ವಿಚಿತ್ರವಾದರೂ ಸತ್ಯ: ಕೋವಿಡ್‌ ಲಸಿಕೆ ನೀಡಲು ಮನೆಗೆ ಬಂದ ಆರೋಗ್ಯ ಸಿಬ್ಬಂದಿಗೆ ನಾಗರ ಹಾವು ತೋರಿಸಿ ಹೆದರಿಸಿದ ಮಹಿಳೆ..! ವೀಕ್ಷಿಸಿ

ಅಜ್ಮೇರ್‌: ದೇಶದಲ್ಲಿ ಕೊವಿಡ್​ 19 ಲಸಿಕೆ ಅಭಿಯಾನ (Covid 19 Vaccination) ಅತ್ಯಂತ ವೇಗವಾಗಿ, ಯಶಸ್ವಿಯಾಗಿ ನಡೆಯುತ್ತಿದೆ. ಆದರೂ ಕೆಲವು ಪ್ರದೇಶಗಳ ಜನರು ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಅವರ ಮನವೊಲಿಸಿ ಕೊರೊನಾ ಲಸಿಕೆ ಹಾಕುವುದು ಆರೋಗ್ಯ ಸಿಬ್ಬಂದಿ, ಸ್ಥಳೀಯ ಆಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೆಲವೊಮ್ಮೆ ಆರೋಗ್ಯ ಸಿಬ್ಬಂದಿಗೆ ಬೆದರಿಕೆ ಹಾಕಿದ , ಹಲ್ಲೆ ನಡೆಸಿದ ಪ್ರಸಂಗಗಳೂ ನಡೆದಿವೆ. ಅಂಥದ್ದೇ ಒಂದು ಘಟನೆ ರಾಜಸ್ಥಾನದ ಅಜ್ಮೇರ್​​ನಲ್ಲಿ ನಡೆದಿದೆ.
ಇಲ್ಲಿನ ಹಳ್ಳಿಯೊಂದಕ್ಕೆ ಕೊವಿಡ್​ 19 ಲಸಿಕೆ ಹಿಡಿದು ಬಂದ ಆರೋಗ್ಯ ಸಿಬ್ಬಂದಿಯನ್ನು ಹಿರಿಯ ಮಹಿಳೆಯೊಬ್ಬರು ನಾಗರ ಹಾವು ತೋರಿಸಿ ಹೆದರಿಸಿದ್ದಾರೆ…!

ಅಜ್ಮೇರ್​ ಜಿಲ್ಲೆಯ ಪಿಸಂಗನ್​​ನ ನಾಗೇಲಾವ್ ಗ್ರಾಮದಲ್ಲಿ ಈ ವಿಚಿತ್ರ ಸನ್ನಿವೇಶ ಆರೋಗ್ಯ ಸಿಬ್ಬಂದಿಗೆ ಎದುರಾಯಿತು. ಅಲ್ಲಿ ಕಾರ್ಯಕರ್ತರು ಮನೆಮನೆಗೆ ತೆರಳಿ ಲಸಿಕೆ ನೀಡುತ್ತಿದ್ದು, ಮನೆಯೊಂದರ ಮುಂದೆ ನಿಂತ ಅವರಿಗೆ ಅಕ್ಷರಶಃ ಶಾಕ್​ ಕಾದಿತ್ತು. ಆ ಮನೆಯ ಮಹಿಳೆ ಕಮಲಾ ದೇವಿ ಕೈಯಲ್ಲೊಂದು ಚಿಕ್ಕ ಬುಟ್ಟಿ ಹಿಡಿದಿದ್ದರು..ಅದರಲ್ಲಿ ನಾಗರಹಾವು ಹೆಡೆಬಿಚ್ಚಿ ಕುಳಿತಿತ್ತು. ನನಗೆ ಲಸಿಕೆ ಬೇಡ..ಲಸಿಕೆ ಹಾಕಲು ಮುಂದೆ ಬಂದರೆ ನಿಮ್ಮ ಮೇಲೆ ಹಾವು ಬಿಡುತ್ತೇನೆ ಎಂದು ಆ ಮಹಿಳೆ ಆರೋಗ್ಯ ಕಾರ್ಯಕರ್ತರಿಗೆ ಹೆದರಿಸುತ್ತಿದ್ದರು.
ಕಮಲಾದೇವಿ ಕಲ್ಬೇಲಿಯಾ ಸಮುದಾಯಕ್ಕೆ ಸೇರಿದವರಾಗಿದ್ದು, ಹಾವು ಹಿಡಿಯುವುದು, ಅದನ್ನು ನಿಯಂತ್ರಿಸಿ, ಆಟ ಆಡಿಸುವುದು ಇವರ ಕುಲ ಕಸುಬಾಗಿದೆ. ಆದರೆ ಈ ಮಹಿಳೆ ಲಸಿಕೆಯನ್ನು ನಿರಾಕರಿಸಲು ಹಾವನ್ನು ಲಸಿಕೆ ನೀಡಲು ಬಂದ ಆರೋಗ್ಯ ಕಾರ್ಯಕರ್ತರ ವಿರುದ್ಧ ಅಸ್ತ್ರವಾಗಿ ಬಳಸಿ ಅವರನ್ನು ಹೆಸರಿಸಿದ್ದಾಳೆ. ವೈದ್ಯಕೀಯ ಸಿಬ್ಬಂದಿ ಕೊರೊನಾ ಲಸಿಕೆಯ ಮಹತ್ವ, ಅದರಿಂದ ಏನೂ ಅಪಾಯವಿಲ್ಲ ಎಂದು ಹೇಳಿ ಆಕೆಯನ್ನು ಮನವೊಲಿಸಲು ಪ್ರಯತ್ನ ಮಾಡಿದರೂ ಆಕೆ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಅವಳು ಹಾವನ್ನು ತೋರಿಸಿ ಇವರಿಗೇ ಜೀವ ಭಯ ಉಂಟಾಗುವಂತೆ ಮಾಡಿದ್ದಾಳೆ.
ಕಮಲಾದೇವಿಗೆ ಎಷ್ಟು ಹೇಳಿದರೂ ಆಕೆ ಕೇಳದೆ ಹಾವನ್ನು ತೋರಿಸಿದಾಗ ಹೆದರಿದ ವೈದ್ಯಕೀಯ ಸಿಬ್ಬಂದಿ ಸಹಾಯಕ್ಕಾಗಿ ಸ್ಥಳೀಯರನ್ನು ಕೇಳಿಕೊಂಡಿದ್ದಾರೆ. ನಂತರ ಸ್ಥಳೀಯ ಕೆಲವರು ಬಂದು ಕಮಲಾ ದೇವಿಯಲ್ಲಿ ತಿಳಿವಳಿಕೆ ಮೂಡಿಸಿದ ನಂತರ ಅವಳು ಕೊವಿಡ್​ 19 ಲಸಿಕೆ ಪಡೆದಿದ್ದಾರೆ. ಕಮಲಾ ದೇವಿ ಜತೆ ಇನ್ನೂ 20 ಮಂದಿ ತಮಗೆ ಲಸಿಕೆ ಬೇಡ ಎನ್ನುತ್ತಿದ್ದರು. ಆದರೆ ಕಮಲಾದೇವಿ ವ್ಯಾಕ್ಸಿನ್​ ಪಡೆಯುತ್ತಿದ್ದಂತೆ ಅವರೂ ಕೂಡ ತೆಗೆದುಕೊಂಡಿದ್ದಾರೆ. ಈಗ ಈ ವಿಡಿಯೋ ವೈರಲ್​ ಆಗಿದೆ.

ಪ್ರಮುಖ ಸುದ್ದಿ :-   ರಾಹುಲ್ ಗಾಂಧಿ ಸ್ಪರ್ಧೆಯ ಸಸ್ಪೆನ್ಸ್ ನಡುವೆ ಅಮೇಥಿಯಲ್ಲಿ ರಾರಾಜಿಸುತ್ತಿರುವ "ರಾಬರ್ಟ್ ವಾದ್ರಾ ಅಬ್ ಕಿ ಬಾರ್" ಪೋಸ್ಟರ್...!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement