ಮೈಸೂರು: ತಮಿಳುನಾಡಿನ ನೀಲಗಿರಿ ಜಿಲ್ಲೆಯ ಮದುಮಲೈ ವನ್ಯಧಾಮದಲ್ಲಿ ನಾಲ್ಕು ಜನರನ್ನು ಕೊಂದು ಹಾಕಿದ್ದ 13 ವರ್ಷದ ಗಂಡು ಹುಲಿ ಶುಕ್ರವಾರ ಬೆಳಿಗ್ಗೆ ಸೆರೆಯಾಗಿದ್ದು, ಈಗ ಅದನ್ನು ಮೈಸೂರಿನ ಮೃಗಾಲಯದ ಪುನರ್ವಸತಿ ಕೇಂದ್ರಕ್ಕೆ ತರಲಾಗಿದೆ.
21ನೇ ದಿನ ನಡೆದ ದೀರ್ಘ ಕಾರ್ಯಾಚರಣೆಯಲ್ಲಿ ಹುಲಿಯನ್ನು ಮೊಯಾರ್ ರಸ್ತೆಯ ಬಳಿ ಸೆರೆ ಹಿಡಿಯಲಾಯಿತು. ಶುಕ್ರವಾರ ಮಧ್ಯರಾತ್ರಿ ಹುಲಿಯನ್ನು ಮೈಸೂರಿನ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ತಿಳಿಸಿದ್ದಾರೆ ಎಂದು ಆಂದೋಲನ ವರದಿ ಮಾಡಿದೆ.
ಇದುವರೆಗೂ ನಾಲ್ಕು ಮಂದಿಯನ್ನು ಕೊಂದಿರುವ ಹುಲಿ, 30 ಜಾನುವಾರುಗಳನ್ನು ತಿಂದು ಹಾಕಿತ್ತು. ಹೀಗಾಗಿ ಭಾರೀ ಆತಂಕ ಸೃಷ್ಟಿಸಿದ್ದ ಹುಲಿಯನ್ನು ಹತ್ಯೆ ಮಾಡಬೇಕು ಎಂದು ಆದೇಶ ನೀಡಲಾಗಿತ್ತು ಇದರಿಂದ ಹುಲಿಯನ್ನು ಕೊಲ್ಲಲು 10 ಮಂದಿಯ ತಂಡ ನೀಲಗಿರಿ ಜಿಲ್ಲೆಯಲ್ಲಿ ಬೀಡು ಬಿಟ್ಟಿತ್ತು. ಆದರೆ, ಹೈಕೋರ್ಟ್ ಹುಲಿ ಕೊಲ್ಲಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿತ್ತು. ಹೀಗಾಗಿ ತಮಿಳುನಾಡು ಅರಣ್ಯ ಇಲಾಖೆ, ಎಸ್ಟಿಎಫ್ ಕಾರ್ಯಾಚರಣೆ ನಡೆಸಿ ಜೀವಂತ ಸೆರೆ ಹಿಡಿದಿದೆ. ಇದರಿಂದ ನೀಲಗಿರಿ ಜಿಲ್ಲೆಯ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಹುಲಿಯನ್ನು ಅನಸ್ತೇಶಿಯಾ (ಅರಿವಳಿಕೆ) ಬಳಸಿ ಗುರುವಾರ ಸಂಜೆಯೇ ಹಿಡಿಯಲು ಯತ್ನಿಸಿದರೂತಪ್ಪಿಸಿಕೊಂಡಿತ್ತು. ಶುಕ್ರವಾರ ಮತ್ತೆ ಅರಿವಳಿಕೆ ಇಂಜಕ್ಷನ್ ಗನ್ನಿಂದ ಸಿಡಿದು ಹುಲಿಗೆ ತಾಗಿದ್ದರಿಂದ ಪ್ರಜ್ಞೆತಪ್ಪಿತು. ನಂತರ ಹುಲಿಯನ್ನು ಸೆರೆ ಹಿಡಿಯಲಾಯಿತು ಎಂದು ತಮಿಳುನಾಡು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಮಿತಿ ಮೀರಿದ್ದ ವನ್ಯಜೀವಿಗಳ ಉಪಟಳದಿಂದ ಅವುಗಳನ್ನು ರಕ್ಷಿಸಿದರೆ ಚಿಕಿತ್ಸೆ ನೀಡಿ ಉಳಿಸಿಕೊಳ್ಳಲು ದಶಕದ ಹಿಂದೆಯೇ ಕೂರ್ಗಳ್ಳಿಯಲ್ಲಿ ಪುನರ್ವಸತಿ ಕೇಂದ್ರ ಆರಂಭಿಸಲಾಗಿದೆ. ಇಲ್ಲಿ ಕರ್ನಾಟಕದ ಸೆರೆ ಹಿಡಿದ 8 ಹುಲಿಗಳಿದ್ದು, ಹೊರ ರಾಜ್ಯದಿಂದ ತಂದಿರುವುದು ಇದೇ ಮೊದಲು. ಚೆನ್ನೈಗೆ ಸಾಗಿಸಲು ದೂರವಾಗುವ ಕಾರಣದಿಂದ ಅಲ್ಲಿನ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ವಿನಂತಿಸಿಕೊಂಡ ಮೇರೆಗೆ ಮೈಸೂರು ಕೇಂದ್ರಕ್ಕೆ ತರಲು ಒಪ್ಪಲಾಯಿತು ಎಂದು ವರದಿ ಹೇಳಿದೆ..


ನಿಮ್ಮ ಕಾಮೆಂಟ್ ಬರೆಯಿರಿ