ಆನ್‌ಲೈನ್ ಜೂಜುಕೋರರಿಗೆ ಶಾಕ್: ಕರ್ನಾಟಕದಲ್ಲಿ ಇಂದಿನಿಂದ ಆನ್ಲೈನ್ ಗೇಮ್ ಗಳಿಗೆ ಬ್ಯಾನ್‌

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಆನ್‌ಲೈನ್ ಗ್ಯಾಂಬ್ಲಿಂಗ್ ಆನ್​ಲೈನ್ ಗೇಮ್ ನಿಷೇಧಿಸಿ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ.
ಆನ್‌ಲೈನ್ ಜೂಜುಕೋರರಿಗೆ ಸರ್ಕಾರದಿಂದ ಶಾಕ್ ನೀಡಲಾಗಿದ್ದು, ಡ್ರೀಮ್ ಇಲೆವೆನ್ (Dream 11), ಪೇ ಟೀಂ ಫಸ್ಟ್ (PayTM first), ಗೇಮ್​ಜಿ (Gamezy) ಆಪ್ ಸೇರಿದಂತೆ ಹಲವು ಫ್ಯಾಂಟಸಿ ಗೇಮ್ ಆಪ್​ಗಳನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚೆಗಷ್ಟೇ ಸರ್ಕಾರ ಆನ್‌ಲೈನ್ ಗೇಮ್‌, ಆನ್‌ಲೈನ್ ಜೂಜು, ಬೆಟ್ಟಿಂಗ್‌ಗೆ ನಿಷೇಧ ಹೇರಿತ್ತು. ಇದೀಗ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದಿನಿಂದ ಆನ್‌ಲೈನ್ ಜೂಜು ನಿಷೇಧದ ಅಧಿಕೃತ ಆದೇಶ ಹೊರಡಿಸಲಾಗಿದೆ.
ಇತ್ತೀಚೆಗಷ್ಟೇ ಸರ್ಕಾರ ಲಾಟರಿ ಹೊರತುಪಡಿಸಿ, ಕಂಪ್ಯೂಟರ್ ಮತ್ತು ಮೊಬೈಲ್ ‌ಸೇರಿ ಎಲೆಕ್ಟ್ರಾನಿಕ್ ಡಿವೈಸ್ ಮೂಲಕ ಹಣದ ವ್ಯವಹಾರ ನಡೆಸುವ ಆನ್ ಲೈನ್ ಗ್ಯಾಂಬ್ಲಿಂಗ್ ಗೇಮ್ ನಿಷೇಧಕ್ಕೆ ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿತ್ತು. ಈಗಾಗಲೇ ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ಆನ್​ಲೈನ್ ಜೂಜು ನಿಷೇಧಿಸಲಾಗಿದೆ. ಈಗ ಕರ್ನಾಟಕದಲ್ಲಿ ಆನ್​ಲೈನ್ ಜೂಜಿಗೆ ಅಧಿಕೃತವಾಗಿ ನಿಷೇಧದ ಆದೇಶ ಹೊರಬಿದ್ದಿದೆ. ಎಂಪಿಎಲ್ ಸೇರಿದಂತೆ ಹಲವು ಫ್ಯಾಂಟಸಿ ಗೇಮ್​ಗಳು ಕರ್ನಾಟಕ ರಾಜ್ಯದ ಬಳಕೆದಾರರಿಗೆ ಆಡಲು, ಸರ್ಕಾರದಿಂದ ಅನುಮತಿ ಇಲ್ಲ ಎಂದು ಹೇಳಿದ್ದವು.
ಕರ್ನಾಟಕ ಪೊಲಿಸ್‌ ಕಾಯ್ದೆ ಸೆಕ್ಸನ್‌ 2ಕ್ಕೆ ತಿದ್ದುಪಡಿ ತರಲಾಗಿದ್ದು ಸೆಕ್ಸನ್‌ 78ಎ/3 ಪ್ರಕಾರ, ಈಗಿರುವ ಒಂದು ತಿಂಗಳ ಜೈಲು ಶಿಕ್ಷೆ ಪ್ರಮಾಣವನ್ನು 6 ತಿಂಗಳುಗಳಿಗೆ ವಿಸ್ತರಿಸಲಾದೆ. ಒಂದು ವರ್ಷದ ಶಿಕ್ಷೆ ಪ್ರಮಾಣವನ್ನು 3 ವರ್ಷಕ್ಕೆ ಹೆಚ್ಚಳ ಮಾಡಲಾಗಿದೆ ಎನ್ನಲಾಗಿದೆ. ಈಗಿರುವ 500 ರೂ. ದಂಡ 10 ಸಾವಿರ ರೂ.ಗೆ ಹೆಚ್ಚಳ, ಈಗಿರುವ 1,000 ರೂ. ದಂಡವನ್ನು 1 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ.
ಕೇಂದ್ರ ಸಸರ್ಕಾರವೇ “ಸಾರ್ವಜನಿಕ ಜೂಜು ಕಾಯ್ದೆ, 1867′ ಜಾರಿ ಮಾಡಿತ್ತು. ಬಳಿಕ ಉತ್ತರಪ್ರದೇಶ, ಮಧ್ಯಪ್ರದೇಶ, ಪಂಜಾಬ್‌ನಂಥ ಕೆಲವು ರಾಜ್ಯಗಳು ಇದೇ ಕಾಯ್ದೆಯನ್ನು ಜಾರಿ ಮಾಡಿದವು. ಆದರೆ ಅವುಗಳಲ್ಲಿ ಆನ್‌ಲೈನ್‌ ಜೂಜು ಕುರಿತು ಪ್ರಸ್ತಾವವಿರಲಿಲ್ಲ. ಮೊದಲಿಗೆ ಈ ಕುರಿತ ಉಲ್ಲೇಖವಿರುವ ಕಾನೂನು ಜಾರಿ ಮಾಡಿದ್ದು ಸಿಕ್ಕಿಂ ಮತ್ತು ನಾಗಾಲ್ಯಾಂಡ್‌. ಗೋವಾದಲ್ಲಿ ಸರ್ಕಾರಿ ಪ್ರಾಯೋಜಿತ ಕ್ಯಾಸಿನೋಗಳಲ್ಲಿ ಜೂಜಿಗೆ ಅವಕಾಶವಿದೆ.
ಆನ್​ಲೈನ್ ಜೂಜನ್ನು ಪ್ರಸ್ತುತಪಡಿಸುವ ಈ ಆಪ್​ಗಳು ಇದುವರೆಗೆ ಇವುಗಳನ್ನು ಕೌಶಲ್ಯಯುತ ಆಟಗಳು ಎಂದು ಕರೆಯುತ್ತಿದ್ದವು. ಆದ್ದರಿಂದಲೇ ಭಾರತೀಯ ಕಾನೂನಿನಲ್ಲಿ ಅವುಗಳಿಗೆ ಕಠಿಣವಾದ ನಿಯಮಗಳು ಅನ್ವಯವಾಗುತ್ತಿರಲಿಲ್ಲ. ಇದೀಗ ಕರ್ನಾಟಕದ ಆನ್​ಲೈನ್ ಜೂಜು ನಿಷೇಧ ಕಾಯ್ದೆಯ ಅನ್ವಯ, ‘ಕೌಶಲ್ಯಯುತ ಆಟಗಳೂ ಸೇರಿದಂತೆ, ಆನ್​ಲೈನ್ ಗೇಮ್​ಗಳಲ್ಲಿ, ಫಲಿತಾಂಶ ಖಚಿತವಾಗಿರದ ಆಟಗಳಲ್ಲಿ ಹಣವನ್ನು ಒಡ್ಡುವುದು ಅಪರಾಧ’ ಎಂದು ಕಾಯ್ದೆ ಹೇಳುತ್ತದೆ. ಈ ಮೂಲಕ ಆನ್​ಲೈನ್ ಜೂಜಿಗೆ ನಿಷೇಧ ಹೇರಿದೆ.
ರಾಜ್ಯದಲ್ಲಿ ಆನ್‌ಲೈನ್‌ ಜೂಜು ಅಥವಾ ಬೆಟ್ಟಿಂಗ್‌ಗೆ ನಿಷೇಧ ಹೇರಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿತ್ತು. ಕರ್ನಾಟಕ ಪೊಲೀಸ್‌ ಕಾಯ್ದೆ, 1963ಕ್ಕೆ ತಿದ್ದುಪಡಿ ತಂದು ಕಂಪ್ಯೂಟರ್‌ ಡಿವೈಸ್‌, ಮೊಬೈಲ್‌ ಆಪ್‌, ಎಲೆಕ್ಟ್ರಾನಿಕ್‌ ಸಾಧನ ಬಳಸಿ ಆನ್‌ಲೈನ್‌ ಮೂಲಕ ಹಣದ ಅವ್ಯವಹಾರ ನಡೆಸುವ ಜೂಜಾಟ ನಿಷೇಧಿಸಲಾಗಿದೆ.
ಈ ಕುರಿತು ಹೈಕೋರ್ಟ್‌ಗೆ ರಿಟ್‌ ಅರ್ಜಿಯೂ ಸಲ್ಲಿಕೆಯಾಗಿದ್ದು, ಆನ್‌ಲೈನ್‌ ಬೆಟ್ಟಿಂಗ್‌ ಕುರಿತು ಸ್ಪಷ್ಟ ನಿಲುವು ತೆಗೆದುಕೊಳ್ಳುವಂತೆ ಸರಕಾರಕ್ಕೆ ಹೈಕೋರ್ಟ್‌ ಹಲವು ಬಾರಿ ತಾಕೀತು ಮಾಡಿತ್ತು.

ಪ್ರಮುಖ ಸುದ್ದಿ :-   ಕೋಲಾರದಲ್ಲಿ ಕಾಂಗ್ರೆಸ್‌ ಬಣಗಳ ತಿಕ್ಕಾಟ ತಾರಕಕ್ಕೆ : ಐವರು ಶಾಸಕರಿಂದ ರಾಜೀನಾಮೆ ಬೆದರಿಕೆ; ರಾಜೀನಾಮೆ ಪತ್ರ ತೋರಿಸಿ ಎಂಎಲ್‌ ಸಿಗಳಿಂದ ಹೈಡ್ರಾಮಾ...!

3 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement