ಗಡಿಕೇಶ್ವಾರದ ಗ್ರಾಮದಲ್ಲಿ ಮತ್ತೆ ಕಂಪಿಸಿದ ಭೂಮಿ..!

ಕಲಬುರಗಿ: ಕಳೆದ ಕೆಲ ವಾರಗಳಿಂದ ಭೂಕಂಪನದಿಂದಾಗಿಯೇ ಸುದ್ದಿಯಾಗುತ್ತಿರುವ ಗಡಿಕೇಶ್ವಾರದಲ್ಲಿ ಇಂದು (ಶನಿವಾರ( ಬೆಳಗ್ಗೆ ಮತ್ತೆ ಭೂಮಿ ಕಂಪಿಸಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಗ್ರಾಮಸ್ಥರ ಪ್ರಕಾರ, ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವಾರದಲ್ಲಿ‌ ಇಂದು (ಶನಿವಾರ) ಬೆಳಿಗ್ಗೆ 11.20ರ ಸುಮಾರಿನಲ್ಲಿ ಭೂಮಿಯಿಂದ ಜೋರು ಸದ್ದು ಕೇಳಿಬಂದಿದ್ದು, ಭೂಮಿ ಕಂಪಿಸಿದ ಅನುಭವವಾಗಿದೆ. ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ಓಡಿದ್ದಾರೆ.
ಕಲಬುರಗಿಯಿಂದ 75 ಕಿಲೋಮೀಟರ್ ದೂರ ಗಡಿಕೇಶ್ವಾರ ಗ್ರಾಮದಲ್ಲಿ ಈಗ ಪದೇಪದೇ ಭೂಕಂಪನದಿಂದ ಜನರ ಬದುಕು ಈಗ ಅಕ್ಷರಶಃ ಬೀದಿಗೆ ಬಂದಿದೆ. ಗ್ರಾಮಸ್ಥರು ಆತಂಕದಿಂದ ಊರು ತೊರೆಯುತ್ತಿದ್ದಾರೆ. ಈಗಾಗಲೇ ಇಲ್ಲಿನ ಶೇ.75 ರಷ್ಟು ಮಂದಿ ನಿವಾಸಿಗಳು ಗ್ರಾಮ ತೊರೆದಿದ್ದಾರೆ ಎನ್ನಲಾಗಿದೆ.
ಗಡಿಕೇಶ್ವಾರ ಗ್ರಾಮದಲ್ಲಿ ಸುಮಾರು 800 ಮನೆಗಳಿದ್ದು, ಭೂಕಂಪನದಿಂದಾಗಿ ಇಲ್ಲಿನ ದೇವಾಲಯವೂ ಸೇರಿದಂತೆ ಬಹುತೇಕ ಮನೆಗಳು ಬಿರುಕು ಬಿಟ್ಟಿವೆ.
ಪ್ರತ್ಯೇಕ ಶೆಡ್ ಗಳ ನಿರ್ಮಾಣ
ಪೀಡಿತ ಗಡಿಕೇಶ್ವಾರದಲ್ಲಿ ಜನರು ಗ್ರಾಮ ತೊರೆಯುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಸ್ಥಳೀಯರಿಗಾಗಿ ಎರಡು ಪ್ರತ್ಯೇಕ ಆಶ್ರಯ ಕೇಂದ್ರ ಅಥವಾ ಶೆಡ್ ಗಳನ್ನು ನಿರ್ಮಿಸಿದೆ. ಗಡಿಕೇಶ್ವಾರ ಗ್ರಾಮದ ಗ್ರಾಮಸ್ಥರು ಆಶ್ರಯ ಕೇಂದ್ರ ನಿರ್ಮಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು.
ಕಳೆದ ಮಂಗಳವಾರ ಉಪ ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ ಅವರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ್ದರು. ಈ ವೇಳೆ ಸೇಡಂ ಶಾಸಕ ರಾಜ್ ಕುಮಾರ್ ಪಾಟೀಲ್ ತೆಲ್ಕುರ್, ಕಲಬರಗಿ ಸಂಸದ ಉಮೇಶ್ ಜಾದವ್ ಅವರು ಕೂಡ ಗ್ರಾಮಕ್ಕೆ ಆಗಮಿಸಿ ತಜ್ಞರೊಂದಿಗೆ ಚರ್ಚೆ ನಡೆಸಿದ್ದರು.
ಅಂತೆಯೇ ಅಧಿಕಾರಿಗಳು ಗ್ರಾಮದ ಆಯಕಟ್ಟಿನ ಸ್ಥಳಗಳಲ್ಲಿ ಮಾರ್ಗದರ್ಶಿ ಫಲಕಗಳ ಅಳವಡಿಸಿದ್ದು, ಇದರಲ್ಲಿ ಭೂಕಂಪನ ಸಂಭವಿಸಿದಾಗ ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳ ಕುರಿತು ಮಾರ್ಗದರ್ಶನಗಳಿವೆ. ಊರು ತೊರೆದಿದ್ದವರ ಪೈಕಿ ಕೆಲ ಗ್ರಾಮಸ್ಥರು ಊರಿಗೆ ವಾಪಸಾಗಿದ್ದಾರೆ. ದಸರಾ ನಿಮಿತ್ತ ಮನೆ ಮುಂದೆ ದೀಪ ಹಚ್ಚಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಗಡಿಕೇಶ್ವಾರ ಗ್ರಾಮದಲ್ಲಿ ನಿರಂತರ ಭೂಕಂಪನ ಹಾಗೂ ಭೂಮಿಯಿಂದ ಸದ್ದು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಅಧ್ಯಯನ‌ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement