ಕನ್ನಡದ ಹಿರಿಯ ನಟ, ಬರಹಗಾರ, ಚಿಂತಕ ಪ್ರೊ. ಜಿ.ಕೆ. ಗೋವಿಂದ ರಾವ್ ನಿಧನ

ಹುಬ್ಬಳ್ಳಿ: ಕನ್ನಡದ ಹಿರಿಯ ನಟ ಬರಹಗಾರ ಪ್ರೊ.ಜಿ.ಕೆ ಗೋವಿಂದ ರಾವ್ ಇಂದು (ಶುಕ್ರವಾರ) ಮುಂಜಾನೆ ಹುಬ್ಬಳ್ಳಿಯಲ್ಲಿ ನಿಧನರಾಗಿದ್ದಾರೆ.
ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಬೆಳಗಿನ ಜಾವ ಮುಂಜಾನೆ 4.45ರ ಸುಮಾರಿಗೆ ಅವರು ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಲೇಖಕರಾಗಿ, ಪ್ರಾಧ್ಯಾಪಕರಾಗಿ, ರಂಗಭೂಮಿ ಕಲಾವಿದರಾಗಿ, ಚಿತ್ರ ನಟರಾಗಿ ಅವರು ಗುರುತಿಸಿಕೊಂಡಿದ್ದರು. ಹುಬ್ಬಳ್ಳಿಯ ಮುಕ್ತಿಧಾಮದಲ್ಲಿ ಬೆಳಗ್ಗೆ 8.30 ಸುಮಾರಿಗೆ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಗೋವಿಂದ ರಾವ್ ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ.

ಅನಾರೋಗ್ಯದ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿರುವ ತಮ್ಮ ಮಗಳ ಮನೆಯಲ್ಲಿದ್ದರು.
ವೃತ್ತಿಯಿಂದ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಅವರು, ಕಲಾವಿದರಾಗಿಯೂ ಗುರುತಿಸಿಕೊಂಡಿದ್ದರು. ಮಾಲ್ಗುಡಿ ಡೇಸ್, ಮಹಾಪರ್ವ ಧಾರಾವಾಹಿ ಸೇರಿದಂತೆ ಹಲವಾರು ಧಾರವಾಹಿಗಳಲ್ಲಿ, ಚಲನಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.
ಜಿ.ಕೆ. ಗೋವಿಂದ ರಾವ್ 1937 ಏಪ್ರಿಲ್ 27ರಂದು ಬೆಂಗಳೂರಿನಲ್ಲಿ ಜನಿಸಿದರು. ಇಂಗ್ಲಿಷ್ ಸಾಹಿತ್ಯದ ಅಧ್ಯಯನ ನಡೆಸಿದ ಅವರು ಇಂಗ್ಲಿಷ್‌ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು.
ಈಶ್ವರ ಅಲ್ಲಾ (ಕಿರುಕಾದಂಬರಿ), ಶೇಕ್ಸ್‌ಪಿಯರ್ ಎರಡು ನಾಟಕಗಳ ಅಧ್ಯಯನ, ಶೇಕ್ಸ್‌ಪಿಯರ್ ಸಂವಾದ (ವಿಮರ್ಶಾ ಲೇಖನಗಳು), ನಡೆ-ನುಡಿ, ನಾಗರಿಕತೆ ಮತ್ತು ಅರಾಜಕತೆ, ಬಿಂಬ ಪ್ರತಿಬಿಂಬ, ಕ್ರಿಯೆ ಪ್ರತಿಕ್ರಿಯೆ, ಮನು ವರ್ಸಸ್ ಅಂಬೇಡ್ಕರ್: ತಮ್ಮ ಆಯ್ಕೆ ಯಾವುದು? (ಸಂಕೀರ್ಣ ಬರಹಗಳ ಸಂಗ್ರಹಗಳು) ಅವರ ಪ್ರಕಟಿತ ಕೃತಿಗಳು.
ಜಿ.ಕೆ.ಗೋವಿಂದ ರಾವ್ ಗ್ರಹಣ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಕನ್ನಡ ಟಿ ವಿ ಧಾರಾವಾಹಿಗಳಾದ ಮಹಾ ಪರ್ವದಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಗ್ರಹಣ (1978)
ಮಿಥಿಲೆಯ ಸೀತೆಯರು (1988)
ಕರ್ಫ್ಯೂ (1994)
ನಿಶ್ಯಬ್ದ (1998)
ಭೂಮಿ ತಾಯಿಯ ಚೋಚ್ಚಲ ಮಗ (1998)
ಅಜ್ಜು (2004)
ಶಾಸ್ತ್ರಿ (2005) ಅವರು ಅಭಿನಯ ಮಾಡಿರುವ ಪ್ರಮುಖ ಸಿನಿಮಾಗಳಾಗಿವೆ.ಇದಲ್ಲದೆ ಅನೇಕ ಸಿನೆಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದರು.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿನ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿಗೆ ಸಿದ್ದರಾಮಯ್ಯ ಮುಖ್ಯಸ್ಥ

ಜಿ.ಕೆ.ಗೋವಿಂದ ರಾವ್ ಹಲವಾರು ಸಾಮಾಜಿಕ ಚಳುವಳಿಗಳಲ್ಲಿ ಭಾಗವಹಿಸಿದ್ದಾರೆ ಮತ್ತು ಕೆಲವು ರಾಜಕೀಯ ಪಕ್ಷಗಳನ್ನು ಬಹಿರಂಗವಾಗಿ ಟೀಕಿಸಿದ್ದಾರೆ. ಮಡೆಮಡೆ ಸ್ನಾನದಂತಹ ಮೂಢನಂಬಿಕೆಗಳನ್ನು ಅವರು ವಿರೋಧಿಸಿದರು ಮತ್ತು ಪ್ರಚಲಿತ ಮೂಢ ನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸಲು ಅನೇಕ ಜನಜಾಗೃತಿ ಉಪನ್ಯಾಸಗಳನ್ನು ನೀಡಿದ್ದರು.

ಚ​​ ಹೋರಾಟದ ಕ್ಷೇತ್ರದಲ್ಲಿ ಜಿಕೆಜಿ ಎಂದೇ ಚಿರಪರಿಚಿತರು. ಮಾನವ ಹಕ್ಕು ಉಲ್ಲಂಘನೆ, ಪ್ರಭುತ್ವದ ದೌರ್ಜನ್ಯ, ಅನ್ಯಾಯ ಅಕ್ರಮಗಳು ಎಲ್ಲೇ ನಡೆದರೂ ಜಿಕೆಜಿ ಹೋರಾಟ ಅಲ್ಲಿ ದಾಖಲಾಗುತ್ತಿತ್ತು. ಎಡಪಂಥೀಯ ಚಿಂತಕರ ಜೊತೆ ಗುರುತಿಸಿಕೊಂಡಿದ್ದ ಜಿ.ಕೆ. ಗೋವಿಂದ ರಾವ್​ ಪ್ರಗತಿಪರ ಹೋರಾಟಗಾರರಾಗಿದ್ದರು.

ಆದಿವಾಸಿ ವಿದ್ಯಾರ್ಥಿ ಬಂಧನದ ವಿರುದ್ಧದ ಹೋರಾಟ ಸೇರಿದಂತೆ ಕರ್ನಾಟಕದ ಬಹುತೇಕ ಚಳವಳಿಯಲ್ಲಿ ಜಿ.ಕೆ. ಗೋವಿಂದರಾವ್​​ ಭಾಗಿಯಾಗಿದ್ದರು. ಪ್ರಖರ ವಾಗ್ಮಿಯೂ ಆಗಿದ್ದ ಅವರು ಭಾಷಣ ಹಲವರನ್ನು ಪ್ರೇರೇಪಿಸುವಂತಿರುತ್ತದೆ. ಖಡಕ್​​ ಶೈಲಿಯಲ್ಲಿ ಭಾಷಣ ಮಾಡುವ ಅವರು, ಮೇಲ್ನೋಟಕ್ಕೆ ಕಠೋರದಂತೆ ಕಂಡು ಬಂದರೂ,ಮಾತೃಹೃದಯಿ ಎಂಬುದನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು.

ಕನ್ನಡದ ಹಿರಿಯ ನಟ, ಚಿಂತಕ, ಪ್ರೊ.ಜಿ.ಕೆ ಗೋವಿಂದ ರಾವ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅವರ ನಿಧನದಿಂದ ಒಬ್ಬ ಅನನ್ಯ ಚಿಂತಕನನ್ನು ನಾಡು ಕಳೆದುಕೊಂಡಂತಾಗಿದೆ. ಭಗವಂತ ಮೃತರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಅವರ ಅಗಲಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಜಿ.ಕೆ.ಗೋವಿಂದರಾವ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಅವರು ಟ್ವೀಟ್ ಮಾಡಿದ್ದು, ‘‘ಹಿರಿಯ ಲೇಖಕ, ಚಿಂತಕ,‌ ನಟ ಪ್ರೊ.ಜಿ.ಕೆ.ಗೋವಿಂದರಾವ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ನನ್ನ ಹಿತೈಷಿ, ಮಾರ್ಗದರ್ಶಕ ಮತ್ತು ಆತ್ಮೀಯ ಸ್ನೇಹಿತರಾಗಿದ್ದ ಪ್ರೊ. ಜಿಕೆಜಿ ಅವರಿಗೆ ಗೌರವದ ನಮನಗಳು. ಅವರನ್ನು ಕಳೆದುಕೊಂಡ ಕುಟುಂಬದ ಸದಸ್ಯರು, ಶಿಷ್ಯರು, ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ.’’ ಎಂದು ಸಂತಾಪ ಸೂಚಿಸಿದ್ದಾರೆ.

ಪ್ರಮುಖ ಸುದ್ದಿ :-   ಎಐಸಿಸಿ ಒಬಿಸಿ ಸಲಹಾ ಮಂಡಳಿಯ ಅಧ್ಯಕ್ಷರಾಗಿ ಸಿದ್ದರಾಮಯ್ಯ ನೇಮಕವಾಗಿಲ್ಲ : ಸಿಎಂ ಕಚೇರಿ ಸ್ಪಷ್ಟನೆ

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ. ಹಿರಿಯ ಚಿಂತಕ, ರಂಗಕರ್ಮಿ ಪ್ರೊ ಜಿ.ಕೆ.ಗೋವಿಂದರಾವ್ ವಿಧಿವಶರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದ ಅವರು ಚಲನಚಿತ್ರ, ಸಾಹಿತ್ಯ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದರು. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು, ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ.

ಹಿರಿಯ ನಿರ್ದೇಶಕ ಟಿ.ಎನ್. ಸೀತಾರಾಮ್ ಸಂತಾಪ
ನಮ್ಮ ತಂಡದ ಅನೇಕ ಧಾರಾವಾಹಿಗಳಲ್ಲಿ ಮುಖ್ಯ ಪಾತ್ರಗಳನ್ನು ಮಾಡುತ್ತ ನಮ್ಮೆಲ್ಲರಿಗೂ ತುಂಬಾ ಹತ್ತಿರವಾದವರು. ಜ್ಞಾನ ಪಾಂಡಿತ್ಯಕ್ಕಿಂತ ಹೆಚ್ಚಾಗಿ ಹೃದಯದ ಮೂಲಕ ಗೆಳೆಯರ ಜತೆ ಬಾಂಧವ್ಯವಿಟ್ಟುಕೊಂಡವರು. ಅವರ ಜತೆ ಜಗಳಗಳು ಗಂಟು ಮುಖದಿಂದ ಕೂಡಿರುತ್ತಿರಲಿಲ್ಲ. ನಗು, ಉಲ್ಲಾಸಗಳಿಂದ ತುಂಬಿರುತ್ತಿತ್ತು ಎಂದು ಖ್ಯಾತ ನಿರ್ದೇಶಕ ಟಿ.ಎನ್.ಸೀತಾರಾಮ ಹೇಳಿದ್ದಾರೆ.
ಮುಂದಿನ ಧಾರಾವಾಹಿಯಲ್ಲಿ ಕೋಪದ ವ್ಯಕ್ತಿತ್ವದ, ಆದರೆ ಅಂತಃಕರಣ ತುಂಬಿದ ಮುಖ್ಯಮಂತ್ರಿ ಪಾತ್ರ ಮಾಡಿಸಬೇಕೆಂದು ನಿನ್ನೆ ತಾನೇ ನನ್ನ ತಂಡದವರ ಜತೆ ಮಾತನಾಡುತ್ತಿದ್ದೆ. ಇಷ್ಟು ಬೇಗ ವಿದಾಯ ಹೇಳುತ್ತೀರೆಂದು ಭಾವಿಸಿರಲಿಲ್ಲ,” ಎಂದು ಹಿರಿಯ ನಿರ್ದೇಶಕ ಟಿ.ಎನ್. ಸೀತಾರಾಮ್ ಸಂತಾಪ ಸೂಚಿಸಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement