ನವದೆಹಲಿ: ದುರ್ಗಾ ದೇವಿ ಮೂರ್ತಿಯ ಮೆರವಣಿಗೆಯ ನಡುವೆ ಕಾರು ನುಗ್ಗಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿರುವ ಘಟನೆ ಛತ್ತೀಸ್‌ಗಡದ ಜಶ್‌ಪುರದಲ್ಲಿ ಶುಕ್ರವಾರ ನಡೆದ ಬಗ್ಗೆ ವರದಿಯಾಗಿದೆ.
ಆದರೆ ಘಟನೆಯಲ್ಲಿ, ಕನಿಷ್ಠ ನಾಲ್ಕು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅನಧಿಕೃತ ಮೂಲಗಳು ತಿಳಿಸಿವೆ. 20 ಮಂದಿ ಇತರರು ಗಾಯಗೊಂಡಿದ್ದು ಇದರಲ್ಲಿ ನಾಲ್ವರ ಸ್ಥಿತಿ ಚಗಂಭೀರವಾಗಿದೆ ಎನ್ನಲಾಗಿದೆ.
ಉತ್ತರ ಪ್ರದೇಶದ ಲಖಿಂಪುರ-ಖೇರಿಯಲ್ಲಿ ರೈತರ ಮೆರವಣಿಗೆ ಸಮಯದಲ್ಲಿ ಕಾರು ನುಗ್ಗಿ ಹಲವು ಜನರು ಸಾವಿಗೀಡಾದ ಘಟನೆ ಇತ್ತೀಚೆಗಷ್ಟೇ ನಡೆದಿತ್ತು. ಇಂದು (ಶುಕ್ರವಾರ) ಜಶ್‌ಪುರದ ಪಥಲ್‌ಗಾಂನಲ್ಲಿ ದುರ್ಗಾ ಮೂರ್ತಿಯ ವಿಸರ್ಜನೆಗಾಗಿ ಸಾಗುತ್ತಿದ್ದ ಮೆರವಣಿಯ ಮೇಲೆ ವೇಗವಾಗಿ ಬಂದ ಕಾರೊಂದು ನುಗ್ಗಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ಒಬ್ಬರು ಮೃತಪಟ್ಟಿದ್ದಾರೆ, ಇತರೆ 16 ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರಿಗೆ ಮೂಳೆ ಮುರಿದಿದೆ ಎಂದು ವರದಿಯಾಗಿದೆ.
ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೇಗವಾಗಿ ಬಂದ ಕಾರು ಮೆರವಣಿಗೆಯಲ್ಲಿದ್ದ ಜನರಿಗೆ ಡಿಕ್ಕಿ ಹೊಡೆದು ಅದೇ ವೇಗದಲ್ಲಿ ಮುನ್ನುಗ್ಗಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ. ಹತ್ತಾರು ಮಂದಿ ನೆಲಕ್ಕೆ ಉರುಳಿದ್ದು, ಚಕ್ರದ ಕೆಳಗೆ ಸಿಲುಕಿರುವುದು ವಿಡಿಯೊದಲ್ಲಿದೆ. ಅನಂತರ ಜನರು ಕಾರನ್ನು ಹಿಂಬಾಲಿಸಿ ಓಡುವುದು ವಿಡಿಯೊದಲ್ಲಿ ಕಾಣುತ್ತದೆ.
ಆರೋಪಿಗಳನ್ನು ತಕ್ಷಣ ಬಂಧಿಸಲಾಗಿದೆ. ಪ್ರಾಥಮಿಕವಾಗಿ ತಪ್ಪಿತಸ್ಥರೆಂದು ತೋರುತ್ತಿರುವ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ತನಿಖೆಗೆ ಆದೇಶಿಸಲಾಗಿದೆ, ಯಾರನ್ನೂ ಬಿಡುವುದಿಲ್ಲ. ಎಲ್ಲರಿಗೂ ನ್ಯಾಯ ನೀಡಲಾಗುವುದು ಎಂದು ಮುಖ್ಯಮಂತ್ರಿ ಭುಪೇಶ ಬಾಘೇಲ್ ಟ್ವೀಟ್ ಮಾಡಿದ್ದಾರೆ.
ಮೃತ ವ್ಯಕ್ತಿಯನ್ನು ಗೌರವ್ ಅಗರವಾಲ್ (21) ಎಂದು ಗುರುತಿಸಲಾಗಿದೆ. ವಾಹನದಲ್ಲಿದ್ದ ಮಧ್ಯಪ್ರದೇಶದ ಸಿಂಗ್ರೌಲಿ ಮೂಲದ ಬಬ್ಲು ವಿಶ್ವಕರ್ಮ (21) ಮತ್ತು ಶಿಶುಪಾಲ್ ಸಾಹು (26), ನೆರೆಯ ನಂತರ ಪಟ್ಟಣದ ಹೊರವಲಯದಿಂದ ಬಂಧಿಸಲಾಗಿದೆ.
ಚಾಲಕನನ್ನು ಜನರು ಹಿಡಿದು ಥಳಿಸಿದ್ದಾರೆ ಎಂದು ಜಶ್ಪುರದ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಅಗರ್ವಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇಬ್ಬರೂ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದರು ಮತ್ತು ಅವುಗಳನ್ನು ನಾಶಮಾಡಲು ಎಸ್ಯುವಿಗೆ ಬೆಂಕಿ ಹಚ್ಚಿದ್ದಾರೆ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ.
ಪಟ್ಟಣದಲ್ಲಿ ಉದ್ವಿಗ್ನತೆ ಉಂಟಾಗಿದ್ದು ಪಠಲ್‌ಗಾಂವ್ ಪೊಲೀಸ್ ಠಾಣೆಯ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದರು.
ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಮೃತರ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ