ವರುಣ್ ಗಾಂಧಿ ಪಕ್ಷಕ್ಕೆ ಸ್ವಾಗತಿಸುವ ಪೋಸ್ಟರ್ ಹಂಚಿಕೊಂಡಿದ್ದಕ್ಕೆ ಕಾಂಗ್ರೆಸ್‌ ನಾಯಕನಿಗೆ ಶೋಕಾಸ್‌ ನೋಟಿಸ್‌…!

ನವದೆಹಲಿ: ಉತ್ತರ ಪ್ರದೇಶದ ಪ್ರಯಾಗರಾಜ್‌ನ ಸ್ಥಳೀಯ ಕಾಂಗ್ರೆಸ್ ನಾಯಕ ಇರ್ಷಾದ್ ಉಲ್ಲಾ (Irshad Ullah), ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi )ಮತ್ತು ಬಿಜೆಪಿ ಸಂಸದ ವರುಣ್ ಗಾಂಧಿ(BJP MP Varun Gandhi) ಅವರ ಭಾವಚಿತ್ರವಿರುವ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದು ಈಗ ಕಾಂಗ್ರೆಸ್‌ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು ಅವರಿಗೆ ನೋಟಿಸ್ ನೀಡಲಾಗಿದೆ.
ಪಿಲಿಭಿತ್‌ ನಿಂದ ಲೋಕಸಭಾ ಸಂಸದರನ್ನು ಸ್ವಾಗತಿಸುವ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವರುಣ್‌ ಗಾಂಧಿ ಅವರನ್ನು ಕಾಂಗ್ರೆಸ್‌ಗೆ ಸ್ವಾಗತಿಸುವ ಪೋಸ್ಟರ್‌ನಲ್ಲಿ ಸೋನಿಯಾ ಗಾಂಧಿ ಅವರ ಜೊತೆಗೆ ವರುಣ್‌ ಗಾಮಧಿ ಫೋಟೋ ಹಾಕಲಾಗಿದೆ. ಪ್ರಯಾಗರಾಜ್ ನಗರ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಇರ್ಷಾದ್ ಉಲ್ಲಾ ಮತ್ತು ನಗರ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ಅಭಯ್ ಅವಸ್ಥಿ ಅವರ ಛಾಯಾಚಿತ್ರಗಳಿವೆ.
ಲಖಿಂಪುರ್ ಖೇರಿ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ 8 ಜನ ಮೃತಪಟ್ಟ ಘಟನೆ ಸಂದರ್ಭದಲ್ಲಿ ಹಾಗೂ ಕರಾಳ ಕೃಷಿ ಕಾನೂನು ಹಿಂಪಡೆಯಲು ಮತ್ತು ನ್ಯಾಯಕ್ಕಾಗಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ (farmers’ protests) ವರುಣ್ ಗಾಂಧಿ ನಿರಂತರ ಬೆಂಬಲ ನೀಡಿದ್ದರು. ಪ್ರತಿಭಟನೆಗೆ ಬೆಂಬಲ ನೀಡಿದ್ದ ಅವರನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ಕೈಬಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಅವರು ಕಾಂಗ್ರೆಸ್ ಸೇರಬಹುದು ಎಂದು ಹಲವು ವರದಿಗಳು ಹೇಳಿದ್ದವು.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಸ್ಟರ್‌ನಲ್ಲಿ, “ಅತ್ಯಂತ ಪ್ರೀತಿಯ ಸ್ವಾಗತ! ದುಃಖದ ದಿನಗಳು ಕಳೆದಿವೆ ಸಹೋದರ, ಸಂತೋಷದ ದಿನಗಳು ಇಲ್ಲಿವೆ (ಸುಸ್ವಾಗತಮ್! ದುಖ್ ಭರೇ ದಿನ್ ಬೀತೆ ರೆ ಭಯ್ಯಾ, ಅಬ್ ಸುಖ್ ಅಯೋ ರೇ . ) ಎಂದು ಹಿಂದಿಯಲ್ಲಿ ಬರೆಯಲಾಗಿದೆ.
ಪ್ರಯಾಗರಾಜ್ ನಗರ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ (ಆಡಳಿತ) ಪ್ರದೀಪ್ ನಾರಾಯಣ್ ದ್ವಿವೇದಿ ಮಂಗಳವಾರ ಇರ್ಷಾದ್ ಉಲ್ಲಾಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.
ನೋಟಿಸ್‌ನಲ್ಲಿ, ಇರ್ಷಾದ್ ಅವರ ಕಾರ್ಯಗಳು ಪಕ್ಷದ ಇಮೇಜ್‌ಗೆ ಧಕ್ಕೆ ಉಂಟು ಮಾಡಿದೆ ಎಂದು ಹೇಳಿದ್ದಾರೆ. ಅವರು 24 ಗಂಟೆಗಳ ಒಳಗೆ ಇರ್ಷಾದ್ ಅವರಿಂದ ಉತ್ತರವನ್ನು ಕೋರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಅನ್ನು ಬಿಡುಗಡೆ ಮಾಡಲು ಮತ್ತು ವೈರಲ್ ಮಾಡಿರುವ ಹಿಂದಿರುವ ಉದ್ದೇಶವೇನು ಎಂದು ಕೇಳಲಾಗಿದ್ದು ಸಂಭವನೀಯ ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ವರದಿಯಾಗಿದೆ.
ಪ್ರಯಾಗರಾಜ್ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಫೀಸ್ ಅನ್ವರ್ ಕೂಡ ಪೋಸ್ಟರ್ ಕುರಿತು ಮಾತನಾಡಿದ್ದು, “ವರುಣ್ ಗಾಂಧಿ ಬಿಜೆಪಿ ಸಂಸದರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಮಾನಹಾನಿ ಮಾಡಲು ಈ ರೀತಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇರ್ಷಾದ್‌ ಅವರು 24 ಗಂಟೆಗಳಲ್ಲಿ ತೃಪ್ತಿದಾಯಕ ಉತ್ತರವನ್ನು ನೀಡದಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅನ್ವರ್ ಹೇಳಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ