ವಿಜಯಪುರದ ಜಿಲ್ಲೆಯಲ್ಲಿ ಮತ್ತೆ ಭೂಕಂಪನ

posted in: ರಾಜ್ಯ | 0

ವಿಜಯಪುರ : ನಗರಕ್ಕೆ ಹೊಂದಿಕೊಂಡಿರುವ ಹಿಟ್ನಳ್ಳಿಯಲ್ಲಿ ಆಯುಧ ಪೂಜೆ ದಿನವಾದ ಗುರುವಾರ ಭೂಕಂಪನ ಸಂಭವಿಸಿದೆ. ಕಳೆದ ಒಂದು ತಿಂಗಳಿನ ಒಳಗೆ ಹಲವು ಬಾರಿ ಉತ್ತರ ಕರ್ನಾಟಕ ಭಾಗದಲ್ಲಿ ಭೂಮಿ ಕಂಪಿಸಿದ್ದರಿಂದ ಸಹಜವಾಗಿಯೇ ಜನರು ಆತಂಕಿತರಾಗಿದ್ದಾರೆ.
ಹಿಟ್ನಳ್ಳಿ ಕೇಂದ್ರಿತವಾಗಿ ಜುಮನಾಳ, ಮನಗೂಳಿ ಪರಿಸರದಲ್ಲಿ ಗುರುವಾರ ಸಂಜೆ 3.1 ಪ್ರಮಾಣದಷ್ಟು ತೀವ್ರತೆ ಹೊಂದಿತ್ತು ಎಂದು ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರ ತಿಳಿಸಿದೆ. ಕಳೆದೊಂದು ತಿಂಗಳ ಅವಧಿಯಲ್ಲಿ 7ನೇ ಬಾರಿ ವಿಜಯಪುರದಲ್ಲಿ ಭೂಮಿ ಕಂಪಿಸುತ್ತಿದೆ. ಇದು ಅಲ್ಲಿನ ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಬಸವನಬಾಗೇವಾಡಿಯ ಮನಗೂಳಿಯಲ್ಲಿ ಇಂದು ಸಂಜೆ 6.14ರ ಸುಮಾರಿಗೆ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ.
ಭೂಮಿ‌ ಕಂಪಿಸಿದಾಗ ಮನೆಯಲ್ಲಿ ಇದ್ದವರು ಭಯದಲ್ಲಿ ಹೊರಗೆ ಓಡಿ ಬಂದಿದ್ದಾರೆ. ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರ ರಿಕ್ಟರ್ ಮಾಪಕದ ದಾಖಲೆ ಆಧರಿಸಿ ಜಿಲ್ಲಾಡಳಿತ ಭೂಕಂಪ ಸಂಭವಿಸಿದ್ದನ್ನು ದೃಢಪಡಿಸಿದೆ.
ಸೆಪ್ಟೆಂಬರ್​ನಿಂದ ಇಲ್ಲಿಯವರೆಗೂ ಹಲವಾರು ಬಾರಿ ವಿಜಯಪುರದಲ್ಲಿ ಭೂಮಿ ಕಂಪಿಸಿದೆ.ಮನೆಯ ಕಿಟಕಿ ಗಾಜುಗಳು ಒಡೆದು, ಪಾತ್ರೆಗಳು ನೆಲಕ್ಕುರುಳಿದ ಘಟನೆಗಳು ನಡೆದಿವೆ. ಅಕ್ಟೋಬರ್ 1, 2, 3, 7ರಂದು ಕ್ರಮವಾಗಿ ವಿಜಯಪುರದ ತಿಕೋಟ, ಬಸವನಬಾಗೇವಾಡಿ ಮುಂತಾದ ಕಡೆಗಳಲ್ಲಿ ಭೂಕಂಪನವಾಗಿತ್ತು. ರಿಕ್ಟರ್ ಮಾಪಕದಲ್ಲಿ 2.5ರಷ್ಟು ತೀವ್ರತೆ ದಾಖಲಾಗಿತ್ತು. ವಿಜಯಪುರ ಮಾತ್ರವಲ್ಲದೆ ಅಕ್ಟೋಬರ್ ಮೊದಲ ವಾರ ಸಿಂಧಗಿ, ಬೀದರ್, ಕಲಬುರ್ಗಿಯಲ್ಲೂ ಭೂಕಂಪನದ ಅನುಭವವಾಗಿತ್ತು.
ವಿಜಯಪುರದಲ್ಲಿ ಪದೇಪದೆ ಭೂಮಿ ಕಂಪಿಸುತ್ತಿರುವುದರಿಂದ ಜನರಲ್ಲಿ ಆತಂಕವೂ ಹೆಚ್ಚಾಗಿದೆ. ವಿಜಯಪುರಕ್ಕೆ ಇನ್ನೆರಡು ದಿನಗಳಲ್ಲಿ ತಜ್ಞರು ಭೇಟಿ ನೀಡಲಿದ್ದಾರೆ. ಅ. 16ರಂದು ತಜ್ಞರು ವಿಜಯಪುರಕ್ಕೆ ಭೇಟಿ ನೀಡಿ ಭೂಕಂಪನದ ಕುರಿತು ಪರೀಕ್ಷೆ ನಡೆಸಲಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಕಳೆದ ಸಪ್ಟೆಂಬರ್ 4ರಿಂದ ಸರಣಿ ರೂಪದಲ್ಲಿ ವಿಜಯಪುರದಲ್ಲಿ ಭೂಕಂಪನದ ಅನುಭವವಾಗುತ್ತಿದೆ. ಕೆಲ ಬಾರಿ ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ, ಹಲವಾರು ಬಾರಿ ರಿಕ್ಟರ್ ಮಾಪನದಲ್ಲಿ ದಾಖಲಾಗಿಲ್ಲ.

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ