ಭಾರತದ ಕ್ರಿಕೆಟ್‌ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಎರಡು ವರ್ಷಕ್ಕೆ ದ್ರಾವಿಡ್ ನೇಮಕ: ವರದಿ

ನವದೆಹಲಿ: ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ನವೆಂಬರ್ 2021 ರಿಂದ ಆರಂಭವಾಗುವ ಎರಡು ವರ್ಷಗಳ ಕಾಲ ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ದ್ರಾವಿಡ್ ಅಂತಿಮವಾಗಿ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ.. ಶುಕ್ರವಾರ ರಾತ್ರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ 14 ನೇ ಆವೃತ್ತಿಯ ಫೈನಲ್‌ನಲ್ಲಿ ಈ ಬೆಳವಣಿಗೆ ನಡೆದಿದೆ.
ರಾಹುಲ್‌ ದ್ರಾವಿಡ್‌ ರಾಷ್ಟ್ರೀಯ ತಂಡದ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲು ಸಿದ್ಧರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಶುಕ್ರವಾರ ದುಬೈ ನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದ ವೇಳೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಮತ್ತು ಖಜಾಂಚಿ ಅರುಣ್ ಧುಮಾಲ್ ಅವರು ರಾಹುಲ್ ದ್ರಾವಿಡ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ದ್ರಾವಿಡ್ ಅವರನ್ನು ಮುಖ್ಯ ಕೋಚ್ ಸ್ಥಾನಕ್ಕೆ ಒಪ್ಪಿಸಲಾಗಿದೆ ಎನ್ನಲಾಗಿದೆ.
ರಾಹುಲ್ ದ್ರಾವಿಡ್ ಅವರಿಗೆ ಈ ಮೊದಲು ಮೂರು ಬಾರಿ ಬಿಸಿಸಿಐ ಕೋಚ್ ಸ್ಥಾನದ ಆಫರ್ ನೀಡಿತ್ತು. ಆದರೆ ದ್ರಾವಿಡ್ ಅವರು ನಿರಾಕರಿಸಿದ್ದರು. ಬೆಂಗಳೂರಿನಲ್ಲಿರುವ ಕುಟುಂಬದ ಜೊತೆ ಹೆಚ್ಚಿನ ಕಾಲ ಕಳೆಯಬೇಕಾದ ಕಾರಣ ಬೆಂಗಳೂರಿನಲ್ಲಿಯೇ ಇರುವ ಎನ್ ಸಿಎ (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ) ಅಧ್ಯಕ್ಷ ಸ್ಥಾನ ಒಪ್ಪಿಕೊಂಡಿದ್ದರು.
ಬಿಸಿಸಿಐಗೆ ದ್ರಾವಿಡ್ ಯಾವಾಗಲೂ ಆದ್ಯತೆಯ ಆಯ್ಕೆಯಾಗಿದ್ದರು. ಭಾರತೀಯ ಪುರುಷರ ತಂಡದ ಮುಖ್ಯ ಕೋಚ್ ಆಗಲು ರಾಹುಲ್ ದ್ರಾವಿಡ್ ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ಎನ್ ಸಿಎ ಮುಖ್ಯಸ್ಥ ಸ್ಥಾನದಿಂದ ಶೀಘ್ರವೇ ಕೆಳಗಿಳಿಯಲಿದ್ದಾರೆ. ಪರಾಸ್ ಮಾಂಬ್ರೆ ಬೌಲಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.
ಕಳೆದ ಆಗಸ್ಟ್‌ನಲ್ಲಿ ಭಾರತದ ದ್ವಿತೀಯ ತಂಡ ಶ್ರೀಲಂಕಾಕ್ಕೆ ಪ್ರವಾಸ ಹೋಗಿದ್ದಾಗ ದ್ರಾವಿಡ್‌ ಮೊದಲ ಸಲ ಹಿರಿಯರ ತಂಡದ ಕೋಚ್‌ ಆಗಿದ್ದರು. ಆಗ ಭಾರತದ ಪ್ರಧಾನ ತರಬೇತುದಾರ ರವಿಶಾಸ್ತ್ರಿ ಭಾರತ ತಂಡದೊಂದಿಗೆ ಇಂಗ್ಲೆಂಡ್‌ ಪ್ರವಾಸದಲ್ಲಿದ್ದರು. ಟಿ20 ವಿಶ್ವಕಪ್‌ ಬಳಿಕ ರವಿಶಾಸ್ತ್ರಿ ಒಪ್ಪಂದದ ಅವಧಿ ಪೂರ್ಣಗೊಳ್ಳಲಿದೆ. ಬಿಸಿಸಿಐ ಪಂದ್ಯಾವಳಿಯನ್ನು ಒಮಾನ್ ಮತ್ತು ಯುಎಇಯಲ್ಲಿ ಆಯೋಜಿಸುತ್ತಿದೆ.ಅದರ ಬಳಿಕ ನಡೆಯುವ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಗೆ ದ್ರಾವಿಡ್ ಕೋಚ್ ಆಗುವುದು ನಿಚ್ಚಳವಾಗಿದೆ.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement