ಹಾವಿನಿಂದ ಕಚ್ಚಿಸಿ ಹೆಂಡತಿ ಕೊಲೆ ಪ್ರಕರಣ; ಅಪರಾಧಿ​ಗೆ ಎರಡು ಜೀವಾವಧಿ ಶಿಕ್ಷೆ ಪ್ರಕಟ..!

ತಿರುವನಂತಪುರಂ: ಹಾವಿನಿಂದ ಕಚ್ಚಿಸಿ ಹೆಂಡತಿಯನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ತೀರ್ಪು ಇದೀಗ ಹೊರಬಿದ್ದಿದ್ದು, ಆರೋಪಿ ಸೂರಜ್ ಕುಮಾರ್​ಗೆ ಎರಡು ಜೀವಾವಧಿ ಶಿಕ್ಷೆಯನ್ನು ಘೋಷಿಸಲಾಗಿದೆ. ಹಾಗೇ 5 ಲಕ್ಷ ರೂ. ದಂಡ ವಿಧಿಸಲಾಗಿದೆ.
ಕೇರಳದ ಕೊಲ್ಲಂನ ಅಡಿಷನಲ್ ಸೆಷನ್ಸ್ ಕೋರ್ಟ್ ಇಂದು (ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ವಿಷದ ಹಾವಿನಿಂದ ಕಚ್ಚಿಸಿ ಪತ್ನಿ ಉತ್ರಾಳನ್ನು ಕೊಂದಿದ್ದ ಗಂಡ ಸೂರಜ್ ಅಪರಾಧಿ ಎಂದು ಕೋರ್ಟ್‌ ಹೇಳಿದ್ದು ಕೊಲ್ಲಂ ಅಡಿಷನಲ್ ಸೆಷನ್ಸ್ ಕೋರ್ಟ್ IPC ಸೆಕ್ಷನ್ 302, 307, 328 ಮತ್ತು 201 ಅಡಿಯಲ್ಲಿ ದೋಷಿ ಎಂದು ಹೇಳಿದೆ. ಆ ತೀರ್ಪಿನ ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸಲಾಗಿದ್ದು, ಎರಡು ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ ವಿಧಿಸಲಾಗಿದೆ.
2020ರ ಮೇ 7ರಂದು 25 ವರ್ಷದ ಉತ್ರಾ ಎಂಬ ಗೃಹಿಣಿ ವಿಷ ಸರ್ಪ ಕಚ್ಚಿ ಮೃತಪಟ್ಟಿದ್ದರು. ಆರಂಭದಲ್ಲಿ ಅದೊಂದು ಆಕಸ್ಮಿಕ ಸಾವು ಎಂದು ಎಲ್ಲರೂ ಭಾವಿಸಿದ್ದರು, ಆದರೆ, ಆಕೆಯ ಕುಟುಂಬಸ್ಥರು ಇದರ ಹಿಂದೆ ಆಕೆಯ ಗಂಡನ ಕೈವಾಡದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.
ಸರ್ಕಾರಿ ಕೆಲಸದಲ್ಲಿದ್ದ ಸೂರಜ್ ವಿಕಲಚೇತನಳಾಗಿದ್ದ ಉತ್ರಾಳನ್ನು ಹಣಕ್ಕಾಗಿ ಮದುವೆಯಾಗಿದ್ದ ಆತ ವಿಷ ಸರ್ಪದಿಂದ ಹೆಂಡತಿಯನ್ನು ಎರಡು ಬಾರಿ ಕಚ್ಚಿಸಿ ಕೊಲೆ ಮಾಡಿದ್ದ. ಆದರೆ, ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಾವಿನ ರಹಸ್ಯ ಭೇದಿಸಿದ್ದರು. ಪೊಲೀಸರು ವಿಚಾರಣೆ ನಡೆಸಿದಾಗ ಹೆಂಡತಿಯನ್ನು ಕೊಲೆ ಮಾಡಿದ್ದಾಗಿ ಸೂರಜ್ ಒಪ್ಪಿಕೊಂಡಿದ್ದ. 10 ಸಾವಿರ ರೂ. ಕೊಟ್ಟು ಎರಡು ಹಾವು ತಂದಿದ್ದಾಗಿಯೂ ಹೇಳಿದ್ದ. ಮೇ 2ರಂದೇ ಕೊಲೆ ಮಾಡಲು ಯತ್ನ ಮಾಡಿದ್ದ ಆದರೆ ಹಾವು ಕೈ ಕೊಟ್ಟಿದ್ದರಿಂದ ಮೇ 7ರಂದು ಹಾವು ಕಚ್ಚಿಸಿ ಕೊಂದಿರುವುದಾಗಿ ಹೇಳಿದ್ದ.
ಹಾವಿನಿಂದ ಕಚ್ಚಿಸಿ ಸಾಯಿಸಿದರೆ ಯಾರಿಗೂ ಅನುಮಾನ ಬರುವುದಿಲ್ಲ ಎಂದು ಸೂರಜ್ ಭಾವಿಸಿದ್ದ. ಆದರೆ, ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಮಹಿಳೆಯನ್ನು ಹೋಲುವ ಡಮ್ಮಿ ಗೊಂಬೆಯೊಂದನ್ನು ಬಳಸಿ ಅದಕ್ಕೆ ಹಾವಿನಿಂದ ಕಚ್ಚಿಸಿದ್ದರು. ಹಾವು ಮಹಿಳೆಯ ಗೊಂಬೆಗೆ ಕಚ್ಚಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ಯಾವ ಕಾರಣಕ್ಕೆ ಕಚ್ಚುತ್ತದೆ? ಹಾವಿನ ವರ್ತನೆ ಹೇಗಿರುತ್ತದೆ? ಒಂದು ವೇಳೆ ಕಚ್ಚಿದರೆ ವಿಷ ಏರಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಅಂಶಗಳನ್ನು ಪೊಲೀಸರು ಸಂಗ್ರಹಿಸಿದ್ದರು.
ಬಳಿಕ ಪೊಲೀಸರಿಗೆ ಸೂರಜ್ ಮೇಲೆ ಅನುಮಾನ ಬಲವಾಗಿತ್ತು. ವಿಚಾರಣೆ ವೇಳೆ ಸೂರಜ್ ತನ್ನ ತಪ್ಪು ಒಪ್ಪಿಕೊಂಡಿದ್ದ. ಹಣಕ್ಕಾಗಿ ಯುವತಿಯನ್ನು ಮದುವೆಯಾಗಿದ್ದೆ ಎಂದು ಹೇಳಿದ್ದ ಆತ ತಾನೇ ಹಾವನ್ನು ತಂದು ಆಕೆಯನ್ನು ಕೊಲೆ ಮಾಡಿದ್ದಾಗಿ ಹೇಳಿದ್ದ. ಇಡೀ ದೇಶಾದ್ಯಂತ ಈ ಕೊಲೆ ಪ್ರಕರಣ ಸುದ್ದಿಯಾಗಿತ್ತು.

ಪ್ರಮುಖ ಸುದ್ದಿ :-   ಮೈಸೂರು ಅನಂತಸ್ವಾಮಿ ಧಾಟಿಯಲ್ಲಿ ನಾಡಗೀತೆ : ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌ ; ದಶಕಗಳ ಸಮಸ್ಯೆಗೆ ತೆರೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement