ದಸರಾ ಬಳಿಕ ಕರ್ನಾಟಕದಲ್ಲಿ ಕೊರೊನಾ ನಿಯಮ ಸಡಿಲಿಕೆ ಬಗ್ಗೆ ನಿರ್ಧಾರ; ಸಿಎಂ ಬೊಮ್ಮಾಯಿ

posted in: ರಾಜ್ಯ | 0

ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ನೈಟ್​ ಕರ್ಫ್ಯೂ ವಿಸ್ತರಿಸಲಾಗಿದೆ. ಸಾಲು ಸಾಲು ಹಬ್ಬಗಳ ಹಿನ್ನೆಲೆ ಕೊರೊನಾ ನಿಯಮಗಳನ್ನು ಕೂಡ ಕೊಂಚ ಬಿಗಿಗೊಳಿಸಲಾಗಿದೆ. ದಸರಾ ಹಬ್ಬ ಮುಗಿದ ಬಳಿಕ ಕರ್ನಾಟಕದ ಗಡಿ ಭಾಗಗಳಲ್ಲಿ ಹೇರಿರುವ ನಿರ್ಬಂಧಗಳನ್ನು ತೆರವುಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ದಸರಾ ಹಬ್ಬದ ಬಳಿಕ ಕೇರಳ ಹಾಗೂ ಮಹಾರಾಷ್ಟ್ರ ಗಡಿಯಲ್ಲಿ ಹೇರಿರುವ ಕೋವಿಡ್ ನಿಯಮವನ್ನು ಸಡಿಲಿಕೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು. ಈ ಬಗ್ಗೆ ರಾಜ್ಯದ ಕೊವಿಡ್ ತಜ್ಞರ ಸಮಿತಿಯೊಂದಿಗೆ ಚರ್ಚೆ ನಡೆಸಿ ನಿರ್ಧರಿಸಲಾಗುವುದು. ಗಡಿ ರಾಜ್ಯಗಳಲ್ಲಿ ಕೊರೊನಾ ಕೇಸುಗಳ ಪ್ರಮಾಣ ಹೇಗಿದೆ ಎಂಬ ಬಗ್ಗೆ ಗಮನ ಹರಿಸಿದ್ದೇವೆ. ಅದನ್ನು ಪರಿಗಣಿಸಿ ಸದ್ಯದಲ್ಲೇ ಕೊವಿಡ್ ನಿಯಮಗಳ ಸಡಿಲಿಕೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು. ಮಹಾರಾಷ್ಟ್ರ, ಕೇರಳದಲ್ಲಿ ಕೊರೊನಾ ಕೇಸುಗಳು ಹೆಚ್ಚಾಗಿರುವುದರಿಂದ ಕರ್ನಾಟಕದ ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಸದ್ಯದಲ್ಲೇ ಆ ನಿಯಮವನ್ನು ಸಡಿಲಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
2ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಸವರಾಜ ಬೊಮ್ಮಾಯಿ, ಒಮ್ಮೆ ಕೋವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ಸಿಕ್ಕ ನಂತರ ಕೇಂದ್ರ ಸರ್ಕಾರದ ಮಾರ್ಗಸೂಚಿಯ ಅನುಸಾರ ಮಕ್ಕಳಿಗೆ ಕೊವಿಡ್ ಲಸಿಕೆ ನೀಡುವ ಅಭಿಯಾನ ನಡೆಸಲಾಗುವುದು. ರಾಜ್ಯದಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡಿರುವವರ ಪ್ರಮಾಣ ಹೆಚ್ಚಾಗಿರುವುದು ಸಮಾಧಾನಕರ ಸಂಗತಿ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕರಾವಳಿ ಭಾಗದಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್ ಗಿರಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಸಮಾಜದಲ್ಲಿ ಹಲವಾರು ಭಾವನೆಗಳಿವೆ. ಈ ಭಾವನೆಗಳಿಗೆ ಧಕ್ಕೆ ಆಗದ ಹಾಗೇ ನಾವು ನಡೆದುಕೊಳ್ಳಬೇಕಾಗುತ್ತದೆ. ಕಾನೂನನ್ನು ಕಾಪಾಡುವುದರೊಂದಿಗೆ ಸಾಮಾಜಿಕ ಸಾಮರಸ್ಯ ಕಾಪಾಡೋದು ಸರ್ಕಾರದ ಕರ್ತವ್ಯ ಎಂದು ಸಿಎಂ ಹೇಳಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ