನು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಯಾದಗಿರಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಯಾದಗಿರಿ ವತಿಯಿಂದ ಆಯೋಜಿಸಲಾಗಿತ್ತು ಎಂದು ಯಾದಗಿರಿ ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಬಾಬುರಾವ್ ಚಿಂಚನಸೂರ ಅವರ ಹೆಸರನ್ನು ಹಾಕಿಸಲಾಗಿದೆ. ಬಾಬುರಾವ್ ಅವರ ಪರವಾಗಿ ಆಮಂತ್ರಣ ಪತ್ರಿಕೆ ಪಡೆದವರ ಸಹಿಯೊಂದಿಗೆ ಸ್ವೀಕರಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಈ ಮಧ್ಯೆ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ತಮಗೆ ಆಹ್ವಾನವನ್ನು ನೀಡಿಯೇ ಇಲ್ಲ ಎಂದು ಪಟ್ಟು ಹಿಡಿದು ಕಾರ್ಯಕ್ರಮ ರದ್ದು ಪಡಿಸಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement