ತಿರುವನಂತರಪುರಂ: ತಿರುವನಂತಪುರಂ: ಕೇರಳದಲ್ಲಿ ಭಾರೀ ಮಳೆಯಿಂದಾಗಿ ಹಲವೆಡೆ ಪ್ರವಾಹ ಮತ್ತು ಭೂಕುಸಿತ ಉಂಟಾಗಿ ಕನಿಷ್ಠ 18 ಜನರು ಮೃತಪಟ್ಟಿದ್ದಾರೆ ಮತ್ತು ಹತ್ತಾರು ಮಂದಿ ನಾಪತ್ತೆಯಾಗಿದ್ದಾರೆ. 11 ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF), ಎರಡು ಸೇನೆ ಮತ್ತು ಎರಡು ರಕ್ಷಣಾ ಸೇವಾ ದಳ (DSC) ತಂಡಗಳನ್ನು ಒಳಗೊಂಡಂತೆ ಕೇಂದ್ರ ಪಡೆಗಳನ್ನು ರಾಜ್ಯದ ದಕ್ಷಿಣ ಮತ್ತು ಮಧ್ಯ ಭಾಗಗಳಲ್ಲಿ ನಿಯೋಜಿಸಲಾಗಿದೆ.
ಈ ನಡುವೆ ಪ್ರವಾಹದ ತೀವ್ರತೆ ವಿಡಿಯೊಗಳು ಸೋಶಿಯಲ್ ಮೀಡಿಯಾ (Social Media)ದಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೊಗಳಲ್ಲಿ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯುತ್ತಿದ್ದು, ವಾಹನ ಸವಾರರು ರಸ್ತೆ ದಾಟಲು ಪರದಾಡ ನಡೆಸುತ್ತಿದ್ದಾರೆ. ಪ್ರವಾಹದಲ್ಲಿ ಸಿಲುಕಿದ ಕೇರಳ ಸಾರಿಗೆ ಬಸ್ಸಿನಿಂದ ಪ್ರಯಾಣಿಕರು ಹರಸಾಹಸಪಟ್ಟು ಹೊರ ಬರುತ್ತಿರುವುದು ವಿಡಿಯೊದಲ್ಲಿ ಕಾಣುತ್ತದೆ. ಕೊಟ್ಟಾಯಂ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದ್ದು, ಜನರು ಕಾರನ್ನು ತಳ್ಳಿಕೊಂಡು ಬರುತ್ತಿರುವ ವಿಡಿಯೊ ವೈರಲ್ ಆಗಿದೆ.
ರಾಜ್ಯ ಸರ್ಕಾರದ ಮನವಿ ಮೇರೆಗೆ ವಾಯುಪಡೆಯ ಹೆಲಿಕಾಪ್ಟರಗಳು ಕೇರಳಕ್ಕೆ ಆಗಮಿಸಿವೆ. ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ಎನ್‍ಡಿಆರ್‍ಎಫ್ ತಂಡ ಸನ್ನದ್ಧವಾಗಿದೆ. ಈಗಾಗಲೇ 30 ಸೈನಿಕರ ತುಕಡಿಯನ್ನು ಪಾಂಗೋಡಿನಿಂದ ಕೊಟ್ಟಾಯಂ ಜಿಲ್ಲೆಯ ಕಂಜೀರಪಲ್ಲಿಗೆ ಸ್ಥಳಾಂತರಿಸಲಾಗಿದೆ. ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ 18 ಜನರು ಜನರು ಮೃತಪಟ್ಟಿದ್ದಾರೆ ಮತ್ತು ಅನೇಕರು ಕಾಣೆಯಾಗಿದ್ದಾರೆ. ಇನ್ನು ತ್ರಿಶ್ಯೂರ್ ಜಿಲ್ಲೆಯಲ್ಲಿ ಭೂ ಕುಸಿತವಾಗುತ್ತಿದೆ. ಭೂಕುಸಿತದಲ್ಲೇ ಆರು ಜನರು ಮೃತಪಟ್ಟಿದ್ದಾರೆ.
ಜನರು ನದಿ ತೀರ ಮತ್ತು ಪರ್ವತ ಪ್ರದೇಶಗಳಿಗೆ ತೆರಳದಂತೆ ಮುಖ್ಯಮಂತ್ರಿಗಳ ಕಾರ್ಯಲಯ ಸೂಚನೆ ನೀಡಿದೆ. ಈ ಸಮಯದಲ್ಲಿ ಪ್ರವಾಸಿಗರು ಸಹ ಸ್ಥಳೀಯ ಅಧಿಕಾರಿಗಳ ಮಾರ್ಗದರ್ಶನ ಇಲ್ಲದೇ ಟ್ರೆಕ್ಕಿಂಗ್ ಮಾಡದಂತೆ ಸೂಚನೆ ನೀಡಿದೆ. ಮಳೆಯ ತೀವ್ರತೆ ಕಡಿಮೆ ಆಗೋವರೆಗೂ ಸುರಕ್ಷಿತ ಸ್ಥಳದಲ್ಲಿ ಉಳಿದುಕೊಳ್ಳಬೇಕು ಮತ್ತು ಕೇರಳಕ್ಕೆ ಆಗಮಿಸುತ್ತಿರುವ ಪ್ರವಾಸಿಗರು ತಮ್ಮ ಪ್ರಯಾಣ ಮುಂದೂಡಿ ಎಂದು ಸಲಹೆ ನೀಡಲಾಗಿದೆ. ಅರಬ್ಬಿ ಸಮುದ್ರದಲ್ಲಿ ಅಲೆಗಳ ವೇಗ ಮತ್ತು ಎತ್ತರ ದೊಡ್ಡದಾಗಿದ್ದು, ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಕರಾವಳಿಯಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.
ಶಬರಿಮಲೆ ಬೆಟ್ಟದ ದೇವಸ್ಥಾನಕ್ಕೆ ತೀರ್ಥಯಾತ್ರೆ ನಿಲ್ಲಿಸಲಾಗಿದೆ ಮತ್ತು ಹೆಚ್ಚುವರಿ ಮುನ್ನೆಚ್ಚರಿಕೆಯಾಗಿ ಶಾಲಾ ಕಾಲೇಜುಗಳು ಬುಧವಾರದವರೆಗೆ ಮೂರು ದಿನಗಳ ಕಾಲ ಮುಚ್ಚುವಂತೆ ಸೂಚಿಸಿದೆ.
ಅಕ್ಟೋಬರ್ 17 ಮತ್ತು 18 (ಭಾನುವಾರ, ಸೋಮವಾರ) ಭಾರೀ ಮಳೆಯಾಗುವ ನಿರೀಕ್ಷೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಕ್ಟೋಬರ್ 19ರ ನಂತರ ಮಳೆಯ ಅಬ್ಬರ ಕ್ಷೀಣವಾಗಲಿದೆ. ಸರ್ಕಾರ ಮೀನುಗಾರರಿಗೆ ಶನಿವಾರ ಮತ್ತು ಭಾನುವಾರ ಕಡಲಿಗೆ ಇಳಿಯದಂತೆ ಸೂಚನೆ ನೀಡಿದೆ. ಗಾಳಿಯ ವೇಗ ಪ್ರತಿ ಗಂಟೆಗೆ 45-50 ಕಿ.ಮೀ ನಿಂದ 60 ಕಿ.ಮೀ.ನಷ್ಟು ಚಲಿಸಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ