ಚೆನ್ನೈ: 12ನೇ ತರಗತಿ ವಿದ್ಯಾರ್ಥಿಗೆ ಥಳಿಸಿದ ಹಾಗೂ ಒದ್ದ ಇಲ್ಲಿನ ಕಡಲೂರು ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಶಿಕ್ಷಕನನ್ನು ಬಂಧಿಸಲಾಗಿದೆ. ಈ ಶಿಕ್ಷಕ ವಿದ್ಯಾರ್ಥಿಗೆ ಥಳಿಸಿದ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಬಂಧಿತ ಶಿಕ್ಷಕನನ್ನು ಎಂ.ಸುಬ್ರಹ್ಮಣಿಯನ್ (56) ಎಂದು ಗುರುತಿಸಲಾಗಿದೆ. ಚಿದಂಬರಂನಲ್ಲಿರುವ ನಂದನಾರ್ ಸರ್ಕಾರಿ ಆದಿ ದ್ರಾವಿಡರ್ ಮಾಧ್ಯಮಿಕ ಶಾಲೆಯ ಭೌತಶಾಸ್ತ್ರ ಪ್ರಾಧ್ಯಾಪಕರಾದ ಅವರು 12ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಬೆತ್ತದಿಂದ ಮನಸಿಗೆ ಬಂದಂತೆ ಥಳಿಸಿ ತೊಡೆಯ ಮೇಲೆ ಒದ್ದಿದ್ದಾರೆ. ಅದೇ ಸಮಯಕ್ಕೆ ಕ್ಲಾಸ್ನಲ್ಲಿದ್ದ ಇನ್ನೊಬ್ಬ ವಿದ್ಯಾರ್ಥಿ ಅದನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ.
ಸದ್ಯ ಶಿಕ್ಷಕನ ವಿರುದ್ಧ ಪೊಲೀಸರು ಎಸ್ಸಿ/ಎಸ್ಟಿ ಕಾಯ್ದೆ 1989ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿದ್ಯಾರ್ಥಿ ಭೌತಶಾಸ್ತ್ರ ರೆಕಾರ್ಡ್ ನೋಟ್ಬುಕ್ ಸಂಗ್ರಹಿಸಲು ಅನುಮತಿ ಪಡೆದಿದ್ದ ಆದರೆ ತರಗತಿಗೆ ಬಂಕ್ ಮಾಡಿದ್ದ. ಹೀಗಾಗಿ ಕೋಪಗೊಂಡು ಹೊಡೆದಿದ್ದಾಗಿ ಆ ಶಿಕ್ಷಕ ವಿಚಾರಣೆ ವೇಳೆ ತಿಳಿಸಿದ್ದಾರೆ. ಈತ ತಾನು ತರಗತಿಗೆ ಬಂಕ್ ಮಾಡುವುದಲ್ಲದೆ, ಕಾಲೇಜಿನ ಮೂರನೇ ಫ್ಲೋರ್ಗೆ ಹೋಗಿ, ಅಲ್ಲಿನ ಏಳುಮಂದಿಯನ್ನು ಕರೆದುಕೊಂಡು ಹೋಗಿದ್ದಾನೆ. ಅದಾದ ನಂತರ ಮುಖ್ಯಶಿಕ್ಷಕರು ತರಗತಿ ಪರಿಶೀಲನೆಗೆ ಬಂದು, ಈ ವಿದ್ಯಾರ್ಥಿಗಳ ಬಗ್ಗೆ ಕೇಳಿದ್ದಾರೆ. ಆದರೆ ಉಳಿದ ವಿದ್ಯಾರ್ಥಿಗಳು ಉತ್ತರ ಕೊಡಲಿಲ್ಲ ಎಂದು ತಿಳಿಸಿದ್ದಾರೆ. ಏಳೂ ವಿದ್ಯಾರ್ಥಿಗಳನ್ನೂ ಹೊಡೆದಿದ್ದೇನೆ. ಆದರೆ ಈ ವಿದ್ಯಾರ್ಥಿ ಸುಳ್ಳು ಹೇಳಿದ್ದಾನೆ. ಉಳಿದವರು ಕೂಡ ತರಗತಿ ಬಂಕ್ ಮಾಡಲು ಕಾರಣನಾಗಿದ್ದಾನೆ. ಹಾಗಾಗಿ ಸ್ವಲ್ಪ ಜಾಸ್ತಿ ಪ್ರಮಾಣದಲ್ಲಿ ಹೊಡೆದಿದ್ದೇನೆ ಎಂದು ಶಿಕ್ಷಕರು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ