ಲಖಿಂಪುರ ಖೇರಿ ಹತ್ಯೆ ಪ್ರಕರಣ; ಕೇಂದ್ರ ಸಚಿವರ ಮಗ ಆಶಿಶ್ ಮಿಶ್ರಾ ಬಂಧನ

ಲಕ್ನೋ: ಲಖಿಂಪುರ್ ಖೇರಿ ಹಿಂಸಾಚಾರದ ಪ್ರಾಥಮಿಕ ಆರೋಪಿ ಆಶಿಶ್ ಮಿಶ್ರಾ ಅವರನ್ನು ಉತ್ತರ ಪ್ರದೇಶ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ಸುಮಾರು 12 ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಶನಿವಾರ ಬಂಧಿಸಿದೆ. ಬಂಧನವನ್ನು ಎಸ್‌ಐಟಿ ಮುಖ್ಯಸ್ಥರಾಗಿರುವ ಉಪ ಇನ್ಸ್‌ಪೆಕ್ಟರ್ ಜನರಲ್ ಉಪೇಂದ್ರ ಅಗರ್ವಾಲ್ ದೃಢಪಡಿಸಿದ್ದಾರೆ.
ಕೇಂದ್ರ ಗೃಹ ರಾಜ್ಯ ಮಂತ್ರಿ ಅಜಯ್ ಮಿಶ್ರಾ ತೇನಿ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ವಿಚಾರಣೆಯ ಸಮಯದಲ್ಲಿ ಸಹಕರಿಸದ ಕಾರಣ ಬಂಧಿಸಲಾಯಿತು ಮತ್ತು ಕೆಲವು ಪ್ರಶ್ನೆಗಳಿಗೆ ಅವರು ಸರಿಯಾಗಿ ಉತ್ತರಿಸಲಿಲ್ಲ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು” ಎಂದು ಉಪೇಂದ್ರ ಅಗರ್ವಾಲ್ ಹೇಳಿದ್ದಾರೆ.
ಆಶಿಶ್ ಮಿಶ್ರಾ ಅವರು ವಿಶೇಷ ವಿಚಾರಣಾ ತಂಡದ (ಎಸ್‌ಐಟಿ) ಮುಂದೆ ಬೆಳಿಗ್ಗೆ 10.30 ರ ಸುಮಾರಿಗೆ ಹಾಜರಾದರು, ಹಿಂದಿನ ದಿನ ವಿಚಾರಣೆಗೆ ಹಾಜರಾಗದಿದ್ದಾಗ ಅವರಿಗೆ ಎರಡನೇ ಸಮನ್ಸ್ ನೀಡಲಾಯಿತು ಮತ್ತು ಪೊಲೀಸ್ ಲೈನ್ಸ್‌ನಲ್ಲಿರುವ ಕ್ರೈಂ ಬ್ರಾಂಚ್ ಕಚೇರಿಯಲ್ಲಿ ವಿಚಾರಣೆ 8 ಗಂಟೆ ವರೆಗೂ ಮುಂದುವರಿಯಿತು ಎನ್ನಲಾಗಿದೆ.
ಘೋಷಣೆಗಳನ್ನು ಕೂಗುತ್ತಾ ರಸ್ತೆಯಲ್ಲಿ ಮೆರವಣಿಗೆ ಹೋಗುತ್ತಿದ್ದವರ ಮೇಲೆ ಎರಡು ಕಾರುಗಳು ಹರಿದು ನಾಲ್ವರು ರೈತರು ಮೃತಪಟ್ಟಿದ್ದರು. ಆ ಎರಡು ಎಸ್​ಯುವಿಗಳಲ್ಲಿ ಒಂದು ಕಾರನ್ನು ಚಲಾಯಿಸುತ್ತಿದ್ದುದು ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಎಂದು ಆರೋಪಿಸಿ ಆಶಿಶ್‌ ಮಿಶ್ರಾ ವಿರುದ್ಧ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ನೋಟಿಸ್ ನೀಡಿದ್ದ ಪೊಲೀಸರು ಇಂದು ಬೆಳಗ್ಗೆಯಿಂದ ಆಶಿಶ್ ಮಿಶ್ರಾ ಅವರ ವಿಚಾರಣೆ ನಡೆಸಿದ್ದರು. ವಿಡಿಯೋದಲ್ಲಿದ್ದ ಒಂದು ಎಸ್​ಯುವಿಯನ್ನು ಆಶಿಶ್ ಮಿಶ್ರಾ ಇದ್ದರು ಎಂಬುದರ ಹಿನ್ನೆಲೆಯಲ್ಲಿ ಅವರನ್ನು ಎಸ್​ಐಟಿ ಪೊಲೀಸರು ಬಂಧಿಸಿದ್ದಾರೆ.
ಲಖಿಂಪುರ ಖೇರಿಯಲ್ಲಿ ಪ್ರತಿಭಟನಾಕಾರರಿಗೆ ಕಾರಿನಿಂದ ಡಿಕ್ಕಿ ಹೊಡೆದು ಸ್ವಲ್ಪ ದೂರದ ವರೆಗೆ ಎಳೆದುಕೊಂಡು ಹೋಗಿರುವ ವಿಡಿಯೋ ಭಾರೀ ವೈರಲ್ ಆಗಿತ್ತು. ಒಂದರ ಹಿಂದೊಂದು ವೇಗವಾಗಿ ಬಂದ ಎಸ್​ಯುವಿ ಕಾರುಗಳು ರೈತರಿಗೆ ಡಿಕ್ಕಿ ಹೊಡೆದು ಹೋಗಿತ್ತು. ಬಳಿಕ ಅದರಲ್ಲಿ ಒಂದು ಕಾರನ್ನು ರೈತರು ಸುಟ್ಟು ಹಾಕಿದ್ದರು. ಆ ದಿನ ಉದ್ದೇಶಪೂರ್ವಕವಾಗಿಯೇ ವೇಗವಾಗಿ ಬಂದು ರೈತರ ಮೇಲೆ ಕಾರು ಹರಿಸಿ ಕೊಲ್ಲಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ರಾಜೀನಾಮೆ ನೀಡಬೇಕು, ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಬಂಧಿಸಬೇಕೆಂಬ ಒತ್ತಾಯ ಹೆಚ್ಚಾಗಿತ್ತು.

ಪ್ರಮುಖ ಸುದ್ದಿ :-   ದೆಹಲಿ ಹೈಕೋರ್ಟ್ ಮರುಮೌಲ್ಯಮಾಪನದ ಅರ್ಜಿ ತಿರಸ್ಕರಿಸಿದ ನಂತರ ಕಾಂಗ್ರೆಸ್ಸಿಗೆ 1700 ಕೋಟಿ ತೆರಿಗೆ ನೋಟಿಸ್ ನೀಡಿದ ಐಟಿ : ಮೂಲಗಳು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement