ಹೇಳಿಕೆಯನ್ನು ಮಾಧ್ಯಮದಲ್ಲಿ ತಪ್ಪಾಗಿ ಬಿಂಬಿಸಲಾಗಿದೆ: ಉಗ್ರಪ್ಪ

posted in: ರಾಜ್ಯ | 0

ಬೆಂಗಳೂರು: ಬಿಜೆಪಿಯವರು ಮಾಡಿದ ಭ್ರಷ್ಟಾಚಾರವನ್ನು ಕಾಂಗ್ರೆಸ್ ಪಕ್ಷದವರ ತಲೆಗೆ ಕಟ್ಟಲು ಪ್ರಯತ್ನಿಸಲಾಗುತ್ತಿದೆ ಎಂದು ಪಿಸುಗುಟ್ಟಿದ್ದನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.
ನಿನ್ನೆ ವರದಿಯಾದ ವಿವಾದ ಕುರಿತು ಇಂದು (ಬುಧವಾರ) ತುರ್ತು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಅವರು, ನಿನ್ನೆ ಪತ್ರಿಕಾಗೋಷ್ಠಿ ಆರಂಭಿಸುವ ಮುನ್ನ ಮಾಧ್ಯಮ ವಿಭಾಗದ ಸಂಚಾಲಕರಾಗಿದ್ದ ಸಲೀಂ ಹೇಳಿದ್ದು ಮಾಧ್ಯಮದಲ್ಲಿ ಪ್ರಸಾರವಾಗಿತ್ತು.
ಆದಾಯ ತೆರಿಗೆ ದಾಳಿಯಲ್ಲಿ ಪತ್ತೆಯಾದ 18 ಸಾವಿರ ಕೋಟಿ ನೀರಾವರಿ ಅವ್ಯವಹಾರದಲ್ಲಿ ಭಾಗಿಯಾದ ಉಮೇಶ್ ಆಯನೂರು ಬಿಜೆಪಿಯವರು ಎಂದು ಸಲೀಂ ಹೇಳುತ್ತಿದ್ದರು. ನನ್ನ ಜಿಲ್ಲೆಯವರು ಎಂದು ನಾನು ಹೇಳಿದೆ. ಬಿಜೆಪಿಯವರು ಮಾಡಿದ್ದನ್ನು ನಮ್ಮ ಪಕ್ಷದವರ ತಲೆಗೆ ಕಟ್ಟುವ ಪ್ರಯತ್ನ ನಡೆದಿದೆ ಎಂದು ಬೇರೆಯವರು ಮಾತನಾಡಿಕೊಳ್ಳುತ್ತಿದ್ದನ್ನು ಸಲೀಂ ನನ್ನ ಬಳಿ ಹೇಳಿದ್ದರು. ಅದನ್ನು ಮಾಧ್ಯಮಗಳು ತಪ್ಪಾಗಿ ಬಿಂಬಿಸುತ್ತಿವೆ ಎಂದು ಆಕ್ಷೇಪಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಕಮಿಷನ್ ಪಡೆದಿದ್ದಾರೆ ಎಂದು ಕಾಂಗ್ರೆಸ್ ನಾಯಕರೇ ಮಾತನಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಿಂಬಿಸಲಾಗಿದೆ. ಅಧ್ಯಕ್ಷರಾಗಲಿ ಅಥವಾ ಕಾಂಗ್ರೆಸ್‍ನ ಯಾರೂ ಕಮಿಷನ್ ಪ್ರವೃತ್ತಿ ಬೆಳೆಸಿದವರಲ್ಲ. ಡಿ.ಕೆ.ಶಿವಕುಮಾರ್ ಅವರು ರಾಜಕೀಯದಿಂದ ಆಸ್ತಿ ಗಳಿಸಿದವರಲ್ಲ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದ ವೇಳೆ ಪಾವಗಡದಲ್ಲಿ ಸ್ಥಾಪಿಸಿದ ಸೌರ ವಿದ್ಯುತ್ ಉತ್ಪಾದನಾ ಘಟಕವೇ ಅವರ ಜನಪರ ಆಡಳಿತಕ್ಕೆ ಉದಾಹರಣೆ. ನಮ್ಮ ಮಾತುಗಳನ್ನು ತಪ್ಪಾಗಿ ಬಿಂಬಿಸಿ ಅಪ್ರಚಾರ ನಡೆಸುತ್ತಿರುವುದು ಮಾಧ್ಯಮಗಳ ನೈತಿಕತೆಗೆ ವಿರುದ್ಧವಾದದ್ದು ಎಂದು ಹೇಳಿದರು.
ಮಾಧ್ಯಮಗಳು ಯಾವ ಹೇಳಿಕೆಯನ್ನು ತಿರುಚಿಲ್ಲ ಎಂದು ಖಚಿತ ಪಡಿಸಿದಾಗ, ಸ್ಪಷ್ಟನೆ ನೀಡಿದ ಉಗ್ರಪ್ಪ ಅವರು ನಾನು ತಿರುಚಿಲ್ಲ, ಮಾಧ್ಯಮಗಳು ತಿರುಚಬಾರದು. ನಾವು ಪ್ರತಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆಯನ್ನು ಪರಿಗಣಿಸಬೇಕು. ಅದನ್ನು ಬಿಟ್ಟು ಗುಸುಗುಟ್ಟಿದ್ದನ್ನು ಪರಿಗಣಿಸಬಾರದು ಎಂದರು.
ಬೇರೆಯವರು ಮಾತನಾಡುತ್ತಾರೆ ಎಂದು ಹೇಳಿದ್ದೆ. ಅವು ನನ್ನ ಅಭಿಪ್ರಾಯವಲ್ಲ, ಬೇರೆಯವರು ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಲೀಂ ಇಂದು ಬೆಳಗ್ಗೆ ಕೂಡ ತಮ್ಮೊಂದಿಗೆ ಹೇಳಿದ್ದಾರೆ ಎಂದರು.
ಕಾಂಗ್ರೆಸ್ ಕಮಿಷನ್ ಪ್ರವೃತ್ತಿಯಿಂದ ದೂರ ಇದೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಮಿಷನ್ ರಾಮಯ್ಯ ಎಂದು ಆರೋಪ ಮಾಡಿದ್ದರು. ಆದನ್ನು ಉಲ್ಲೇಖಿಸಿ ಮೋದಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆಗೆ ನಾನೇ ನೋಟಿಸ್ ನೀಡಿದ್ದೆ. ಅದಕ್ಕೆ ಮೋದಿ ಅವರು ಪ್ರತಿಕ್ರಿಯಿಸಿಲ್ಲ ಎಂದು ಉಗ್ರಪ್ಪ ಹೇಳಿದರು.
ನಿನ್ನೆ ಆದಾಯ ದಾಳಿ ವೇಳೆ 750 ಕೋಟಿ. ರೂ. ಅಕ್ರಮ ಬಯಲಾಗಿದೆ. ಅದಕ್ಕೆ ಯಾರು ಹೊಣೆ. ಭ್ರಷ್ಟಚಾರ ಯಾರೇ ಮಾಡಿದ್ದರೂ ಅದು ತಪ್ಪು. ಕಾಂಗ್ರೆಸ್ ಭ್ರಷ್ಟಚಾರ ಮುಕ್ತ ಆಡಳಿತಕ್ಕೆ ಬದ್ಧವಾಗಿದೆ ಎಂದು ಒತ್ತಿ ಹೇಳಿದರು.
ಅನೇಕರು ಬಿಂಬಿಸಿದ ಹಾಗೇ ಕಾಂಗ್ರೆಸ್‍ನಲ್ಲಿ ಗುಂಪುಗಾರಿಕೆ ಇಲ್ಲ. ಕಾಂಗ್ರೆಸ್ ಒಂದಾಗಿ ಕೆಲಸ ಮಾಡುತ್ತಿದೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅವರು ಒಮ್ಮಸ್ಸಿನಿಂದ, ಒಗ್ಗಟ್ಟಿನಿಂದ ಕಾಂಗ್ರೆಸ್ ಮತ್ತೆ ಅಧಿಕಾರಿಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ವಿರುದ್ಧವಾಗಿ ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ