ಕಲ್ಲಿದ್ದಲು ಕೊರತೆ, ವಿದ್ಯುತ್​ ಪೂರೈಕೆ ವ್ಯತ್ಯಯ ಎಂಬುದೆಲ್ಲ ತಪ್ಪು ಕಲ್ಪನೆ, ಯಾವುದೇ ಭಯ ಬೇಡ ಎಂದ ಕೇಂದ್ರ ಸರ್ಕಾರ

ನವದೆಹಲಿ: ಚೀನಾ ಮತ್ತು ಯುರೋಪ್​​​ಗಳಲ್ಲಿ ಶುರುವಾಗಿರುವ ಕಲ್ಲಿದ್ದಲು ಅಭಾವದ ಬಿಕ್ಕಟ್ಟು (Coal Crisis) ಭಾರತದಲ್ಲೂ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಗುಜರಾತ್, ಪಂಜಾಬ್, ರಾಜಸ್ಥಾನ, ದೆಹಲಿ ಮತ್ತು ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲಿ ಇದು ವಿದ್ಯುತ್ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ ಎಂದು ವರದಿಯಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಕಲ್ಲಿದ್ದಲು ಬಗ್ಗೆ ಅಭಯ ನೀಡಿದೆ.
ಕಲ್ಲಿದ್ದಲು ಕೊರತೆ ಆತಂಕ ಯಾರಿಗೂ ಬೇಡ. ಕಲ್ಲಿದ್ದಲು ಕೊರತೆ ಎಂಬುದು ತಪ್ಪು ಕಲ್ಪನೆ. ಎಲ್ಲ ಬೇಡಿಕೆಗಳನ್ನೂ ಪೂರೈಸಲು ಅಗತ್ಯವಿರುವಷ್ಟು ಕ್ಲಿದ್ದಲು ಸಂಗ್ರಹ ಇದೆ ಎಂದು ಹೇಳಿದೆ.
ಕಲ್ಲಿದ್ದಲು ಇಂಡಿಯಾ ಲಿಮಿಟೆಡ್​ (CIL) ಬಳಿ 400 ಲಕ್ಷ ಟನ್​​​ಗಳಿಗೂ ಅಧಿಕ ಕಲ್ಲಿದ್ದಲು ಸಂಗ್ರಹವಿದ್ದು, ವಿದ್ಯುತ್ ಸ್ಥಾವರಗಳಿಗೆ ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಕೇಂದ್ರ ಕಲ್ಲಿದ್ದಲು ಇಲಾಖೆ ಸಚಿವ ಪ್ರಲ್ಹಾದ್​ ಜೋಶಿ, ಕಲ್ಲಿದ್ದಲು ಇಂಡಿಯಾ ಲಿಮಿಟೆಡ್​ ಬಳಿ 43 ಮಿಲಿಯನ್​ ಟನ್​​ಗಳಷ್ಟು ಕಲ್ಲಿದ್ದಲು ಸಂಗ್ರಹವಿದೆ. ಮುಂದಿನ 24 ದಿನಗಳಿಗೆ ಇದನ್ನು ಪೂರೈಕೆ ಮಾಡಬಹುದು ಎಂದು ಹೇಳಿತ್ತು.
ನಂತರದ ಬೆಳವಣಿಗೆಯಲ್ಲಿ ಇಂದು (ಭಾನುವಾರ) ಸುದ್ದಿಗೋಷ್ಠಿ ನಡೆಸಿದ ವಿದ್ಯುತ್​ ಸಚಿವಾಲಯದ ಆರ್​.ಕೆ.ಸಿಂಗ್​, ದೇಶದಲ್ಲಿ ಕಲ್ಲಿದ್ದಲು ಕೊರತೆ ಉಂಟಾಗುತ್ತಿದೆ ಎಂದು ಅನಗತ್ಯವಾಗಿ ಗೊಂದಲ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ದೇಶಕ್ಕೆ ಅಗತ್ಯವಿರುವಷ್ಟು ವಿದ್ಯುತ್​ ನೀಡುತ್ತಿದ್ದೇವೆ. ಯಾರಲ್ಲಿ ವಿದ್ಯುತ್​ ಕೊರತೆ ಉಂಟಾಗಿದೆಯೋ ಅವರು ನನಗೆ ಮನವಿ ಸಲ್ಲಿಸಿದರೆ, ನಾನು ಪೂರೈಕೆ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಆದರೆ ಕ್ಲಿದ್ದಲು ಕೊರತೆಯಿಂದ ವಿದ್ಯುತ್‌ ಅಭಾವ ಸೃಷ್ಟಿಯಾಗಲಿದೆ ಎಂದು ಅನಗತ್ಯವಾಗಿ ಜನರಲ್ಲಿ ಗಾಬರಿ ಸೃಷ್ಟಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ದೆಹಲಿಯಲ್ಲಿ ವಿದ್ಯುತ್ ಪೂರೈಕೆ ಮುಂದುವರಿಯಲಿದೆ ಮತ್ತು ಅಲ್ಲಿ ಯಾವುದೇ ಲೋಡ್​ ಶೆಡ್ಡಿಂಗ್​ ಇಲ್ಲ. ದೇಶೀಯ ಅಥವಾ ಆಮದು ಮಾಡಿಕೊಂಡ ಕಲ್ಲಿದ್ದಲಿನ ಶುಲ್ಕವನ್ನು ಲೆಕ್ಕಿಸದೆ, ಪೂರೈಕೆ ಮುಂದುವರಿಸಲಾಗುವುದು. ಅನಿಲ ಪೂರೈಕೆಯಲ್ಲೂ ಕೊರತೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ ಇನ್ನೆರಡು ದಿನಗಳಲ್ಲಿ ಸೂಕ್ತ ಪ್ರಮಾಣದಲ್ಲಿ ವಿದ್ಯುತ್​ ಪೂರೈಕೆ ಮಾಡದೆ ಇದ್ದರೆ ದೆಹಲಿ ಕತ್ತಲಲ್ಲಿಯೇ ಇರಬೇಕಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನೂ ಬರೆದಿದ್ದು ಆದಷ್ಟು ಶೀಘ್ರದಲ್ಲಿ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.

ಪ್ರಮುಖ ಸುದ್ದಿ :-   ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ: ಉದ್ಯಮಿ ನೀರವ್ ಮೋದಿ ಸಹೋದರ ನೇಹಲ್ ಮೋದಿ ಅಮೆರಿಕದಲ್ಲಿ ಬಂಧನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement