ಕೋಲ್ಕತ್ತಾ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಹಿಂದುಸ್ತಾನೀ ಶಾಸ್ತ್ರೀಯ ಸಂಗೀತ ಗಾಯಕ ಉಸ್ತಾದ್ ರಶೀದ್ ಖಾನ್ ಗೆ ಕೊಲೆ ಬೆದರಿಕೆ ಮತ್ತು ಸುಲಿಗೆ ಕರೆ ಮಾಡಿದ ಇಬ್ಬರನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಇಬ್ಬರು ಆರೋಪಿಗಳು ಹೊಸದಾಗಿ ಅವರ ಬಳಿ ಸೇರಿಕೊಂಡ ಉದ್ಯೋಗಿಗಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಕೊಲೆ ಬೆದರಿಕೆ ಹಾಗೂ ಹಣ ಸುಲಿಗೆ ಕರೆ ಮಾಡಿದ ಇಬ್ಬರಲ್ಲಿ ಒಬ್ಬ ಆರೋಪಿ ಅವಿನಾಶ್ ಭಾರತಿ, ಉಸ್ತಾದ್ ರಶೀದ್ ಖಾನ್ ಅವರ ಚಾಲಕನಾಗಿದ್ದ ಮತ್ತು ಇನ್ನೊಬ್ಬ, ದೀಪಕ್ ಔಲಖ್, ಕಚೇರಿಯ ಸಹಾಯಕನಾಗಿದ್ದು, ಕೆಲವು ದಿನಗಳ ಕೆಲಸ ಮಅಡಿದ ನಂತರ ಇತ್ತೀಚಿಗೆ ಕೆಲಸ ಬಿಟ್ಟದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಔಲಖ್, ಉತ್ತರ ಪ್ರದೇಶಕ್ಕೆ ಹಿಂದಿರುಗಿದ ನಂತರ, ಇಂಟರ್ನೆಟ್ ಸಂಖ್ಯೆಗಳನ್ನು ಬಳಸಿ ರಶೀದ್ ಖಾನ್ ನಿವಾಸಕ್ಕೆ ಬೆದರಿಕೆ ಕರೆಗಳನ್ನು ಮಾಡಲು ಪ್ರಾರಂಭಿಸಿದ. ಈತ 50 ಲಕ್ಷ ರೂ.ಗಳನ್ನು ಕೇಳಿದ ನಂತರ ಆ ಮೊತ್ತವನ್ನು 20 ಲಕ್ಷಕ್ಕೆ ಇಳಿಸಿದ ಹಾಗೂ ಪಾವತಿಸದಿದ್ದರೆ ಉಸ್ತಾದ್ ರಶೀದ್ ಖಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ.
ಔಲಖ್ ಅವರಿಗೆ ತಮ್ಮ ಉದ್ಯೋಗದಾತರ ಚಲನವಲನದ ವಿವರಗಳನ್ನು ಒದಗಿಸುವ ಮೂಲಕ ಅವಿನಾಶ ಭಾರತಿ ಸಹಾಯ ಮಾಡಿದ್ದಾನೆ ಎಂದು ವರದಿಯಾಗಿದೆ. ಅಕ್ಟೋಬರ್ 9 ರಂದು ಔಲಖನನ್ನು ಬಂಧಿಸಲಾಯಿತು ಮತ್ತು ಕೋಲ್ಕತ್ತಾಕ್ಕೆ ಒಯ್ಯಲಾಯಿತು. ಇಬ್ಬರೂ ಆರೋಪಿಗಳು ಪೊಲೀಸ್ ವಶದಲ್ಲಿದ್ದಾರೆ. ತನಿಖೆ ನಡೆಯುತ್ತಿದೆ.
ಉಸ್ತಾದ್ ರಶೀದ್ ಖಾನ್ ಹಿಂದೂಸ್ತಾನಿ ಸಂಗೀತ ಸಂಪ್ರದಾಯದಲ್ಲಿ ರಾಂಪುರ-ಸಹಸ್ವಾನ್ ಘರಾಣಾಗೆ ಸೇರಿದವರು, ಮತ್ತು ಈ ಘರಾಣಾ ಸಂಸ್ಥಾಪಕ ಇನಾಯತ್ ಹುಸೇನ್ ಖಾನ್ ಅವರ ಮೊಮ್ಮಗ.
ನಿಮ್ಮ ಕಾಮೆಂಟ್ ಬರೆಯಿರಿ