ಯುನಿಟೆಕ್ ಪ್ರಕರಣ; ತಿಹಾರ್ ಜೈಲಿನ 30 ಅಧಿಕಾರಿಗಳ ಅಮಾನತು…!

ನವದೆಹಲಿ: ವಂಚನೆ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಯುನಿಟೆಕ್​​ನ ಮಾಜಿ ಪ್ರವರ್ತಕರಿಗೆ ಸಹಾಯ ಮಾಡಿದ ಆರೋಪದಡಿ ತಿಹಾರ್​ ಜೈಲಿ​​ನ 30 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಯುನಿಟೆಕ್​ ಸಂಸ್ಥೆಯ ಮಾಜಿ ಮುಖ್ಯಸ್ಥರಾದ ಸಂಜಯ್​​ ಚಂದ್ರ ಮತ್ತು ಅಜಯ್​ ಚಂದ್ರ ಅವರಿಗೆ ಸಹಾಯ ಮಾಡಿದ ಆರೋಪದ ಮೇಲೆ ತಿಹಾರ್​ ಜೈಲು ಆಡಳಿತ ಮಂಡಳಿಯು 30 ಅಧಿಕಾರಿಗಳು ಸೇರಿದಂತೆ ಇಬ್ಬರು ಗುತ್ತಿಗೆ ನೌಕರರನ್ನು ಅಮಾನತು ಮಾಡಲಾಗಿದೆ.
ಚಂದ್ರ ಸಹೋದರರು ಜೈಲು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಜೈಲಿನ ಸಿಬ್ಬಂದಿಯ ಸಹಾಯದಿಂದ ಭೂಗತ ದಂಧೆಯನ್ನು ಜೈಲಿನಿಂದಲೇ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಮಂಗಳವಾರ, ದೆಹಲಿ ಪೊಲೀಸ್ ಅಪರಾಧ ವಿಭಾಗವು 32 ಜೈಲು ಅಧಿಕಾರಿಗಳು ಮತ್ತು ಚಂದ್ರ ಸಹೋದರರ ವಿರುದ್ಧ ಐಪಿಸಿ ಮತ್ತು ಭ್ರಷ್ಟಾಚಾರ ತಡೆ ಕಾಯಿದೆಯ ಅಡಿಯಲ್ಲಿ ಎಫ್ಐಆರ್ ದಾಖಲಿಸಿದೆ.
ಆಗಸ್ಟ್ 26 ರಂದು ಸುಪ್ರೀಂ ಕೋರ್ಟ್ ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಅಸ್ತಾನಾಗೆ ಜಾರಿ ನಿರ್ದೇಶನಾಲಯದ ವರದಿಯಲ್ಲಿನ ಆರೋಪಗಳನ್ನು ತನಿಖೆ ಮಾಡುವಂತೆ ಸೂಚಿಸಿದ ನಂತರ ಅಮಾನತು ಮಾಡಲಾಗಿದ್ದು, ತಿಹಾರ್ ಜೈಲಿನಲ್ಲಿರುವ ಚಂದ್ರ ಸಹೋದರರು ಮುಕ್ತವಾಗಿ ಓಡಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ದೆಹಲಿ ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದು, ಯುನಿಟೆಕ್ ಹಗರಣದ ಆರೋಪಿಗಳ ಜೊತೆ ಕೈ ಜೋಡಿಸಿರುವ ಆರೋಪದಲ್ಲಿ 32 ಜೈಲು ಸಿಬ್ಬಂದಿ ಹೆಸರುಗಳನ್ನು ದೆಹಲಿ ಪೊಲೀಸರು ತಿಹಾರ್ ಜೈಲಿನ ಮಹಾನಿರ್ದೇಶಕ ಸಂದೀಪ್ ಗೋಯೆಲ್ ಅವರಿಗೆ ಕಳುಹಿಸಿದ್ದರು. ಅದರಂತೆ 30 ಜೈಲು ಸಿಬ್ಬಂದಿ ಮತ್ತು ಇಬ್ಬರು ಗುತ್ತಿಗೆ ನೌಕರರನ್ನು ಅಮಾನತು ಮಾಡಲಾಗಿದೆ.
ವಿಚಾರಣಾ ವರದಿಯನ್ನು ಪರಿಶೀಲಿಸಿದ ನಂತರ ಸುಪ್ರೀಂ​​ ಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ಣ ಪ್ರಮಾಣದ ಕ್ರಿಮಿನಲ್​​ ತನಿಖೆ ನಡೆಸಲು ಅನುಮತಿ ನೀಡಿತ್ತು. ವಂಚನೆ ಪ್ರಕರಣದಲ್ಲಿ ತಿಹಾರ್ ಜೈಲು ಸೇರಿರುವ ಯುನಿಟೆಕ್‌ ಕಂಪನಿಯ ಮಾಜಿ ನಿರ್ದೇಶಕರಾದ ಸಂಜಯ್‌ಚಂದ್ರ ಹಾಗೂ ಅಜಯ್‌ ಚಂದ್ರ ಅವರನ್ನು ಮುಂಬೈನ ಆರ್ಥರ್‌ ರೋಡ್‌ ಜೈಲು ಹಾಗೂ ತಲೋಜಾ ಜೈಲಿಗೆ ಸ್ಥಳಾಂತರಿಸುವಂತೆ ಸುಪ್ರೀಂಕೋರ್ಟ್‌ ಆದೇಶ ನೀಡಿತ್ತು. ಅಲ್ಲದೆ, ತಿಹಾರ್ ಜೈಲಿನ ಅಧಿಕಾರಿಗಳ ಬಗ್ಗೆ ನ್ಯಾಯಾಲಯಕ್ಕೆ ನಂಬಿಕೆಯೇ ಹೋಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಇಬ್ಬರು ಆರೋಪಿಗಳೊಂದಿಗೆ ತಿಹಾರ್‌ ಜೈಲು ಸಿಬ್ಬಂದಿ ನಡೆದುಕೊಳ್ಳುತ್ತಿದ್ದ ರೀತಿ ಕುರಿತು ಖುದ್ದಾಗಿ ತನಿಖೆ ನಡೆಸಿ, ವರದಿ ಸಲ್ಲಿಸಬೇಕು ಎಂದು ದೆಹಲಿ ಪೊಲೀಸ್‌ ಕಮಿಷನರ್‌ಗೆ ನ್ಯಾಯಪೀಠ ನಿರ್ದೇಶನ ನೀಡಿತ್ತು.
ಯುನಿಟೆಕ್‌ನ ಸಂಸ್ಥಾಪಕ ರಮೇಶ್‌ ಚಂದ್ರ ರಹಸ್ಯವಾಗಿ ಭೂಗತ ಕಚೇರಿ ಸ್ಥಾಪಿಸಿರುವುದು ನಮಗೆ ತಿಳಿದುಬಂದಿದೆ ಎಂಬ ವಿಷಯವನ್ನು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ನ್ಯಾಯಪೀಠದ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ತಿಹಾರ್ ಜೈಲಿನ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದ ಸುಪ್ರೀಂ ಕೋರ್ಟ್ ನ್ಯಾಯಪೀಠ, ಸಂಜಯ್ ಚಂದ್ರ- ಅಜಯ್‌ ಚಂದ್ರ ಅವರ ವರ್ತನೆ ಹಾಗೂ ಈ ಬಗ್ಗೆ ತಿಹಾರ್‌ ಜೈಲು ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಳ್ಳದ ಬಗ್ಗೆ ಇ.ಡಿ ಅಧಿಕಾರಿಗಳು ಎರಡು ವರದಿಗಳನ್ನು ಸಲ್ಲಿಸಿದ್ದಾರೆ. ಈ ಇಬ್ಬರು ಆರೋಪಿಗಳ ವರ್ತನೆ ಹಾಗೂ ತಿಹಾರ್ ಜೈಲಿನ ಅಧಿಕಾರಿಗಳ ನಡವಳಿಕೆ ನಾಚಿಕೆಗೇಡಿನ ಸಂಗತಿ. ಇದು ಬಹಳ ಗಂಭೀರವಾದ ವಿಷಯವಾಗಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳಿಗೆ ಛೀಮಾರಿ ಹಾಕಿತ್ತು.
ಸಂಜಯ್ ಚಂದ್ರ ಮತ್ತು ಅಜಯ್ ಚಂದ್ರ ಸಹೋದರರು ಹಾಗೂ ಯುನಿಟೆಕ್‌ ಲಿಮಿಟೆಡ್‌ ಕಂಪನಿಯ ವಿರುದ್ಧದ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪಗಳ ಕುರಿತು ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ನಡೆಸುತ್ತಿದೆ.

ಪ್ರಮುಖ ಸುದ್ದಿ :-   ಇವರು ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿ : ತೆಲುಗು ದೇಶಂ ಪಕ್ಷದ ಇವರ ಆಸ್ತಿ 5,785 ಕೋಟಿ ರೂಪಾಯಿ...!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement