ಮಳೆ ಆರ್ಭಟಕ್ಕೆ ನಲುಗಿದ ಕೇರಳ: ಸಾವಿನ ಸಂಖ್ಯೆ 26ಕ್ಕೆ ಏರಿಕೆ

ತಿರುವನಂತಪುರ: ಮಳೆರಾಯನ ಆರ್ಭಟಕ್ಕೆ ನೆರೆಯ ಕೇರಳ ಮತ್ತೊಮ್ಮೆ ಬೆಚ್ಚಿಬಿದ್ದಿದೆ. ಗುಡ್ಡ ಕುಸಿತ, ಪ್ರವಾಹದಿಂದಾಗಿ ಕೇರಳದವರ ಬದುಕು ಸರ್ವನಾಶವಾಗುತ್ತಿದ್ದು, ಮಳೆ ಸಂಬಂಧದ ಘಟನೆಗಳಲ್ಲಿ ಇದುವರೆಗೆ 26 ಮಂದಿ ಮೃತಪಟ್ಟಿದ್ದಾರೆ.

ಕೊಟ್ಟಾಯಂನ ಕೊಟ್ಟಿಕ್ಕಲ್ ಒಂದರಲ್ಲೇ 11 ಜನ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಪೀರ್‍ಮೆಡ್ ಎಂಬಲ್ಲಿ ಅತ್ಯಧಿಕ 24 ಸೆಂಟಿ ಮೀಟರ್ ಮಳೆಯಾಗಿದ್ದರೆ ಚೆರುತೋನಿ, ಚೆಲಕುಡಿ ಮತ್ತು ಪೂಂಜಾರ್‍ ನಲ್ಲಿ 14 ಸೆಂಟಿ ಮೀಟಿರ್ ಮಳೆಯಾಗಿದೆ. ಇಡುಕ್ಕಿ – 168 ಎಂಎಂ, ಕೊಟ್ಟಾಯಂ – 165 ಎಂಎಂ, ಕಣ್ಣೂರು – 140 ಎಂಎಂ, ಎರ್ನಾಕುಲಂ – 129 ಎಂಎಂ ಹಾಗೂ ಪಲಕ್ಕಾಡ್ – 124 ಮಿಲಿ ಮೀಟರ್ ಮಳೆಯಾಗಿದೆ. ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ಪಟ್ಟಣಂತಿಟ್ಟ, ತ್ರಿಶ್ಶೂರ್ ಜಿಲ್ಲೆಗಳಲ್ಲಿ ಇನ್ನೆರಡು ದಿನ ರೆಡ್ ಅಲರ್ಟ್ ಘೋಷಿಸಲಾಗಿದೆ. ಹಾಗೂ ತಿರುವನಂತಪುರ, ವಯನಾಡ್ ಸೇರಿ 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಇದೆ.
ಇಡುಕ್ಕಿಯಲ್ಲಿ 3 ದೇಹಗಳು ತೇಲಿ ಬಂದಿವೆ. ಡ್ಯಾಮ್‍ಗಳು ಭರ್ತಿಯಾಗಿದ್ದು, ಅಪಾರ ಪ್ರಮಾಣದ ನೀರನ್ನು ಹರಿಬಿಡಲಾಗಿದೆ. ನಾಳೆ, ನಾಡಿದ್ದು ಶಬರಿಮಲೆ ಯಾತ್ರೆ ನಿಷೇಧಿಸಲಾಗಿದೆ. ಅಕ್ಟೋಬರ್ 20 ರವರೆಗೆ ಶಾಲಾ-ಕಾಲೇಜ್‍ಗಳಿಗೆ ರಜೆ ಘೋಷಿಸಲಾಗಿದೆ. ರಕ್ಷಣಾ ಕಾರ್ಯದಲ್ಲಿ ಎನ್‍ಡಿಆರ್‍ಎಫ್, ಸೇನೆ ಕೈ ಜೋಡಿಸಿದೆ.
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆ ಪ್ರಧಾನಿ ಮೋದಿ ದೂರವಾಣಿ ಕರೆ ಮಾಡಿ‌ ಮಾತನಾಡಿದ್ದು, ಎಲ್ಲ ರೀತಿಯ ಸಹಾಯದ ಭರವಸೆ ನೀಡಿದ್ದಾರೆ. ಪರಿಸ್ಥಿತಿಯನ್ನು ಗಮನಿಸುತ್ತಿರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಮೋದಿ, ರಾಹುಲ್ ಗಾಂಧಿಯಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಉತ್ತರ ನೀಡಲು ಚುನಾವಣಾ ಆಯೋಗ ಸೂಚನೆ

1 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement